ರೈತರಿಗಾಗಿ ಎಲ್ಲ ಸ್ವಾಮೀಜಿಗಳು ಒಂದಾಗಲಿ

ಶಿರಸಿ: ಕೃಷಿಕರ ಶ್ರೇಯೋಭಿವೃದ್ಧಿಗಾಗಿ ಲಿಂಗಾಯತ ಮತ್ತು ಬ್ರಾಹ್ಮಣ ಸಮಾಜದ ಸ್ವಾಮೀಜಿಗಳು ಒಂದಾಗಬೇಕು. ಇದು ಇಂದಿನ ಅಗತ್ಯ ಎಂದು ಹೊಸಪೇಟೆಯ ಕೊಟ್ಟೂರೇಶ್ವರ ಸ್ವಾಮಿ ಸಂಸ್ಥಾನದ ಜಗದ್ಗುರು ಡಾ. ಸಂಗನ ಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಆಯೋಜಿಸಲಾದ 12ನೇ ಕೃಷಿ ಜಯಂತಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ರೈತರಿಗೆ ಬೇಕಾಗಿರುವುದು ಬೆಳೆದ ಬೆಳೆಗೆ ಯೋಗ್ಯ ಬೆಲೆ ಮತ್ತು ಸೂಕ್ತ ಮಾರುಕಟ್ಟೆಯೇ ಹೊರತೂ ಸಾಲ ಮನ್ನಾವಲ್ಲ. ರೈತರು ಬಿತ್ತನೆ ಮಾಡಿದಾಗಲೇ ಬೆಳೆಗಳಿಗೆ ಖರೀದಿಯ ಬೆಲೆ ನಿಗದಿಪಡಿಸಬೇಕು. ರಾಜ್ಯದಲ್ಲಿ ಮೆಕ್ಕೆ ಜೋಳವನ್ನು ಪ್ರತಿ ಕ್ವಿಂಟಾಲ್​ಗೆ 1400 ರೂ.ನಲ್ಲಿ ರೈತರು ಕಳೆದ ವರ್ಷ ಮಾರಾಟ ಮಾಡಿದ್ದಾರೆ. ಈ ರೀತಿ ಬೆಲೆ ಸಿಕ್ಕರೆ ರೈತರಿಗೆ ಉತ್ತೇಜನ ಎಲ್ಲಿ ಸಿಗಲು ಸಾಧ್ಯ? ಸಾಲ ಮನ್ನಾಕ್ಕೆ ಬಳಸುವ ಹಣವನ್ನು ಈ ಹೊಸ ಪ್ರಯೋಗಕ್ಕೆ ಬಳಸುವುದು ಸೂಕ್ತ’ ಎಂದರು.

ಎಲ್ಲಿಯವರೆಗೆ ರೈತರ ಆದಾಯ ಹೆಚ್ಚುವುದಿಲ್ಲವೋ ಅಲ್ಲಿಯವರೆಗೆ ದೇಶದ ಪ್ರಗತಿ ಸಾಧ್ಯವಿಲ್ಲ. ಕೃಷಿ ಲಾಭದಾಯಕವಲ್ಲ ಎಂಬ ಮನೋಭಾವ ಸಹ ಯುವ ಜನತೆಯಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ತಜ್ಞರ ಜೊತೆ ರ್ಚಚಿಸಿ ಕೃಷಿಕರ ಆದಾಯ ಹೆಚ್ಚಿಸುವ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ‘ಜನಸಂಖ್ಯೆ ಇಂದು ವೇಗವಾಗಿ ಬೆಳೆಯುತ್ತಿದೆ. ಈ ಪ್ರಮಾಣದಲ್ಲಿ ಆಹಾರೋತ್ಪನ್ನಗಳು ಬೆಳೆಯದಿದ್ದರೆ ಸಮಸ್ಯೆ ಆಗಲಿದೆ. ಆದರೆ, ಕೃಷಿ ಕ್ಷೇತ್ರದೆಡೆ ಸಾರ್ವಜನಿಕರ ನಿರಾಸಕ್ತಿ ಜಾಸ್ತಿಯಾಗುತ್ತಿದೆ. ಒಂದೆಡೆ ಕೃಷಿ ಭೂಮಿ ಬೇರೆ ಕಾರ್ಯಗಳಿಗೆ ಬಳಕೆಯಾಗುತ್ತಿದ್ದರೆ ಇನ್ನೊಂದೆಡೆ ಇರುವ ಭೂಮಿಯನ್ನು ಬಿಟ್ಟು ಯುವಜನತೆ ಮಹಾನಗರದತ್ತ ಸಾಗುತ್ತಿದ್ದಾರೆ ಎಂದು ಹೇಳಿದರು.

