ರೇಷ್ಮೆ ಗೂಡಿಗೆ ಸ್ಥಿರ ಧಾರಣೆಗೆ ಒತ್ತಾಯ

ಕೋಲಾರ: ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗೂಡು ಧಾರಣೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸ್ಥಿರ ಧಾರಣೆಗೆ ಸರ್ಕಾರವನ್ನು ಒತ್ತಾಯಿಸಿ ಜುಲೈ 2ರಂದು ಪ್ರತಿಭಟನೆ ನಡೆಸಲು ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘ ನಿರ್ಧರಿಸಿದೆ.

ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿನ ರೈತ ಭವನದಲ್ಲಿ ಸಂಘದ ನೇತೃತ್ವದಲ್ಲಿ ಗುರುವಾರ ಸಭೆ ಸೇರಿ ಹೋರಾಟದ ರೂಪುರೇಷೆಗಳ ಕುರಿತು ರ್ಚಚಿಸಿ ಒಮ್ಮತದ ತೀರ್ವನಕ್ಕೆ ಬರಲಾಯಿತು.

ನಗರದ ಸರ್ಕಾರಿ ಗೂಡು ಮಾರುಕಟ್ಟೆ ಮುಂಭಾಗದಿಂದ ಮೆಕ್ಕೆ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಹಾಗೂ ಎಲ್ಲ ತಾಲೂಕುಗಳಿಂದ ಹೋರಾಟಕ್ಕೆ ರೈತರನ್ನು ಸಂಘಟಿಸಲು ಉಪಸಮಿತಿ ರಚಿಸಿ ಜವಾಬ್ದಾರಿ ವಹಿಸಲಾಯಿತು.

ಸಂಘದ ಅಧ್ಯಕ್ಷ ಸಿ.ವಿ.ನಾರಾಯಣಸ್ವಾಮಿ ಮಾತನಾಡಿ, ಮಿಶ್ರತಳಿ 25ರಿಂದ 320 ರೂ. ಹಾಗೂ ಬೈವೋಲ್ಟಿನ್ 420 ರೂ. ಇದೆ. ಮಳೆಗಾಲದಲ್ಲಿ ಮತ್ತೆ ಬೆಲೆ ಕುಸಿತದ ಆತಂಕ ಕಾಡುತ್ತಿದೆ. ಹೀಗಾಗಿ ಗೂಡಿಗೆ ಸ್ಥಿರ ಬೆಲೆ ದೊರಕಿಸಿಕೊಡಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಎನ್.ಗೋಪಾಲಪ್ಪ ಮಾತನಾಡಿ, ಲೋಕಸಭೆ ಚುನಾವಣೆ ಮುನ್ನ ಜಿಲ್ಲೆಯ ರೇಷ್ಮೆ ಬೆಳೆಗಾರರ ಸಭೆ ನಡೆಸಿದ ಸಿಎಂ ಮತ್ತೆ ಸಭೆ ಕರೆಯುವ ಭರವಸೆ ನೀಡಿದ್ದರಾದರೂ ಕರೆದಿಲ್ಲವಾದ್ದರಿಂದ ಮತ್ತೊಮ್ಮೆ ಸಿಎಂ ಬಳಿ ನಿಯೋಗ ತೆರಳಬೇಕು ಎಂದರು.

ರೇಷ್ಮೆ ಬೆಳೆಗಾರ ಎಚ್.ಪಿ.ವೆಂಕಟೇಶಪ್ಪ ಮಾತನಾಡಿ, ಸ್ಥಿರ ಬೆಲೆಗೆ ಹೋರಾಟ ನಡೆಸುವಂತಾಗಿದೆ. ಕೇಂದ್ರ ಜವಳಿ ಸಚಿವರನ್ನು ಕೋಲಾರಕ್ಕೆ ಕರೆಸಿ ಅವಿಭಜಿತ ಕೋಲಾರ ಜಿಲ್ಲೆಯ ರೇಷ್ಮೆ ಬೆಳೆಗಾರರ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸುವುದಾಗಿ ಸಂಸದ ಎಸ್. ಮುನಿಸ್ವಾಮಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಸಂಘ ಗಮನಹರಿಸಬೇಕು ಎಂದು ಸಲಹೆ ನೀಡಿದರು

ಮುಖಂಡ ಎಚ್.ಬಿ. ದ್ಯಾವೀರಪ್ಪ ಮಾತನಾಡಿ, ಹಿಂದಿನ ಅವಧಿಯಲ್ಲಿ ಅಂದಿನ ಸಂಸದೆ ಕೆ.ಎಚ್.ಮುನಿಯಪ್ಪ ರೇಷ್ಮೆ ಬೆಳೆಗಾರರನ್ನು ದೆಹಲಿಗೆ ಕರೆಸಿಕೊಂಡು ಸಚಿವರ ಜತೆ ರ್ಚಚಿಸಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದರಾದರೂ ಹೋದ ದಾರಿಗೆ ಸುಂಕವಿಲ್ಲವೆಂದು ಬಂದಿದ್ದಾಯಿತು. ಫೆ.29ರಂದು ಅಖಿಲ ಭಾರತ ಮಟ್ಟದಲ್ಲಿ ನಡೆಯುವ ರೇಷ್ಮೆ ಬೆಳೆಗಾರರ ಪಾರ್ಲಿಮೆಂಟ್ ಚಲೋಗೆ ಜಿಲ್ಲೆಯಿಂದಲೂ ಒಂದಷ್ಟು ಜನ ಭಾಗವಹಿಸಲಿ, ಮೊದಲು ಜಿಲ್ಲಾಮಟ್ಟದಲ್ಲಿ ಹೋರಾಟ ರೂಪಿಸೋಣ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಪ್ರಗತಿಪರ ರೇಷ್ಮೆ ಬೆಳೆಗಾರರಾದ ಕೋಡಿಕಣ್ಣೂರು ನಾರಾಯಣಸ್ವಾಮಿ, ರಮೇಶ್ ಇತರರು ಸಲಹೆ ನೀಡಿದರು. ಸಂಘದ ವಿವಿಧ ತಾಲೂಕು ಅಧ್ಯಕ್ಷರಾದ ಆಲಹಳ್ಳಿ ವೆಂಕಟೇಶಪ್ಪ, ಚಲಪತಿ, ಮಂಜುನಾಥ್, ಈಶ್ವರಗೌಡ, ಮಾಜಿ ಅಧ್ಯಕ್ಷ ನಾಗರಾಜ್, ಅಯ್ಯಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *