ರೈತರಿಗೆ 42 ಲಕ್ಷ ರೂ. ವಂಚನೆ ಆರೋಪ

ಹಾವೇರಿ: ರೈತರಿಂದ ಲಕ್ಷಾಂತರ ರೂ. ಮೌಲ್ಯದ ಮೆಕ್ಕೆಜೋಳ ಖರೀದಿಸಿದ ವ್ಯಾಪಾರಿಗಳು ರೈತರಿಗೆ ಹಣ ನೀಡದೆ ಸತಾಯಿಸುತ್ತಿರುವ ಕುರಿತು ಹಾನಗಲ್ಲ ತಾಲೂಕು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕ್ರಿಕೊಪ್ಪ ಗ್ರಾಮದ ರೈತರು ಬೆಳೆದ ಸುಮಾರು 42 ಲಕ್ಷ ರೂ. ಮೌಲ್ಯದ 220 ಟನ್ ಮೆಕ್ಕೆಜೋಳವನ್ನು ಕಳೆದ ಮೇ ತಿಂಗಳಲ್ಲಿ ದಾವಣಗೆರೆಯ ಲೋಕೇಶ ವಿರೂಪಾಕ್ಷಯ್ಯ ಹಾಗೂ ಇನ್ನಿತರ ಆರು ಜನರು ರೈತರಿಂದ ಖರೀದಿಸಿದ್ದರು. ಮೆಕ್ಕೆಜೋಳದ ಹಣವನ್ನು ಕೆಲವು ದಿನಗಳ ನಂತರ ತಲುಪಿಸುತ್ತೇನೆಂದು ಹೇಳಿ ಲಾರಿಯಲ್ಲಿ ಮೆಕ್ಕೆಜೋಳ ತೆಗೆದುಕೊಂಡು ಹೋದವರು ಮರಳಿ ಬಂದು ಹಣ ತಂದು ಕೊಟ್ಟಿಲ್ಲ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಹಣ ಕೇಳಿದರೂ ಕೊಡದೆ ಸತಾಯಿಸುತ್ತಿದ್ದಾರೆ. ಲೋಕೇಶ ಹಾಗೂ ಇತರ ಆರು ಜನರು ಶಂಕ್ರಿಕೊಪ್ಪ ಗ್ರಾಮಕ್ಕೆ ಬಂದಿರುವ ವಿಚಾರ ತಿಳಿದು, ಅವರ ಬಳಿ ಹೋಗಿ ಹಣ ಕೇಳಿದಾಗ ಅವಾಚ್ಯವಾಗಿ ಬೈದು, ಬೆದರಿಕೆ ಹಾಕಿದ್ದಾರೆ ಎಂದು ಶಂಕ್ರಿಕೊಪ್ಪ ಗ್ರಾಮದ ರೈತ ಹೇಮಣ್ಣ ವೀರಭದ್ರಪ್ಪ ಬೆಣಗೇರಿ ಮತ್ತು ಗ್ರಾಮದ ಇತರ ರೈತರು ಆಡೂರು ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *