ರೈತರ ದನಿಯಾಗಿ ಕೆಲಸ ಮಾಡಲು ಗೆಲ್ಲಿಸಿ

ತ್ಯಾಗರ್ತಿ: ರೈತರಿಗೆ ಮಾರಕವಾದ ಕಾನೂನು ತಿದ್ದುಪಡಿ ಆಗಬೇಕಿದ್ದು ರೈತರ ದನಿಯಾಗಿ ಕೆಲಸ ಮಾಡಲು ಸಂಸತ್​ಗೆ ಆಯ್ಕೆ ಬಯಸುತ್ತಿದ್ದೇನೆ. ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಮಧುಬಂಗಾರಪ್ಪ ಹೇಳಿದರು.

ತ್ಯಾಗರ್ತಿಯಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿ, ಬಿಜೆಪಿ ಇಂದು ಬ್ಯುಸಿನೆಸ್ ಜನತಾ ಪಾರ್ಟಿಯಾಗಿದ್ದು ನಮ್ಮ ಸರ್ಕಾರದ ಯೋಜನೆಗಳನ್ನು ಉದ್ಘಾಟಿಸಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದೆ. ಬಿಜೆಪಿಯವರು ರೈತರಿಗೆ ವಿಶ್ವಾಸದ್ರೋಹ ಎಸಗಿದ್ದು ಅರಣ್ಯಹಕ್ಕು ಪತ್ರ ವಿಚಾರದಲ್ಲಿ ರೈತರ ಪರವಾಗಿ ಸಂಸತ್​ನಲ್ಲಿ ದನಿ ಎತ್ತಲಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಈ ಭಾಗಕ್ಕೆ ಮಾರಕ. ಕೇಂದ್ರ ಸರ್ಕಾರ ಇದರ ಬಗ್ಗೆ ಗಮನಹರಿಸಲಿಲ್ಲ ಎಂದು ದೂರಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ನಮ್ಮ ಸರ್ಕಾರ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದರೂ ಜನರ ವಿಶ್ವಾಸ ಸಂಪಾದನೆ ಮಾಡಲು ವಿಫಲರಾಗಿದ್ದರಿಂದ ಸೋಲು ಅನುಭವಿಸಬೇಕಾಯಿತು. ಜನರ ನಡುವೆ ಅನೇಕ ಸವಾಲುಗಳಿವೆ. ಅವುಗಳ ಪರಿಹಾರ ಆಗಬೇಕಾದರೆ ಮತ್ತೊಮ್ಮೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಯಡಿಯೂರಪ್ಪ ರೈತರ ಪರವಾಗಿ ಕೆಲಸ ಮಾಡಿದ್ದರೆ ಮೋದಿ ಹೆಸರಲ್ಲಿ ಏಕೆ ಮತಯಾಚನೆ ಮಾಡುತ್ತಾರೆ? ಸಾಗರ ತಾಲೂಕಿನ ಗಡಿಭಾಗದ ರೈತರ ಜಮೀನನ್ನು ಮುಳುಗಡೆ ಮಾಡಿ ಕಲ್ಲೊಡ್ಡು ಡ್ಯಾಂ ನಿರ್ವಿುಸಲು ಹೊರಟಿದ್ದು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಜಿಪಂ ಸದಸ್ಯೆ ಅನಿತಾಕುಮಾರಿ ಮಾತನಾಡಿ, ಹಿಂದುತ್ವದ ಬಾವುಟ ಹಿಡಿದು ರೈತರ ಮಕ್ಕಳು, ಯುವಕರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಪರಿಸ್ಥಿತಿಯ ಅರಿವು ಅವರಿಗಿಲ್ಲ. ಎಲ್ಲರನ್ನೂ ಸರಿದಾರಿಯಲ್ಲಿ ಕರೆದುಕೊಂಡು ಹೋಗಲು ಸಮರ್ಥ ನಾಯಕತ್ವ ಅಗತ್ಯ. ಭೂಮಿ ವಿಚಾರದಲ್ಲಿ ಈ ಭಾಗದ ರೈತರು ಸಂಕಷ್ಟ ಎದುರಿಸುತ್ತಿದ್ದು ಮಧು ಬಂಗಾರಪ್ಪ ರೈತರ ಪರವಾಗಿ ನಿಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಆರ್.ಜಯಂತ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ, ತ್ಯಾಗರ್ತಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣ, ಮುಖಂಡರಾದ ಹೊನಗೋಡು ರತ್ನಾಕರ್, ಹಮೀದ್​ಖಾನ್, ಗುರುನಾಥ ಗೌಡ ವೀರಾಪುರ, ಗೋಪಿನಾಥ ತ್ಯಾಗರ್ತಿ, ಕಲ್ಸೆ ಚಂದ್ರಪ್ಪ, ಭರ್ಮಪ್ಪ, ಪ್ರೇಮ್ಾಗರ್, ಹೊಳೆಯಪ್ಪ ಇತರರಿದ್ದರು.