ನೀರು, ಗಾಳಿ ಮತ್ತು ಜಲ ಶುದ್ಧವಾಗಿದ್ದರೆ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ. ನಮ್ಮ ಭೂಮಿ ಕೇವಲ ಮಣ್ಣಿನ ಮುದ್ದೆಯಲ್ಲ. ಅದು ದೇವತೆಯಾಗಿ ನಾವು ಇಷ್ಟ ಪಟ್ಟ ಬೆಳೆ ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಶುದ್ಧ ಗಾಳಿ ಮತ್ತು ನೀರನ್ನು ನಾವು ಕಾಯ್ದುಕೊಂಡರೆ ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಂ. ಕೆ. ನಾಯಕ ಮಾತನಾಡಿ, ‘ದೇಶದಲ್ಲಿ 778 ಮಿಲಿಯನ್ ಟನ್ ಆಹಾರ ಬೆಳೆ ಉತ್ಪಾದನೆಯಾಗುತ್ತಿದ್ದು, ಇದು ಸ್ವಾತಂತ್ರ್ಯಾಪೂರ್ವಕ್ಕಿಂತ 5 ಪಟ್ಟು ಜಾಸ್ತಿಯಾಗಿದೆ. ಹಾಲು ಉತ್ಪಾದನೆ 9 ಪಟ್ಟು ಜಾಸ್ತಿ ಆಗಿದೆ. ಆದರೆ, ಆಹಾರದಲ್ಲಿ ಪೋಷಕಾಂಶದ ಅಭದ್ರತೆ ಕಾಡುತ್ತಿದೆ. ಅತಿ ರಾಸಾಯನಿಕ ಬಳಕೆಯಿಂದಾಗಿ ಮಕ್ಕಳ ಬೆಳವಣಿಗೆ ಸೂಕ್ತವಾಗಿ ಆಗುತ್ತಿಲ್ಲ’ ಎಂದರು.

ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ನ್ಯಾಯಾಲಯದಲ್ಲಿ ಇನ್ನೂ ಹಾಗೇ ಇದೆ. ಅಡಕೆ ಹಾನಿಕಾರಕ ಅಲ್ಲ ಎಂದು ಕೇಂದ್ರ ಸರ್ಕಾರಕ್ಕೆ ನಮ್ಮ ವಿಶ್ವ ವಿದ್ಯಾಲಯದಿಂದ ವರದಿ ನೀಡಿದ್ದೇವೆ. ಅಡಕೆಯನ್ನು ಇಲಿಗಳಿಗೆ ವರ್ಷಗಳ ಕಾಲ ಆಹಾರವಾಗಿ ನೀಡಿ, ಅವು ಆರೋಗ್ಯವಾಗಿರುವ ವರದಿಯನ್ನು ನಾವು ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಬಾಗಲಕೋಟ ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿ ಡಾ. ಕೆ.ಎಂ. ಇಂದಿರೇಶ, ನಿವೃತ್ತ ಸಿಬಿಐ ಅಧಿಕಾರಿ ಶಿವಾನಂದ ದೀಕ್ಷಿತ, ವಿ.ಎನ್. ಹೆಗಡೆ ಇತರರಿದ್ದರು.

