ರೈತರ, ಇಲಾಖೆ ಜಗಳದಲ್ಲಿ ಮರಗಳು ಬಲಿ

ನಾಲತವಾಡ: ಸಮೀಪದ ಬಾಚಿಹಾಳ-ಸಿದ್ದಾಪುರ ಗ್ರಾಮದ ಮೀನುಮರಿ ಪಾಲನಾ ಕೇಂದ್ರಕ್ಕೆ ಸಂಬಂಧಿಸಿದ ಜಮೀನನ್ನು ಜೆಸಿಬಿ ಮೂಲಕ ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

1983ರಲ್ಲೇ 7 ಜನ ರೈತರಿಂದ ಅಂದಿನ ಅಂದಾಜು ಬೆಲೆ ನೀಡಿ ಕೆಬಿಜೆಎನ್‌ಎಲ್ ಇಲಾಖೆ 72 ಎಕರೆ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ. ನಂತರ ಖಜಾನೆಯಿಂದ ನೇರವಾಗಿ ಜಮೀನು ಮಾಲೀಕರಿಗೆ ನಿಗದಿತ ಬೆಲೆ ನೀಡಲಾಗಿದೆ. ದಾಖಲೆ ಗಳನ್ನು ಇಲಾಖೆ ತನ್ನಲ್ಲಿರಿಸಿಕೊಂಡಿದ್ದರೂ ರೈತರು ಪ್ರಾಣ ಹೋದರೂ ಜಮೀನು ಬಿಡಲ್ಲ ಎಂದು ಈಗ ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. 35 ವರ್ಷಗಳ ಹಿಂದೆ ನಮ್ಮ ಜಮೀನನ್ನು ಸ್ವಾಧೀನಪಡಿಸಿಕೊಂಡು ಸೂಕ್ತ ಬೆಲೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಆ ಜಮೀನಿನ ದುಡ್ಡು ನಮ್ಮ ಕೈಸೇರಿಲ್ಲ. ಇಲಾಖೆಯವರು ನಮ್ಮನ್ನು ತಪ್ಪು ದಾರಿಗೆಳೆ ಯುತ್ತಿ ದ್ದಾರೆ. ಸದ್ಯ ನಮ್ಮ ಜಮೀನು ನಮಗೆ ಬೇಕು ಅಥವಾ ಪ್ರಸ್ತುತ ಜಮೀನು ಬೆಲೆ ನೀಡಬೇಕು ಎಂದು ರೈತರು ಹಠ ಹಿಡಿದಿದ್ದಾರೆ.

ವಿಚಾರಣೆಗೆ ತಡೆಯಾಜ್ಞೆ: ಜಮೀನು ಸ್ವಾಧೀನ ಸಂಬಂಧ ರೈತರು ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅದಕ್ಕೆ ಪ್ರತಿಯಾಗಿ ಇಲಾಖೆಯವರು ಅಂದೇ ಸೂಕ್ತ ಬೆಲೆ ಘೋಷಿಸಿ ಹಣ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿ ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ತಂದಿದ್ದಾರೆ.

ಪ್ರಕರಣ ದಾಖಲು: ಒತ್ತುವರಿ ಮಾಡಿಕೊಳ್ಳುತ್ತಿರುವ ರೈತರ ವಿರುದ್ಧ ಈಗಾಗಲೇ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ನಿಯಮದ ಪ್ರಕಾರ ಜಮೀನು ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ನಮ್ಮಲ್ಲಿ ಸಾಕಷ್ಟು ದಾಖಲೆಗಳಿವೆ. ಮುಂದೆ ಜಮೀನು ಒತ್ತುವರಿ ತಂಟೆಗೆ ಬಾರದಂತೆ ಪ್ರಕರಣ ದಾಖಲಿಸುತ್ತೇವೆ ಎಂದು ಮೀನುಮರಿ ಪಾಲನಾ ಇಲಾಖೆ ರೈತರಿಗೆ ಎಚ್ಚರಿಕೆ ನೀಡಿದೆ.

ಕಷ್ಟ ಪಟ್ಟು ಬೆಳೆಸಿದ ಮರಗಳನ್ನು ರೈತರು ನೆಲಸಮಗೊಳಿಸಿದ್ದಾರೆ. ಅವುಗಳಲ್ಲಿ ಕೆಲ ಮರಗಳು ಮಾಯವಾಗಿವೆ. ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ.
– ಎಸ್.ಜಿ. ಬಿರಾದಾರ ಸಹಾಯಕ ನಿರ್ದೇಶಕರು, ಮೀನುಮರಿ ಪಾಲನಾ ಕೇಂದ್ರ, ನಾರಾಯಣಪುರ

ಸರ್ಕಾರ ರೈತರಿಗೆ ಪರಿಹಾರ ನೀಡಿದ ದಾಖಲೆಗಳು ನಮ್ಮಲ್ಲಿವೆ. ರೈತರು ನಮ್ಮ ಇಲಾಖೆ ಜಮೀನನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಗುರುತಿಸಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ.
– ಎಂ.ಎಸ್.ಭಾಂಗಿ ಸಹಾಯಕ ಗ್ರೇಡ್-1 ನಿರ್ದೇಶಕರು, ಮೀನು ಮರಿ ಪಾಲನಾ ಕೇಂದ್ರ, ನಾರಾಯಣಪುರ