ಕೆ.ಕೆಂಚಪ್ಪ, ಮೊಳಕಾಲ್ಮೂರು
ಅಪ್ಪಟ ರೇಷ್ಮೆ ಸೀರೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಮೊಳಕಾಲ್ಮೂರಲ್ಲಿ ಕೆಲವೇ ದಿನಗಳಲ್ಲಿ ನೂತನ ಸಾರಿಗೆ ಬಸ್ ನಿಲ್ದಾಣ ಲೋಕಾರ್ಪಣೆ ಆಗಲಿರುವುದು ಸಂತಸ ತರಿಸಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಒಂದು ಎಕರೆ ವಿಸ್ತೀರ್ಣದ ಹಳೆಯ ತಾಲೂಕು ಕಚೇರಿ ಮೈದಾನದಲ್ಲಿ ಸಾರಿಗೆ ಬಸ್ ನಿಲ್ದಾಣಕ್ಕಾಗಿ ಅಂದಿನ ಸಾರಿಗೆ ಸಚಿವ ಬಿ.ಶ್ರೀರಾಮುಲು 2021ರಲ್ಲಿ ಮಂಜೂರಾದ 5 ಕೋಟಿ ರೂ. ಅನುದಾನದಿಂದ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಬೆಂಗಳೂರು-ಬಳ್ಳಾರಿ ಮಾರ್ಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150.ಎ ಹಾಗೂ ಆಂಧ್ರದ ಗಡಿ ಮಾರ್ಗವಾಗಿರುವ ಕಾರಣ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುತ್ತದೆ. ವಿಶೇಷವಾಗಿ ಆಂಧ್ರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ರೇಷ್ಮೆ ಸೀರೆ ಖರೀದಿಗೆಂದು ನಿತ್ಯ ಬರುವವರ ಸಂಖ್ಯೆ ಹೆಚ್ಚಿದೆ.
ಇಷ್ಟು ದಿನ ಸಮರ್ಪಕ ಸಾರಿಗೆ ಬಸ್ಸಿನ ಸೌಕರ್ಯದ ಅಲಭ್ಯತೆಯಿಂದ ದೂರದ ಪ್ರಯಾಣಕ್ಕೆ ಬೇಸತ್ತು ದುಬಾರಿ ಹಣ ಕೊಟ್ಟು ಕಾರುಗಳಲ್ಲಿ ಬಂದು ಹೋಗುವ ಪರಿಸ್ಥಿತಿಗೆ ಜನರು ಹಿಡಿ ಶಾಪ ಹಾಕುತ್ತಿದ್ದರು. ಶೀಘ್ರದಲ್ಲಿಯೇ ಉತ್ತಮ ಪ್ರಯಾಣದ ವ್ಯವಸ್ಥೆ ಲಭ್ಯವಾಗಲಿರುವುದು ಸಂತಸ ಮೂಡಿಸಿದೆ.
ಆಂಧ್ರ-ಕರ್ನಾಟಕಕ್ಕೆ ಹೊಂದಿಕೊಂಡಿರುವ ಮೊಳಕಾಲ್ಮೂರು ಬಯಲುಸೀಮೆ ಪ್ರದೇಶ. ಆರ್ಥಿಕವಾಗಿ ಹಿಂದುಳಿದಿದ್ದರೂ, ರೇಷ್ಮೆ ಸೀರೆ ತಯಾರಿಕೆ ಮತ್ತು ಮಾರಾಟದಲ್ಲಿ ರಾಜ್ಯದ ಗಮನ ಸೆಳೆದಿದೆ. ಅದೇ ರೀತಿ ನೈಸರ್ಗಿಕವಾಗಿ ಅಡವಿಯಲ್ಲಿ ದೊರೆಯುವ ಅಚ್ಚು ಮೆಚ್ಚಿನ ಸೀತಾಫಲ ಹಣ್ಣಿಗೆ ಹೆಸರುವಾಸಿಯಾಗಿದೆ.
ನಮ್ಮೂರಲ್ಲಿ ಸಾರಿಗೆ ಬಸ್ ನಿಲ್ದಾಣದ ಕನಸು ಈಡೇರಲು ಶ್ರೀರಾಮುಲು ಅವರ ಕೃಪೆ ಇದೆ. ಇದಕ್ಕೂ ರಾಜಕೀಯ ಬಣ್ಣ ಸುತ್ತಿಕೊಂಡಿತ್ತು. ಸದ್ಯ ಕಾಮಗಾರಿ ಮುಗಿಯುವ ಹಂತದಲ್ಲಿದೆ. ರೇಷ್ಮೆ ಸೀರೆ ಖರೀದಿಗೆ ಬರುವ ಜನ ಕಾಲ ಮಿತಿಯಲ್ಲಿ ತವರೂರು ಸೇರುವ ಅವಕಾಶ ಒದಗಿಸಲಿದೆ.
ಡಾ.ಪಿ.ಎಂ.ಮಂಜುನಾಥ, ಸ್ಥಳೀಯರುಸಾರಿಗೆ ಸೌಲಭ್ಯದ ಬಗ್ಗೆ ಬಹು ದಿನಗಳ ಕೂಗಿತ್ತು. ಅದು ಸಾಕಾರಗೊಂಡಿರುವುದು ಸಂತಸ ತಂದಿದೆ. ಆದಷ್ಟು ಬೇಗ ಕಾಮಗಾರಿ ಪೂರೈಸಿ ಜನರಿಗೆ ಅನುಕೂಲ ಮಾಡಿಕೊಡಲು ಆಡಳಿತ ವ್ಯವಸ್ಥೆ ಬದ್ಧತೆ ಮೆರೆಯಬೇಕು.
ಎಸ್.ಚಂದ್ರಣ್ಣ, ರೈತ ಮುಖಂಡ.