ರೈತನ ಮನೆ ಜಪ್ತಿಗೆ ರೈತ ಸಂಘ ವಿರೋಧ

ಶಿವಮೊಗ್ಗ: ಸಾಲ ಕಟ್ಟದ ರೈತರೊಬ್ಬರ ಮನೆಯನ್ನು ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬ್ಯಾಂಕಿನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಡಿಕೆ ಚೀಲೂರಿನ ಮಹೇಶ್ವರಪ್ಪ ಅವರು ಹೊಳಲೂರು ಗ್ರಾಮದ ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ 1.68 ಲಕ್ಷ ರೂ. ಸಾಲ ಪಡೆದಿದ್ದರು. ಅರ್ಧ ಎಕರೆ ಜಮೀನು ಹೊಂದಿರುವ ಕುಟುಂಬದವರು ಕೂಲಿ ಜೀವನ ಸಾಗಿಸಿ 38 ಸಾವಿರ ರೂ. ಜಮಾ ಮಾಡಿದ್ದಾರೆ. ಮಹೇಶ್ವರಪ್ಪ ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಕಾರಣದಿಂದ ಬಾಕಿ ಹಣ ಪಾವತಿಸಿರಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಮಾ. 15ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಬ್ಯಾಂಕ್​ನಿಂದ ಬೀಗ ಹಾಕಿ ಮನೆ ಸದಸ್ಯರು ಪ್ರವೇಶಿಸದಂತೆ ಮಾಡಿದ್ದಾರೆ. ವಾಸ ಮಾಡಲು ಅವಕಾಶ ನೀಡದೆ ಕೃಷಿ ಕುಟಂಬಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಬ್ಯಾಂಕ್ ಅಧಿಕಾರಿಗಳು ಕೂಡಲೆ ಬೀಗ ತೆಗೆದು ಕುಟುಂಬ ಸದಸ್ಯರು ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಎನ್.ಶಿವಮೂರ್ತಿ, ಕೆ.ರಾಘವೇಂದ್ರ, ಪಿ.ಶೇಖರಪ್ಪ, ಪಿ.ಡಿ.ಮಂಜಪ್ಪ, ಈ.ಬಿ.ಜಗದೀಶ್ ಮತ್ತಿತರರು ಇದ್ದರು.