ರೈತರಿಗೆ ಆತಂಕ ತಂದ ಕೈಗಾರಿಕಾ ವಲಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ 2031ರ ಮಾಸ್ಟರ್ ಪ್ಲಾನ್ ರೂಪಿಸಿರುವ ನಗರ ಅಭಿವೃದ್ಧಿ ಪ್ರಾಧಿಕಾರವು ತಾಲೂಕಿನ ಹಸಿರು ಪ್ರದೇಶ ನಂದಿ ಸಮೀಪದಲ್ಲೇ ಕೈಗಾರಿಕಾ ಪ್ರದೇಶವನ್ನು ಗುರುತಿಸಿರುವುದರಿಂದ ರೈತರಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಪ್ರಸ್ತುತ ಯೋಜನೆ ನಕ್ಷೆ ಪ್ರಕಾರ ನಂದಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರಿಂದ ಯಲುವಹಳ್ಳಿ, ದೇವಿಶೆಟ್ಟಹಳ್ಳಿ, ಕುಪ್ಪಹಳ್ಳಿ, ಚದಲಪುರ ಸುತ್ತಲಿನ ನೂರಾರು ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಮೀಸಲಿಡಲಾಗಿದೆ. ಇನ್ನೇನು ಇದಕ್ಕೆ ಅಂತಿಮವಾಗಿ ಅನುಮೋದನೆ ಸಿಗಲಿದೆ. ಇದಕ್ಕೆ ಮಾ.25ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಇದರ ನಡುವೆ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ನೆಪದಲ್ಲಿ ಕೃಷಿ ಭೂಮಿ ಕಿತ್ತುಕೊಳ್ಳಲಾಗುತ್ತಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.

ರೈತರ ಆಕ್ರೋಶಕ್ಕೆ ಕಾರಣವೇನು?: ಪ್ರಸ್ತುತ ಗುರುತಿಸಿರುವ ಕೈಗಾರಿಕಾ ಪ್ರದೇಶವು ನಂದಿ ಗಿರಿಧಾಮದ ಹಸಿರು ವಲಯದಿಂದ 2-3 ಕಿ.ಮೀ. ದೂರದಲ್ಲಿದೆ. ಇದರ ನಡುವೆ ಕೇಂದ್ರ ಪುರಾತತ್ವ ಇಲಾಖೆ ಗುರುತಿಸಿರುವ ಸಂರಕ್ಷಿತ ಸ್ಮಾರಕವಾದ ನಂದಿಯ ಭೋಗನಂದೀಶ್ವರಸ್ವಾಮಿ ದೇವಾಲಯ ಇದೆ. ಇದರ ಸುತ್ತಲಿನ 300ಮೀ. ದೂರದಲ್ಲಿ ಯಾವುದೇ ಹೊಸ ಕಟ್ಟಡ ನಿರ್ವಣಕ್ಕೆ ಅವಕಾಶ ನೀಡುತ್ತಿಲ್ಲ. ಇನ್ನು ಇಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸುತ್ತಲಿನ ಗ್ರಾಮಗಳ ನೂರಾರು ರೈತರು ಕೃಷಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹೂವು, ಹಣ್ಣು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಹೀಗಿರುವಾಗ ಇಲ್ಲಿ ಕೈಗಾರಿಕಾ ಪ್ರದೇಶವನ್ನು ಗುರುತಿಸಿರುವುದು ಸರಿಯಲ್ಲ. ಕೃಷಿ ಚಟುವಟಿಕೆಗೆ ಪೆಟ್ಟು ಬೀಳುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಹಿಂದೆ ಹೆದ್ದಾರಿಗಾಗಿ ಬೀದಿಪಾಲಾಗಿದ್ದರು: ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 7ರ ವಿಸ್ತರಣೆ ಮತ್ತು ಬೈಪಾಸ್ ರಸ್ತೆ ನಿರ್ವಣಕ್ಕೆ ಭೂಮಿಯನ್ನು ಕಳೆದುಕೊಂಡ ಅನೇಕ ರೈತರು ಇದೀಗ ಕೂಲಿ ಕಾರ್ವಿುಕರಾಗಿದ್ದಾರೆ.

2007ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಮಾರು 491 ರೈತರಿಂದ ಬರೋಬ್ಬರಿ 613 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಈ ವೇಳೆ ಭೂ ಪರಿಹಾರ ತಾರತಮ್ಯ ವಿರೋಧಿಸಿ ರೈತರು ಹೋರಾಟ ನಡೆಸಿ ಹಣ ಪಡೆದುಕೊಳ್ಳಬೇಕಾಯಿತು. ಒಂದು ಎಕರೆಗೆ ಗರಿಷ್ಠ 20 ಲಕ್ಷ ರೂ. ನೀಡಲಾಯಿತು. ಆದರೆ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆಯಿದೆ. ರಿಯಲ್ ಎಸ್ಟೇಟ್ ಲೆಕ್ಕಾಚಾರದ ಪ್ರಕಾರ ಒಂದು ಎಕರೆಗೆ ಕನಿಷ್ಠ ಒಂದು ಕೋಟಿ ರೂ. ಕೇಳಲಾಗುತ್ತಿದೆ. ಇದರ ನಡುವೆ ಸರ್ಕಾರ ನೀಡಿದ ಅಲ್ಪ ಪರಿಹಾರಕ್ಕೆ ಹೊಸದಾಗಿ ಭೂಮಿ ಖರೀದಿಸಲಾಗದೆ ಅನೇಕ ರೈತರು ಅಂಗಡಿ, ಹೋಟೆಲ್, ವಿವಿಧ ಉದ್ಯಮದ ಮೇಲೆ ಬಂಡವಾಳ ಹೂಡಿ ನಷ್ಟಕ್ಕೊಳಗಾದರು. ಮಕ್ಕಳ ಮದುವೆ, ಮೋಜು ಮಸ್ತಿಗಾಗಿ ಹಣ ಖರ್ಚು ಮಾಡಿದರು. ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬೀದಿಪಾಲಾಗಿದ್ದರು. ಹಿಂದೆ ಇಲ್ಲಿ ಭೂ ಮಾಲೀಕರಾಗಿದ್ದವರು ಇದೀಗ ಕೂಲಿಗೆ ದುಡಿಯುತ್ತಿದ್ದಾರೆ. ಇದರ ನಡುವೆ ಕೈಗಾರಿಕಾ ಪ್ರದೇಶ ಎಂಬ ಪೆಡಂಬೂತವು ಮತ್ತೆ ರೈತರನ್ನು ಕಾಡುತ್ತಿದೆ.