ರೈತನ ಚಿತ್ತ ವರುಣ ದೇವನತ್ತ

ಸವಣೂರ:ತಾಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಜಮೀನನ್ನು ಬಿತ್ತನೆಗೆ ಹದ ಮಾಡಿ ಮಳೆರಾಯನತ್ತ ಮುಖಮಾಡಿ ನಿತ್ಯ ಕಾಯುವಂಥ ಸ್ಥಿತಿ ನಿರ್ವಣವಾಗಿದೆ.

ಕಳೆದ ವರ್ಷ ವಾಡಿಕೆ ಮಳೆ ಆಗಿತ್ತು. ಆದರೆ, ಪ್ರಸಕ್ತ ವರ್ಷ ತಾಲೂಕಿನಲ್ಲಿ 228 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇದುವರೆಗೂ ಕೇವಲ ಶೇ. 28.81 ಮಿಮೀ ಮಳೆಯಾಗಿದೆ. ಜೂನ್ ತಿಂಗಳಲ್ಲಿ 91 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ಕೇವಲ 27.68 ಮಿ.ಮೀ. ಮಳೆಯಾಗಿದೆ. ಇದರಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ.

ಸವಣೂರ ಹಾಗೂ ಹತ್ತಿಮತ್ತೂರ ಹೋಬಳಿ ಸೇರಿ ಏಕದಳ ಧಾನ್ಯ 14376, ದ್ವಿದಳ ಧಾನ್ಯ 1690, ಎಣ್ಣೆಕಾಳು 11766, ವಾಣಿಜ್ಯಬೆಳೆ 15450 ಸೇರಿ 43281 ಹೆಕ್ಟೇರ್ ಕೃಷಿ ಬಿತ್ತನೆ ಭೂಮಿ ಹೊಂದಿದೆ. ಸಹಾಯಕ ಕೃಷಿ ಇಲಾಖೆ ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಉಪಕರಣ, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಂಗ್ರಹಿಸಲಾಗಿದೆ. ಮುಂಗಾರು ಹಂಗಾಮಿಗಾಗಿ ತಾಲೂಕಿನ ಸವಣೂರ, ತವರಮೆಳ್ಳಿಹಳ್ಳಿ, ಹುರಳೀಕುಪ್ಪಿ, ಹತ್ತಿಮತ್ತೂರ, ಯಲವಿಗಿ ಹಾಗೂ ಕಡಕೋಳ, ಚಿಕ್ಕಮರಳಿಹಳ್ಳಿ ಗ್ರಾಮಗಳಲ್ಲಿ ರೈತ ಸಂರ್ಪಕ ಕೇಂದ್ರದಲ್ಲಿ ರೈತರ ಬೇಡಿಕೆಯ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ.

ಹತ್ತಿಮತ್ತೂರ ಹೋಬಳಿಯ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಅಲ್ಪ ಮಳೆಯಾಗಿರುವ ಕಾರಣ ಆ ಭಾಗದಲ್ಲಿ ರೈತರು ಹೆಸರು, ಹತ್ತಿ ಬಿತ್ತನೆಗೆ ಮುಂದಾಗಿದ್ದಾರೆ.

ತಾಲೂಕಿನ 35 ಖಾಸಗಿ ಮಾರಾಟಗಾರರು, 18 ಸ್ವಸಹಾಯ ಸಂಘಗಳು, 1 ತಾಲೂಕು ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಸೇರಿ ಒಟ್ಟು 54 ಮಾರಾಟ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ರೈತರು ಗುರುತಿನ ಚೀಟಿಯೊಂದಿಗೆ ಹೆಬ್ಬೆರಳಿನ ಗುರುತು ನೀಡಿ ಎಂಆರ್​ಪಿ ದರದಲ್ಲಿ ರಸಗೊಬ್ಬರ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ರೈತರು ಅನಧಿಕೃತ ಖಾಸಗಿ ವ್ಯಕ್ತಿಗಳಿಂದ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಖರೀದಿಗೆ ಮುಂದಾಗಬಾರದು. ಅಂತಹ ಪ್ರಕರಣಗಳು ಕಂಡುಬಂದರೆ ಕೃಷಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಿದ್ದಾರೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಬೇಡಿಕೆ ಹಾಗೂ ದಾಸ್ತಾನು: (ಕ್ವಿಂಟಾಲ್​ಗಳಲ್ಲಿ)
ಹೈಬ್ರಿಡ್ ಜೋಳ ಬೇಡಿಕೆ 30, ದಾಸ್ತಾನು, 7.80, ಗೋವಿನ ಜೋಳ ಬೇಡಿಕೆ 900, ದಾಸ್ತಾನು 510.70, ತೊಗರಿ ಬೇಡಿಕೆ 170, ದಾಸ್ತಾನು 64.60, ಅಲಸಂದಿ ಬೇಡಿಕೆ 1 , ದಾಸ್ತಾನು 3.60, ಹೆಸರು ಬೇಡಿಕೆ 51.40, ದಾಸ್ತಾನು 47.40, ಸೋಯಾಬಿನ್ ಬೇಡಿಕೆ 1000, ದಾಸ್ತಾನು 410, ಶೇಂಗಾ ಬೇಡಿಕೆ 700, ದಾಸ್ತಾನು 250.

ಗೊಬ್ಬರ ದಾಸ್ತಾನು:
ಯೂರಿಯಾ 430 , ಡಿಎಪಿ 1300, ಪೋಟ್ಯಾಷ್ 330 ಹಾಗೂ ಕಾಂಪ್ಲೆಕ್ಸ್ 1050 ಸೇರಿ ಒಟ್ಟು 3110 ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ.

ಸರ್ಕಾರ ಘೊಷಿಸುವ ಯೋಜನೆಗಳು ರೈತರಿಗೆ ಸಮರ್ಪಕವಾಗಿ ಮುಟ್ಟುತ್ತಿಲ್ಲ. ಬೆಳೆವಿಮೆ, ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ಸೇರಿ ಸರ್ಕಾರದ ಯೋಜನೆಗಳು ಕೇವಲ ಯೋಜನೆಗಳಾಗಿವೆ. ರೈತರ ಸಾಲ ಮನ್ನಾ ಕುರಿತು ಸೃಷ್ಟಿಯಾಗಿರುವ ಗೊಂದಲವನ್ನು ಸರಿಪಡಿಸಿ, ಪ್ರತಿ ಬೆಳೆಗೆ ಬೆಲೆ ನಿಗದಿ ಪಡಿಸುವಂತಾಗಬೇಕು. ಪ್ರಸಕ್ತ ಸಾಲಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನಲೆಯಲ್ಲಿ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಅವಶ್ಯವಾಗಿರುವ ಮಾರ್ಗದರ್ಶನವನ್ನು ಕೃಷಿ ಇಲಾಖೆ ನೀಡಬೇಕು.
| ರಮೇಶ ಅರಗೋಳ, ಮಂತ್ರೋಡಿ ಗ್ರಾಮದ ರೈತ

ನಿರೀಕ್ಷೆಗೆ ತಕ್ಕಂತೆ ಮಳೆಯಾಗದೆ ಬಿತ್ತನೆ ತಡವಾಗಿದೆ. ತಾಲೂಕಿನಲ್ಲಿ ಇದುವರೆಗೂ ಕೇವಲ ಶೇ. 10 ರಷ್ಟು ಮಾತ್ರ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದೆ. ಈ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ರೈತರಲ್ಲಿ ಜಾಗೃತಿ ಮೂಡಿಸಲಾಗುವುದು.
| ಪ್ರದೀಪ ಕಿವಟೆ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಸವಣೂರ

Leave a Reply

Your email address will not be published. Required fields are marked *