ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸಿ

ಲಕ್ಷೆ್ಮೕಶ್ವರ: ರೈತರಿಗೆ ಸಣ್ಣ ಹಳಕಿನ ಸಮರ್ಪಕ ಯೂರಿಯಾ ಗೊಬ್ಬರ ಪೂರೈಕೆಯಾಗಬೇಕು, ಪ್ರಸಕ್ತ ಮುಂಗಾರಿನಲ್ಲಿ ತೇವಾಂಶ ಹೆಚ್ಚಳದಿಂದ ಹಾನಿಗೀಡಾದ ಬೆಳೆಗಳಿಗೆ ಪರಿಹಾರ ಕಲ್ಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಲಕ್ಷೆ್ಮೕಶ್ವರ ತಾಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ನೇತೃತ್ವದಲ್ಲಿ ರೈತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಶಿಗ್ಲಿ ನಾಕಾದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತರು ಘೊಷಣೆ ಕೂಗುತ್ತ ತಹಸೀಲ್ದಾರ್ ಕಚೇರಿಗೆ ತೆರಳಿದರು.

ವೇದಿಕೆಯ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿ, 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪ್ರಮುಖ ಬೆಳೆಗಳಾದ ಗೋವಿನಜೋಳ, ಹತ್ತಿ, ಶೇಂಗಾ ರೋಗಕ್ಕೆ ತುತ್ತಾಗಿವೆ. ರೈತರು ಬೆಳೆಯನ್ನು ಹರಗಿ ಜಮೀನು ಸ್ವಚ್ಛಗೊಳಿಸುತ್ತಿದ್ದಾರೆ. ಇದರಿಂದ ರೈತರಿಗೆ ಅಪಾರ ಹಾನಿಯಾಗಿದೆ. ಆದ್ದರಿಂದ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರಧನ ದೊರಕಿಸಿಕೊಡಬೇಕು.

ಸದ್ಯದ ಸ್ಥಿತಿಯಲ್ಲಿ ಯೂರಿಯಾ ಗೊಬ್ಬರದ ಅವಶ್ಯಕತೆ ಹೆಚ್ಚಿದೆ. ಪರಿಸ್ಥಿತಿಯ ಲಾಭ ಪಡೆಯಲು ಗೊಬ್ಬರ ಕಂಪನಿ ಮತ್ತು ವ್ಯಾಪಾರಸ್ಥರು ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕುತ್ತಿದ್ದಾರೆ. ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಿಂದ ಬಹಳಷ್ಟು ರೈತರು ವಂಚಿತರಾಗುತ್ತಿದ್ದಾರೆ. ಎಲ್ಲ ರೈತರಿಗೂ ಸಾಲಮನ್ನಾದ ಲಾಭ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಲಕ್ಷೆ್ಮೕಶ್ವರ ತಾಲೂಕು ಕೇಂದ್ರ ಉದ್ಘಾಟನೆಯಾಗಿ ಒಂದುವರೆ ವರ್ಷ ಕಳೆದರೂ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಶೀಘ್ರ ಎಲ್ಲ ಕಚೇರಿಗಳನ್ನು ಪ್ರಾರಂಭಿಸಬೇಕು. ಬೇಡಿಕೆಗಳು ಈಡೇರದಿದ್ದರೆ ಆ. 17ರಂದು ತಾಲೂಕಿನ ರೈತರೊಡಗೂಡಿ ಬಂದ್ ಕರೆ ನೀಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಕಂದಾಯ ಇಲಾಖೆಯ ಸಿಬ್ಬಂದಿ ರೇಣುಕಾ ಶಿರಹಟ್ಟಿ ಸ್ವೀಕರಿಸಿದರು.

ಮುಖಂಡರಾದ ಪದ್ಮರಾಜ ಪಾಟೀಲ, ಶಿವಾನಂದ ಲಿಂಗಶೆಟ್ಟಿ, ಶಂಕರಗೌಡ ಪಾಟೀಲ, ಶೇಖಪ್ಪ ಉಮಚಗಿ, ಅನಿಲ ಮುಳಗುಂದ, ಚಂದ್ರು ಹಂಪಣ್ಣವರ, ನಾಗರಾಜ ಕುಂದಗೋಳ, ಅಶೋಕ ತೋಟದ, ಶೇಖಪ್ಪ ಬಾಳಿಕಾಯಿ, ಸೋಮಣ್ಣ ಉಮಚಗಿ, ಸೋಮಶೇಖರಗೌಡ ಪಾಟೀಲ, ಈರಣ್ಣ ವಡಕಣ್ಣವರ, ಬಸವರಾಜ ಕರೆತ್ತಿನ, ಮರಿಗೌಡ ಪಾಟೀಲ, ಟಾಕಪ್ಪ ಸಾತಪುತೆ, ಮಲ್ಲೇಶಪ್ಪ ನಾಗನೂರ, ಪಿ.ಜಿ. ಹಿರೇಮಠ, ಕರೆಪ್ಪ ಹುರಕನವರ, ಬಸವಣ್ಣೆಪ್ಪ ಉಮಚಗಿ, ಸೋಮಣ್ಣ ಚಂದರಗಿ ಇತರರು ಇದ್ದರು.