ಯಂತ್ರೋಪಕರಣಗಳ ಆಕರ್ಷಣೆ

ಕೃಷಿ ಜಯಂತಿಯಲ್ಲಿ ಕೃಷಿ ಬಳಕೆಯ ನೂತನ ಯಂತ್ರೋಪಕರಣಗಳು, ಹೊಸ ತಂತ್ರಜ್ಞಾನಗಳು ರೈತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಅಡಕೆ ಸುಲಿಯುವ ಯಂತ್ರಗಳು, ಕೃಷಿ ಪಂಪ್​ಸೆಟ್​ಗಳು, ಕಳೆ ಕೀಳುವ ನವೀನ ಮಾದರಿಯ ಯಂತ್ರಗಳನ್ನು ಒಳಗೊಂಡಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮಾರಾಟಗಾರರು ಕೃಷಿಕರಿಗೆ ಮಾಹಿತಿ ನೀಡಿದರು. ಇವುಗಳ ಜೊತೆ ವಿವಿಧ ಇಲಾಖೆಗಳು ಮಳಿಗೆ ತೆರೆದು ತಮ್ಮ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮಕ್ಕಳಿಂದ ಕೃಷಿ ವಿಜ್ಞಾನ ವಸ್ತು ಪ್ರದರ್ಶನ ಕೃಷಿ ಜಯಂತಿಯ ಇನ್ನೊಂದು ಆಕರ್ಷಣೆಯಾಯಿತು. ವಿದ್ಯಾರ್ಥಿಗಳೇ ಸಿದ್ಧಪಡಿಸಿದ ತಂತ್ರಜ್ಞಾನದ ಮಾದರಿಯನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದರು. ಹನಿ ನೀರಾವರಿಯ ತಂತ್ರಜ್ಞಾನಗಳು, ಕಾಂಪೋಸ್ಟ್ ತಯಾರಿಕೆ, ಹುಲ್ಲು ಕತ್ತರಿಸುವ ಯಂತ್ರ, ಅಡಕೆ ಸಂಗ್ರಹಿಸುವ ಸರಳ ಮಾದರಿಗಳನ್ನು ಒಳಗೊಂಡಂತೆ 29 ಮಾಡೆಲ್​ಗಳನ್ನು ಪ್ರದರ್ಶಿಸಿದರು. ಶಿಕ್ಷಕರಾದ ಡಿ. ಪಿ. ಹೆಗಡೆ ಹಾಗೂ ಜಯರಾಮ ಭಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಸ್ಪರ್ಧೆಯ ಫಲಿತಾಂಶ

ಅಂಗನವಾಡಿ ಮಕ್ಕಳಿಗಾಗಿ ತರಕಾರಿ ಗುರುತಿಸುವ ಸ್ಪರ್ಧೆಯಲ್ಲಿ ಪ್ರತೀಕ ವಿನಾಯಕ ಹೆಗಡೆ ಮೊದಲ ಸ್ಥಾನ, ಪ್ರಣವ ನರಸಿಂಹ ಹೆಗಡೆ ಧೂಪದಹೊಂಡ ಎರಡನೇ ಸ್ಥಾನ, ಪ್ರಣವ ಲಕ್ಷ್ಮೀಕಾಂತ ಹೆಗೆಡೆ ನೀರ್ನಳ್ಳಿ ಮೂರನೇ ಸ್ಥಾನ ಪಡೆದರು. ಕಾಳು, ಬೀಜ ಗುರುತಿಸುವ ಸ್ಪರ್ಧೆಯಲ್ಲಿ ತನುಶ್ರೀ ನರಸಿಂಹ ಜೋಶಿ ಮೊದಲ ಸ್ಥಾನ, ಮಾನ್ಯ ಕೃಷ್ಣಮೂರ್ತಿ ಭಟ್ಟ ಯಲೂಗಾರ ಎರಡನೇ ಸ್ಥಾನ, ಶ್ರೇಯಸ್ ಹೆಗಡೆ ದಂಟಕಲ್ ಮೂರನೇ ಸ್ಥಾನ ಪಡೆದರು. ಸಸ್ಯ ಎಲೆಗಳನ್ನು ಗುರುತಿಸುವ ಸ್ಪರ್ಧೆಯಲ್ಲಿ ಸಿಂಧು ಹೆಗಡೆ ಕಾನಗೋಡ ಮೊದಲ ಸ್ಥಾನ, ಸುಖಿತಾ ವೆಂಕಟ್ರಮಣ ಜೋಶಿ 2ನೇ ಮತ್ತು ವೆಂಕಟ್ರಮಣ ಗೋವಿಂದ ಶಾಸ್ತ್ರೀ 3ನೇ ಸ್ಥಾನ ಪಡೆದುಕೊಂಡರು.

Leave a Reply

Your email address will not be published. Required fields are marked *