More

  ರೈತರಿಂದ ಉಪವಾಸ ಸತ್ಯಾಗ್ರಹ

  ಧಾರವಾಡ: ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೊಷಣೆ ಮಾಡುವಂತೆ ಆಗ್ರಹಿಸಿ ರೈತ ಸೇನಾ ಕರ್ನಾಟಕದ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಬುಧವಾರದಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

  2 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಯಾವುದೇ ಸೂಕ್ತ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ. ಬಸವರಾಜ ಲಕ್ಕಣ್ಣವರ, ರವಿಗೌಡ ಪಾಟೀಲ, ಸಿದ್ದಪ್ಪ ಹಡಪದ ಹಾಗೂ ಅರ್ಜುನ ಮಾನೆ ಸತ್ಯಾಗ್ರಹ ಆರಂಭಿಸಿದ್ದಾರೆ.

  ರೈತರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲಾಗುತ್ತದೆ. ಹೀಗಾಗಿ ಪ್ರತಿಭಟನೆ ಕೈ ಬಿಡುವಂತೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದರೂ ರೈತರು ಪಟ್ಟು ಬಿಡಲಿಲ್ಲ. ಭರವಸೆ ನೀಡಿದರೆ ಸಾಲದು. ಪರಿಹಾರವಾದ ನಂತರದಲ್ಲೇ ಪ್ರತಿಭಟನೆ ಹಿಂಪಡೆಯುವುದಾಗಿ ಹೇಳಿದರು. ಮಧ್ಯಾಹ್ನದ ನಂತರ ವೈದ್ಯರು ಸ್ಥಳಕ್ಕೆ ಆಗಮಿಸಿ ಉಪವಾಸ ನಿರತರ ಆರೋಗ್ಯ ತಪಾಸಣೆ ನಡೆಸಿದರು.

  ನಂತರ ಧರಣಿ ನಿರತರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ‘ಸರ್ಕಾರ ತುರ್ತಾಗಿ ಬೇಡಿಕೆ ಈಡೇರಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಹೇಳಲಾಗಿದೆ. ನಾನೂ ಈ ಕುರಿತು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುತ್ತೇನೆ. ಇದಲ್ಲದೆ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಜೊತೆಗೆ ಸಹ ಚರ್ಚೆ ನಡೆಸಿ, ಖರೀದಿ ಕೇಂದ್ರಗಳನ್ನು ತೆರೆಯುವಂತೆ ಮನವಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

  ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ, ಎಸ್.ಬಿ. ಜೋಗಣ್ಣವರ, ಗಂಗಣ್ಣ ಈರೇಶನವರ, ರುದ್ರಪ್ಪ ಕುಂದಗೋಳ, ಗುರು ರಾಯನಗೌಡರ, ಮುತ್ತಣ್ಣ ಪಾಟೀಲ, ಗಂಗಾಧರ ಧರೆಣ್ಣವರ, ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts