ರೈತನಿಗೆ ಜಮೀನಿನಲ್ಲಿ ಸಿಕ್ತು ವಜ್ರ!

ಕರ್ನಲ್: ಆಂಧ್ರಪ್ರದೇಶದ ಕರ್ನಲ್ ಜಿಲ್ಲೆಯಲ್ಲಿ ರೈತನೊಬ್ಬನಿಗೆ ಜಮೀನಿನಲ್ಲಿ ವಜ್ರದ ಹರಳು ಸಿಕ್ಕಿದ್ದು, ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾನೆ. ಕರ್ನಲ್​ನ ಗೊಲ್ವಾನೆಪಲ್ಲಿ ಗ್ರಾಮದ ರೈತ ಜಮೀನಿನಲ್ಲಿ ಉಳುಮೆ ಕೆಲಸ ಮಾಡುತ್ತಿದ್ದಾಗ ವಜ್ರದ ಹರಳು ಸಿಕ್ಕಿದೆ. ಆತ ಇದನ್ನು ಸ್ಥಳೀಯ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ವ್ಯಾಪಾರಿ ರೈತನಿಗೆ 13.5 ಲಕ್ಷ ರೂ. ಹಣ ಹಾಗೂ 5 ತೊಲ ಬಂಗಾರ ನೀಡಿದ್ದಾನೆ. ಆದರೆ ಅಸಲಿಗೆ ವಜ್ರದ ಬೆಲೆ ಸುಮಾರು 60 ಲಕ್ಷ ರೂ. ಎನ್ನಲಾಗಿದೆ. ವಜ್ರದ ಬಣ್ಣ ಮತ್ತು ಗಾತ್ರದ ಬಗ್ಗೆ ಮಾಹಿತಿ ದೊರೆತಿಲ್ಲವಾದರೂ ರೈತ ರಾತ್ರೋರಾತ್ರಿ ಲಕ್ಷಾಧೀಶನಾದ ಸುದ್ದಿ ಊರೆಲ್ಲ ಹರಡಿದೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎರಡು ತಿಂಗಳ ಅಂತರದಲ್ಲಿ ವಜ್ರ ಸಿಕ್ಕ ಎರಡನೇ ಪ್ರಕ ರಣ ಇದಾಗಿದ್ದು, ಕಳೆದ ಜೂನ್ 12ರಂದು ಕುರಿಗಾಯಿಯೊಬ್ಬನಿಗೆ 8 ಕ್ಯಾರೆಟ್ ವಜ್ರ ಸಿಕ್ಕಿತ್ತು. ಆತ ಅದನ್ನು 20 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದು, ಅದರ ಅಸಲಿ ಬೆಲೆ ಸುಮಾರು 50 ಲಕ್ಷ ರೂ. ಎನ್ನಲಾಗಿದೆ.

ಮುಂಗಾರಿನಲ್ಲಿ ವಜ್ರಕ್ಕಾಗಿ ಶೋಧ

ಕರ್ನಲ್ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ವಜ್ರದ ನಿಕ್ಷೇಪಗಳಿವೆ ಎನ್ನಲಾಗಿದೆ. ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಮಳೆಯ ರಭಸಕ್ಕೆ ಕೊಚ್ಚಿಹೋದ ಮಣ್ಣಿನ ಜತೆಯಲ್ಲಿ ಈ ವಜ್ರಗಳು ಭೂಮಿ ಮೇಲಕ್ಕೆ ಬರುತ್ತವೆ. ಪ್ರತಿ ವರ್ಷ ಅನೇಕರಿಗೆ ಇಲ್ಲಿ ವಜ್ರದ ಹರಳುಗಳು ದೊರೆತಿವೆ. ಅಲ್ಲದೇ ವಜ್ರಗಳನ್ನು ಹುಡುಕುವುದಕ್ಕಾಗಿಯೇ ವಿವಿಧೆಡೆಯಿಂದ ಜನರು ಕರ್ನಲ್​ಗೆ ಬರುತ್ತಾರೆ.

Leave a Reply

Your email address will not be published. Required fields are marked *