ರೈತರಿಗೆ ಬರ ಪರಿಹಾರ ನೀಡಿ

ಮುಳಬಾಗಿಲು: ಬರದಿಂದ ನಷ್ಟ ಹೊಂದಿರುವ ಎಕರೆ ಜಮೀನಿಗೆ 50 ಸಾವಿರ ರೂ. ಪರಿಹಾರದ ಜತೆಗೆ ಪಂಚಾಯಿತಿಗೊಂದು ಗೋಶಾಲೆ ತೆರೆಯಬೇಕು ಎಂದು ಸೋಮವಾರ ಟಿಎಪಿಸಿಎಂಎಸ್ ಮುಂಭಾಗದ ಹನುಮಾನ್ ವೃತ್ತದಲ್ಲಿ ರೈತ ಸಂಘ ಪುಟ್ಟಣ್ಣಯ್ಯ ಬಣದಿಂದ ಒಣಗಿದ ಜೋಳದೊಂದಿಗೆ ಮಾನವ ಸರಪಳಿ ನಿರ್ವಿುಸಿ ರಸ್ತೆ ತಡೆದು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಬರಪೀಡಿತ ತಾಲೂಕು ಎಂದು ಘೊಷಣೆಗಷ್ಟೇ ಸೀಮಿತವಾಗಿದೆ. ಯಾವುದೇ ಬರನಿರ್ವಹಣೆ ಕಾರ್ಯಕ್ರಮ ಜಾರಿಯಾಗಿಲ್ಲ. ಕುಡಿಯಲು ನೀರಿಲ್ಲ. ಹಾಲು, ರೇಷ್ಮೆ ಬೆಲೆ ಕುಸಿತದ ಜತೆಗೆ ಟೊಮ್ಯಾಟೊ, ಕ್ಯಾಪ್ಸಿಕಂ ಬೆಳೆಗೆ ವೈರಸ್ ರೋಗದಿಂದ ತತ್ತರಿಸಿದ್ದಾರೆ. ವ್ಯವಸಾಯವನ್ನೇ ನಂಬಿದ್ದ ರೈತನ ಬದುಕು ಬೀದಿಗೆ ಬಂದಿದೆ. ಚುನಾವಣೆ ಮುಗಿದು 10 ತಿಂಗಳಾದರೂ ತಾಲೂಕಿನ ಸಮಸ್ಯೆ ನೀಗಿಸಲು ಶಾಸಕರು ಮೌನವಹಿಸಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ಫಾರುಕ್​ಪಾಷಾ ಮಾತನಾಡಿ, ತೀವ್ರ ಸಂಕಷ್ಟದಲ್ಲಿರುವ ರೈತರ ಕುಟುಂಬ ನಿರ್ವಹಣೆಗೆ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ 10 ಸಾವಿರ ರೈತ ವೇತನ ನೀಡಿ ಸಂಕಷ್ಟದಲ್ಲಿರುವ ಅನ್ನದಾತನ ನೆರವಿಗೆ ಬರಬೇಕು. ಇಲ್ಲವಾದರೆ ಜಾನುವಾರು ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿ ಉಪತಹಸೀಲ್ದಾರ್ ಕೆ.ಎನ್.ವೆಂಕಟೇಶಯ್ಯಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ವಿಜಯ್ಪಾಲ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರ್ ಹರಿಕುಮಾರ್, ತಾ.ಅಧ್ಯಕ್ಷ ಪ್ರಭಾಕರ್ ಮುಖಂಡರಾದ ರಂಜಿತ್​ಕುಮಾರ್, ಆನಂದಸಾಗರ್, ಛಲಪತಿ, ಅಣ್ಣಿಹಳ್ಳಿ ನಾಗರಾಜ್, ಶ್ರೀನಿವಾಸ್, ಸುಮನ್, ಅಹಮದ್​ಪಾಷಾ, ಮುನಿರಾಜು ಇದ್ದರು.