ರೇಷ್ಮೆಗೂಡಿಗೆ ರಕ್ಷಣಾತ್ಮಕ ದರ ಅಂತ್ಯ

ಕೋಲಾರ: ರೇಷ್ಮೆಗೂಡು ಬೆಲೆ ಕುಸಿತಕ್ಕೆ ರಾಜ್ಯ ಸರ್ಕಾರ ಘೊಷಿಸಿದ ರಕ್ಷಣಾತ್ಮಕ ದರ ಜ.31ಕ್ಕೆ ಮುಕ್ತಾಯಗೊಳ್ಳಲಿದ್ದು, ಇದುವರೆಗೆ 610 ರೈತ ಫಲಾನುಭವಿಗಳಿಗಷ್ಟೇ ಪ್ರಯೋಜನ ಆಗುವುದರೊಂದಿಗೆ ಸರ್ಕಾರದ ನೆರವು ದೊಡ್ಡ ಪ್ರಮಾಣದಲ್ಲಿ ಸಿಗಲಿಲ್ಲ ಎಂಬ ಮಾತು ರೈತ ವಲಯದಿಂದ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ 19,935.59 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದು, 19006 ರೇಷ್ಮೆ ಬೆಳೆಗಾರರು ಜೀವನೋಪಾಯಕ್ಕೆ ರೇಷ್ಮೆ ಬೆಳೆಯನ್ನೇ ನಂಬಿದ್ದಾರೆ. ಪ್ರತಿ ವರ್ಷವೂ ಗೂಡು ಧಾರಣೆಯಲ್ಲಿನ ಏರಿಳಿತ ರೈತರನ್ನು ಕಂಗೆಡಿಸುತ್ತಿದೆ.

2018ರ ಏಪ್ರಿಲ್​ನಿಂದ ಮಿಶ್ರತಳಿ 260 ರೂ, ಬೈವೋಲ್ಟಿನ್ ಗರಿಷ್ಠ 330 ರೂ.ಗೆ ಕುಸಿದಾಗ ಸರ್ಕಾರ 3 ಹಂತದ ಗ್ರೇಡಿಂಗ್ ಆಧಾರದಲ್ಲಿ ಜು.19ರಿಂದ ಅನ್ವಯಿಸುವಂತೆ 2 ತಿಂಗಳಿಗೆ ರಕ್ಷಣಾತ್ಮಕ ದರ ನೀಡಲು ಆದೇಶಿಸಿ ನಂತರ ಅವಧಿ ವಿಸ್ತರಿಸಿದ್ದು, ಜ.31ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಇದರಿಂದ ಹೆಚ್ಚಿನ ಪ್ರಯೋಜನ ರೈತರಿಗೆ ಆಗಿಲ್ಲ.

ಪ್ರಸ್ತುತ ಗೂಡು ಧಾರಣೆಯಲ್ಲಿ ಚೇತರಿಕೆ ಕಂಡಿದ್ದು, ಗ್ರೇಡ್ 3ರ ರೇಷ್ಮೆಗೂಡಿಗಷ್ಟೇ ಪ್ರಯೋಜನ. ಪ್ರತಿ ಕೆಜಿಗೆ ಸಿಗುವ ರಕ್ಷಣಾತ್ಮಕ ದರ ಎರಡಂಕಿ ದಾಟುತ್ತಿಲ್ಲ. ಸರ್ಕಾರ ಮಾತ್ರ ಗೂಡು ಉತ್ಪಾದನಾ ವೆಚ್ಚ ಆಧರಿಸಿ ವೈಜ್ಞಾನಿಕ ಬೆಲೆ ನೀಡುತ್ತಿರುವುದಾಗಿ ಸಮರ್ಥಿಸಿಕೊಳ್ಳುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇ-ಪೇಮೆಂಟ್: ರಕ್ಷಣಾತ್ಮಕ ದರವನ್ನು ಇ-ಪೇಮೆಂಟ್ ಮೂಲಕ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದ್ದು, ರೇಷ್ಮೆ ಪಾಸ್ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಸಲ್ಲಿಸದಿರುವ ರೈತರು ಕಡ್ಡಾಯವಾಗಿ ಸಲ್ಲಿಸುವಂತೆ ರೇಷ್ಮೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ಗ್ರೇಡಿಂಗ್ ಮಾನದಂಡ: ದ್ವಿತಳಿ ಗ್ರೇಡ್-1ರ ಗೂಡಿಗೆ 350 ರೂ, ಗ್ರೇಡ್-2ಕ್ಕೆ 300 ಹಾಗೂ ಗ್ರೇಡ್-3ರ ಗೂಡಿಗೆ 260 ರೂ. ಹಾಗೂ ಮಿಶ್ರತಳಿ ಗೂಡಿಗೆ ಗ್ರೇಡ್ 1ಕ್ಕೆ 300 ರೂ, ಗ್ರೇಡ್ 2ಕ್ಕೆ 265 ರೂ. ಹಾಗೂ ಗ್ರೇಡ್ 3ರ ಗೂಡಿಗೆ 220 ರೂ. ನಿಗದಿಪಡಿಸಿದೆ. ಇದಕ್ಕಿಂತ ಕಡಿಮೆ ಬೆಲೆಗೆ ಗೂಡು ಮಾರಾಟವಾದರೆ ವ್ಯತ್ಯಾಸದ ಮೊತ್ತವನ್ನು ರಕ್ಷಣಾತ್ಮಕ ದರವಾಗಿ ನೀಡಲಾಗುತ್ತಿದೆ.

