ಚಿತ್ರದುರ್ಗ: ಹರಿಯಾಣದ ಶಂಭು ಗಡಿಯಲ್ಲಿ ಧರಣಿ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಶಾಖೆಯ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ರೈತ ನಾಯಕ ಜಗಜಿತ್‌ಸಿಂಗ್ ದಲ್ಲೇವಾಲ ಅವರ ಜೀವ ಉಳಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಸಿಂಗ್ ಅವರು ರೈತರ ಕಣ್ಣೀರು ಕೊನೆಯಾಗಲಿ, ಇಲ್ಲ ನನ್ನ ಉಸಿರು ನಿಲ್ಲಲೆಂದು ಸತತ 48 ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರ ಆರೋಗ್ಯ ದಿನೇ ದಿನೆ ಹದಗೆಡುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತ್ವರಿತವಾಗಿ ಚರ್ಚಿಸಿ, ಅವರ ಜೀವ ಉಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಎರಡು ವರ್ಷಗಳಾದರೂ ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ನೀಡಿದ್ದ ಭರವಸೆ ಈಡೇರಿಸದೆ, ನಿರ್ಲಕ್ಷಿಸುತ್ತಾ ಬಂದಿದೆ. ಹೀಗಾಗಿ ಕಳೆದ 8 ತಿಂಗಳಿಂದ ಶಂಭು ಗಡಿಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ ಎಂದರು.
ದೇಶದಲ್ಲಿ ರೈತರಿಗೆ ಮೂಲಸೌಕರ್ಯಗಳಿಲ್ಲ. ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿಗೆ ತತ್ತರಿಸಿದ್ದಾರೆ. ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮಿನಾಥನ್ ವರದಿ ಆಧರಿಸಿ, ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಕೋರಿದರು.
ರೈತ ಮುಖಂಡರಾದ ಈಚಘಟ್ಟ ಸಿದ್ಧವೀರಪ್ಪ, ಶ್ರೀಕಂಠಮೂರ್ತಿ, ಆರ್.ಬಸವರಾಜ್, ರೆಡ್ಡಿಹಳ್ಳಿ ವೀರಣ್ಣ, ಚನ್ನಕೇಶವಮೂರ್ತಿ, ಸುರೇಶ್, ಚಂದ್ರಪ್ಪ, ಈರಣ್ಣ, ಬಸವರಾಜು, ವೆಂಕಟೇಶ್, ದೊಡ್ಡಣ್ಣ, ಮಲ್ಲೇಶ್, ರಂಗಸ್ವಾಮಿ, ಸಣ್ಣ ಪಾಲಯ್ಯ, ಟಿ.ಗಂಗಾಧರ್, ಕೆ.ಬಿ.ಪಾಲಣ್ಣ ಇತರರಿದ್ದರು.