ರೈತರು ಸಾವಯವ ಕೃಷಿ ಕೈಗೊಳ್ಳಲು ಮುಂದಾಗಿ

1 Min Read
ರೈತರು ಸಾವಯವ ಕೃಷಿ ಕೈಗೊಳ್ಳಲು ಮುಂದಾಗಿ
ಹಲ್ಯಾಳದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ರೈತ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಬ್ಬಿನ ಬೆಳೆ ವಿಚಾರ ಸಂಕಿರಣವನ್ನು ವಿಪ ಸದಸ್ಯ ಲಕ್ಷ್ಮಣ ಸವದಿ ಉದ್ಘಾಟಿಸಿದರು, ಡಾ. ಎಸ್.ಎಸ್. ನೂಲಿ, ಡಾ. ಎ.ಪಿ. ಬಿರಾದಾರ, ಡಾ. ಮಂಜುನಾಥ ಚೌರಡ್ಡಿ, ಅಶೋಕ ಪಾಟೀಲ, ಎಲ್.ಐ. ರೂಡಗಿ ಇತರರಿದ್ದರು.

ಅಥಣಿ ಗ್ರಾಮೀಣ, ಬೆಳಗಾವಿ: ರೈತರು ಸಾವಯವ ಕೃಷಿ ಕೈಗೊಳ್ಳದಿದ್ದರೆ ಮನುಕುಲಕ್ಕೆ ಸಂಕಷ್ಟ. ಆದ್ದರಿಂದ ನಾಡಿನ ಎಲ್ಲ ರೈತ ಬಾಂಧವರು ಸಾವಯವ ವ್ಯವಸಾಯ ಮಾಡಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ವಿನಂತಿಸಿದರು.

ತಾಲೂಕಿನ ಹಲ್ಯಾಳದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ರೈತ ಸಭಾಭವನದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಕೃಷಿ ಇಲಾಖೆ ವತಿಯಿಂದ ಶನಿವಾರ ಸಂಜೆ ಆಯೋಜಿಸಲಾಗಿದ್ದ ಕಬ್ಬಿನ ಬೆಳೆಯ ಕುರಿತ ರೈತರ ಬೃಹತ್ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ತಮ್ಮ ಆರ್ಥಿಕ ಸುಧಾರಣೆಯ ಜತೆಗೆ ಆರೋಗ್ಯಕರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ವಿಜ್ಞಾನಿಗಳು ಹಾಗೂ ಸಾಧಕ ರೈತರ ಮಾರ್ಗದರ್ಶನ ಪಡೆದು ತಾಲೂಕಿನ ರೈತರು ಸುಧಾರಿತ ತಳಿಯ ಕಬ್ಬು ಬೆಳೆಯಬೇಕು.

ಎಕರೆಗೆ 100 ಟನ್‌ಗಿಂತಲೂ ಹೆಚ್ಚಿನ ಇಳುವರಿ ಪಡೆಯಲು ಪ್ರಯತ್ನಿಸಬೇಕು ಎಂದರು. ಸಂಕೇಶ್ವರ ಕಬ್ಬು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಎಸ್.ಎಸ್. ನೂಲಿ ಕಬ್ಬಿನಲ್ಲಿ ಬೇಸಾಯ ಕ್ರಮಗಳ ಕುರಿತು ಮಾತನಾಡಿ, ರೈತರು ಸುಧಾರಿತ ಕಬ್ಬಿನ ತಳಿಗಳನ್ನು ಆಯ್ಕೆ ಮಾಡಬೇಕು. ಮಣ್ಣಿನ ಫಲವತ್ತತೆ ಮತ್ತು ಸಾವಯವ ಕೃಷಿ ಹೇಗೆ ಕೈಗೊಳ್ಳಬೇಕು ಎನ್ನುವುದರ ಕುರಿತು ಸವಿಸ್ತಾರವಾಗಿ ಹೇಳಿದರು.

ವಿಜಯಪುರದ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎ.ಪಿ. ಬಿರಾದಾರ, ಡಾ. ಮಂಜುನಾಥ ಚೌರಡ್ಡಿ, ಪ್ರಗತಿಪರ ರೈತ ಅಶೋಕ ಪಾಟೀಲ, ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಎಲ್.ಐ. ರೂಡಗಿ ಮಾತನಾಡಿದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಂಕರ ವಾಘಮೋಡೆ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಪಾಟೀಲ, ಬಾಬು ಗಲಗಲಿ, ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ಈರಗೌಡ ಪಾಟೀಲ, ಶ್ರೀಶೈಲ ನಾರಗೊಂಡ, ಬಾಬಾಸಾಹೇಬ ಪಾಟೀಲ, ರಾಜು ನಾಡಗೌಡ, ಜಗದೀಶ ದಳವಾಯಿ, ಲೊಕೇಶ ಪಾಟೀಲ, ಪುರಗೇಪ್ಪ ಬಾವಿ, ಶೇಖರ ನೇಮಗೌಡ ಇತರರು ಇದ್ದರು.

See also  ಪಕ್ಷ ಸಂಘಟನೆಗೆ ಮೊದಲ ಆದ್ಯತೆ
Share This Article