ರೈತರ ವಿವರ: ಕೋಲಾರ ಗೂಡು ಮಾರುಕಟ್ಟೆಗೆ 10 ಲಕ್ಷ ರೂ. ಬಿಡುಗಡೆಯಾಗಿ 292 ರೈತರಿಗೆ 6.50 ಲಕ್ಷ ರೂ, ಕ್ಯಾಲನೂರು ಮಾರುಕಟ್ಟೆಗೆ ಬಿಡುಗಡೆಯಾದ 4 ಲಕ್ಷ ರೂ.ಗಳಲ್ಲಿ 232 ರೈತರಿಗೆ 3.99 ಲಕ್ಷ ರೂ. ಹಾಗೂ ಶ್ರೀನಿವಾಸಪುರ ಮಾರುಕಟ್ಟೆಗೆ ಬಿಡುಗಡೆಯಾದ 4 ಲಕ್ಷ ರೂ. ಗಳಲ್ಲಿ 86 ರೈತರಿಗೆ 1.67 ಲಕ್ಷ ರೂ. ಪಾವತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ದರ ಯೋಜನೆ ಜ.31ಕ್ಕೆ ಮುಕ್ತಾಯಗೊಳ್ಳಲಿದ್ದು, ಮುಂದಿನ ಆದೇಶದಂತೆ ಕ್ರಮ ವಹಿಸಲಾಗುವುದು. ಬಿಡುಗಡೆಯಾದ 18 ಲಕ್ಷ ರೂ.ಗಳಲ್ಲಿ 12.67 ಲಕ್ಷ ರೂ. ಬಳಕೆಯಾಗಿ 610 ರೈತರಿಗೆ ಇ-ಪೇಮೆಂಟ್ ಮೂಲಕ ಹಣ ಪಾವತಿಸಲಾಗುತ್ತಿದೆ.

| ಎಂ.ಕೆ.ಪ್ರಭಾಕರ್, ಉಪ ನಿರ್ದೇಶಕ, ರೇಷ್ಮೆ ಇಲಾಖೆ

ಗ್ರೇಡಿಂಗ್ ಆಧಾರದ ಮೇಲೆ ರಕ್ಷಣಾತ್ಮಕ ದರ ಯೋಜನೆ ರೈತರಿಗೆ ಪ್ರಯೋಜನವಿಲ್ಲ. 2015ರವರೆಗೆ ನೀಡಿದಂತೆ ಮಿಶ್ರತಳಿಗೆ ಕೆಜಿಗೆ 30 ರೂ. ದ್ವಿತಳಿಗೆ 50 ರೂ. ಪೋ›ತ್ಸಾಹಧನ ನೀಡಲು ಜ.17ರಂದು ವಿಕಾಸಸೌಧದಲ್ಲಿ ಸಿಎಂ, ರೇಷ್ಮೆ ಸಚಿವರು ನಡೆಸಿದ ಸಭೆಯಲ್ಲೂ ಒತ್ತಾಯಿಸಲಾಗಿದೆ.

| ಸಿ.ವಿ. ನಾರಾಯಣಸ್ವಾಮಿ, ಅಧ್ಯಕ್ಷ, ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘ, ಕೋಲಾರ