ರೈತರಿಗೆ ಯೋಜನೆ ಮಾಹಿತಿ ನೀಡಿ

ಯಲ್ಲಾಪುರ: ಕೃಷಿ ಲಾಭದಾಯಕವಲ್ಲ ಎಂಬ ಮನೋಭಾವ ಯುವಕರಲ್ಲಿ ಬೆಳೆದಿದೆ. ಹಾಗಾಗಿ ಯುವಕರು ನಗರಗಳತ್ತ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಜೀವ ತುಂಬುವ ಅಗತ್ಯವಿದೆ ಎಂದು ಜಿಪಂ ಸದಸ್ಯೆ ಶ್ರುತಿ ಹೆಗಡೆ ಹೇಳಿದರು.

ಪಟ್ಟಣದ ಗಾಂಧಿ ಕುಟೀರದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳ ಆಶ್ರಯದಲ್ಲಿ ಯಲ್ಲಾಪುರ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನದ ಸಮಾರೋಪ ಹಾಗೂ ಕೃಷಿ ವಸ್ತು ಪ್ರದರ್ಶನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸರ್ಕಾರಗಳು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ರೈತರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಅಧಿಕಾರಿಗಳು ರೈತರಿಗೆ ಕೃಷಿ ಯೋಜನೆಗಳ ಕುರಿತು ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದರು.

ತಾಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಮಹಾಲಕ್ಷ್ಮೀ ಶಿವರಾಮ ಭಟ್ಟ ಚಿನ್ಮನೆ ಅವರನ್ನು ಗೌರವಿಸಲಾಯಿತು. ಕೃಷಿ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಲಾಯಿತು. ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು.

ತಾಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಇಒ ನಾರಾಯಣ ಹೆಗಡೆ, ಕೃಷಿ ತಜ್ಞರಾದ ಡಾ.ಸತೀಶ ಗುನಗಾ, ಎಂ.ವಿ. ಹೆಗಡೆ ಕುಮಟಾ, ಸಹಾಯಕ ತೋಟಗಾರಿಕಾ ನಿರ್ದೇಶಕ ಶಂಕರಪ್ಪ ಅರಿಕಟ್ಟಿ, ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಗೋವಿಂದ ಭಟ್ಟ, ಸಹಾಯಕ ಕೃಷಿ ನಿರ್ದೇಶಕ ವಿ.ಜಿ. ಹೆಗಡೆ ಉಪಸ್ಥಿತರಿದ್ದರು. ಎಂ.ಜಿ. ಭಟ್ಟ ನಿರ್ವಹಿಸಿದರು. ಸಹಾಯಕ ಕೃಷಿ ಅಧಿಕಾರಿ ಟಿ.ಎಸ್. ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃಷಿಕ ಪ್ರಶಸ್ತಿ ಪ್ರದಾನ
ಎಸ್.ಎಸ್. ಭಟ್ಟ ಶಿರನಾಲಾ, ನಾಗೇಶ ಭಟ್ಟ ಚಿಮನಳ್ಳಿ, ಗಣಪತಿ ಭಾಗ್ವತ ಭಾಗ್ವತರಮನೆ, ರಾಮಕೃಷ್ಣ ಗಾಂವ್ಕಾರ ಆನಗೋಡ, ಆರ್.ಜಿ. ಭಟ್ಟ ಬೆಳಸೂರು ಅವರಿಗೆ ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *