ರೈತರಿಗೆ ಸಾಲ ಮನ್ನಾ ಸಂಶಯ ಬೇಡ

ಲಕ್ಷ್ಮೇಶ್ವರ: ದೇಶದ ಇತಿಹಾಸದಲ್ಲಿ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ. ಇದರಲ್ಲಿ ಪ್ರಧಾನಿಗೆ ರಾಜ್ಯ ಬಿಜೆಪಿ ನಾಯಕರು ಸುಳ್ಳು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಆರೋಪಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ರಾಜ್ಯದಲ್ಲಿ 6.50 ಲಕ್ಷ ರೈತರ ಮನೆಗೆ ಸಾಲ ಮನ್ನಾ ಋಣಮುಕ್ತ ಪತ್ರ ತಲುಪಿಸಲಾಗಿದೆ. ಈ ತಿಂಗಳಾಂತ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ರೈತರಿಗೆ ಋಣಮುಕ್ತ ಪತ್ರ ಸಿಗಲಿದೆ. ಸಾಲಮನ್ನಾ ವಿಷಯದಲ್ಲಿ ಮುಖ್ಯಮಂತ್ರಿಗಳು ಹಿಂದೆ ಸರಿಯಲ್ಲ. ಈ ಬಗ್ಗೆ ರೈತರಿಗೆ ಸಂಶಯಬೇಡ. ಹೊಸ ತಾಲೂಕುಗಳಿಗೆ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ. ಅನುದಾನ ಹಾಗೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತೆ ಅವರನ್ನು ಒತ್ತಾಯಿಸುತ್ತೇನೆ ಎಂದರು.

ಅಲ್ಲಿನ ಕಾರ್ಯಕರ್ತರ, ಮುಖಂಡರ ಅಭಿಪ್ರಾಯದಂತೆ ಗೌಡರ ಕುಟುಂಬದವರು ಚುನಾವಣೆಗೆ ಮುಂದಾಗಿದ್ದಾರೆ. ಇದರಲ್ಲಿ ಯಾವ ಪಕ್ಷಗಳೂ ಹೊರತಾಗಿಲ್ಲ. ಈ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಬಸವರಾಜ ಹೊರಟ್ಟಿ ತಮ್ಮ ರಾಜಕೀಯ ಗುರು. ಅವರಿಗೆ ಯಾವುದೇ ಅಧಿಕಾರ ನೀಡಿದರೂ ಅದಕ್ಕೆ ಬೆಲೆ. ಅವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಕುಮಾರಸ್ವಾಮಿ, ದೇವೇಗೌಡರಿಗೆ ಇದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಧಾರವಾಡ ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ದೇವೇಗೌಡರು ಸಮ್ಮತಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಏರ್ಪಟ್ಟರೆ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದರು.

ಜೆಡಿಎಸ್ ತಾಲೂಕಾಧ್ಯಕ್ಷ ಪದ್ಮರಾಜ ಪಾಟೀಲ, ಮುಂಡರಗಿ ತಾಲೂಕಾಧ್ಯಕ್ಷ ಅಶೋಕ ತ್ಯಾಮನವರ, ಎಪಿಎಸಿ ಸದಸ್ಯ ಶಿವಪ್ಪ ಲಮಾಣಿ, ಪುರಸಭೆ ಸದಸ್ಯರಾದ ಪ್ರವೀಣ ಬಾಳಿಕಾಯಿ, ಮುಸ್ತಾಕಮ್ಮದ್ ಶಿರಹಟ್ಟಿ, ಚಂದ್ರಶೇಖೃ ಹೊಸಳ್ಳಿಮಠ, ಮಲ್ಲಿಕಾರ್ಜುನ ದೊಡ್ಡಮನಿ, ಅಬ್ದುಲ್ ಕಾರಡಗಿ, ಜಾಕೀರಹುಸೇನ ಹವಾಲ್ದಾರ, ಮಹಾಂತೇಶ ರಗಟಿ, ಅಕ್ಬರ ಯಾದಗಿರಿ, ವಿಜಯ ಅಲೂರ, ಸುರೇಶ ಹಲವಾಗಲಿ, ಎಂ.ಕೆ. ತಳಗಡಿ, ನೂರ್​ಅಹ್ಮದ್ ಗೋನಾಳ, ಶಂಕರ ಬಾಳಿಕಾಯಿ, ಇತರರಿದ್ದರು.

ಮಹದಾಯಿ ವಿಷಯದಲ್ಲಿ ಬಿಜೆಪಿ ರಾಜಕಾರಣ ಬಿಟ್ಟು ಕೇಂದ್ರದಿಂದ ಅಧಿಸೂಚನೆ ಹೊರಡಿಸಬೇಕು. ಯೋಜನೆ ಅನುಷ್ಠಾನಕ್ಕೆ ರಾಜ್ಯ ಅನುದಾನ ನೀಡಲು ಸಿದ್ಧವಿದೆ. ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು.

| ಎನ್.ಎಚ್. ಕೋನರಡ್ಡಿ, ಸಿಎಂ ರಾಜಕೀಯ ಸಂಸದೀಯ ಕಾರ್ಯದರ್ಶಿ