ರೇವಣಸಿದ್ದೇಶ್ವರಸ್ವಾಮಿ ಅದ್ದೂರಿ ರಥೋತ್ಸವ

ಕೈಲಾಂಚ: ರಾಮನಗರ ತಾಲೂಕಿನ, ಕೈಲಾಂಚ ಹೋಬಳಿಯ ಪ್ರಸಿದ್ಧ ಅವ್ವೇರಹಳ್ಳಿ ಶ್ರೀ ರೇವಣಸಿದ್ದೇಶ್ವರಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ನೆರವೇರಿತು.

ರಥೋತ್ಸವದ ಪ್ರಯುಕ್ತ ಬೆಳಗ್ಗೆ 6.30ಕ್ಕೆ ಕ್ಷೇತ್ರ ಶ್ರೀ ಬಸವೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ ನಡೆಯಿತು. ಕ್ಷೇತ್ರದ ಭೀಮೇಶ್ವರ, ರೇಣುಕಾಂಬ, ಮರುಳಸಿದ್ದೇಶ್ವರ, ರೇವಣಸಿದ್ದೇಶ್ವರ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಮಧ್ಯಾಹ್ನ 12.05ಕ್ಕೆ ರೇವಣಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಸಮೇತ ತಂದು ಅಲಂಕೃತ ರಥದಲ್ಲಿ ಇರಿಸಲಾಯಿತು. ವಿವಿಧ ಪೂಜಾ ವಿಧಿವಿಧಾನದ ನಂತರ ತಹಸೀಲ್ದಾರ್ ರಾಜು, ದಾಸೋಹ ಮಠದ ಕಿರಿಯಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆಯುವುದರ ಮೂಲಕ ರಥಕ್ಕೆ ಚಾಲನೆ ನೀಡಿದರು.

ನೆರೆದಿದ್ದ ಭಕ್ತರು ರಥಕ್ಕೆ ಹೂ, ಹಣ್ಣು, ಬಾಳೆಹಣ್ಣು, ಜವನ ಎಸೆದು, ಜೈ ರೇವಣಸಿದ್ದೇಶ್ವರ, ಜೈ ಜೈ ರೇವಣಸಿದ್ದೇಶ್ವರ ಎಂದು ಜೈಕಾರ ಹಾಕುತ್ತಾ ರಥ ಎಳೆದು ಕೃತಾರ್ಥರಾದರು. ಹಲವಾರು ಭಕ್ತರು ಅರವಂಟಿಗೆ ಏರ್ಪಡಿಸಿ ಪಾನಕ, ಕೋಸಂಬರಿ, ಮಜ್ಜಿಗೆ ಪ್ರಸಾದ ವಿತರಿಸಿದರು. ರೇವಣಸಿದ್ದೇಶ್ವರಸ್ವಾಮಿ ಅಭಿವೃಧಿ್ಧ ಸೇವಾ ಟ್ರಸ್ಟ್ ಮತ್ತು ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ಶ್ರೀ ಮುದ್ದು ಬಸವಲಿಂಗರಾಜ ಸ್ವಾಮೀಜಿ ಹಾಗೂ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಉತ್ಸವಕ್ಕೆ ಬಂದಿದ್ದ ಭಕ್ತರಿಗೆ ನೀರು, ವಸತಿಗೆ ತೊಂದರೆಯಾಗದಂತೆ ಧಾರ್ವಿುಕ ದತ್ತಿ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಸರ್ಕಲ್ ಇನ್​ಸ್ಪೆಕ್ಟರ್ ಜೀವನ್, ಸಬ್​ಇನ್​ಸ್ಪೆಕ್ಟರ್ ಲಕ್ಷ್ಮಣ್​ಗೌಡ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.

ಕಣ್ಮನ ಸೆಳೆದ ರಂಗೋಲಿ: ಮಹಿಳೆಯರು ರಥದ ಬೀದಿಯಲ್ಲಿ ಬಿಡಿಸಿದ್ದ ರಂಗೋಲಿಗಳು ಕಣ್ಮನ ಸೆಳೆದವು. ವೀರಗಾಸೆ, ಡೊಳ್ಳುಕುಣಿತ, ತಮಟೆ ವಾದನಗಳು, ಪೂಜಾ ಕುಣಿತ ಜನಪದ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದ್ದವು. ಜಾತ್ರೆಯಲ್ಲಿ ಐಸ್ ಕ್ರೀಂ, ಕಡಲೆಪುರಿ ಬತಾಸು ಅಂಗಡಿಗಳು, ತಂಪು ಪಾನೀಯ, ಮಕ್ಕಳ ಆಟಿಕೆ ಅಂಗಡಿಗಳು ಹೆಚ್ಚಾಗಿ ಕಂಡು ಬಂದವು. ಚಿಣ್ಣರು ಆಟದ ಸಾಮಾನು ಹಿಡಿದು ಪೀಪಿ ಊದುತ್ತ ಖುಷಿ ಪಡುತ್ತಿದ್ದ ದೃಶ್ಯ ಜಾತ್ರೆಯ ಕಳೆ ಹೆಚ್ಚಿಸಿತ್ತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರೇಣುಕಾಪ್ರಸಾದ್, ಮುಖಂಡರಾದ ಅವ್ವೇರಹಳ್ಳಿ ಕಂಟ್ರಾಕ್ಟರ್ ಶಿವಲಿಂಗಯ್ಯ, ತಮ್ಮಣ್ಣ, ಬೈರಪ್ಪ, ಎ.ಸಿ. ಕೆಂಪಯ್ಯ, ಎಚ್.ಎಸ್. ದೇವರಾಜು, ಹುಲಿಕೆರೆ-ಗುನ್ನೂರು ಗ್ರಾಪಂ ಅಧ್ಯಕ್ಷೆ ಸವಿತಾ ದೇವರಾಜು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗೋಪಾಲನಾಯ್ಕ, ನಾಗೇಶ್, ಹೊನ್ನದಾಸೇಗೌಡ, ಪ್ರಭಾ ಸತೀಶ್, ಸರಸ್ವತಿ ಕೃಷ್ಣಯ್ಯ, ಪುಟ್ಟಮಾದು, ರಾಜು, ಇಓ ಮಂಗಳಮ್ಮ ಆರ್.ಐ. ಬಸವರಾಜು ಸೇವಾ ಗ್ರಾಮಗಳ ಮುಖಂಡರು, ಅವ್ವೇರಹಳ್ಳಿ ಗ್ರಾಮದ ಯುವಕ ತಂಡಗಳು ಹಾಜರಿದ್ದರು.

ಬುದ್ಧ ಪೂರ್ಣಿಮೆಯಂದು ಜಾತ್ರೆ: ಪ್ರತೀವರ್ಷ ಬುಧ್ಧಪೂರ್ಣಿಮೆಯಂದು ಜಾತ್ರೆ ನಡೆಯುವುದು ವಾಡಿಕೆ. ಈ ಬಾರಿ ಮೇ 18ರಂದು ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯಿತಾದರೂ ಧಾರ್ವಿುಕ ದತ್ತಿ ಇಲಾಖೆ ಮತ್ತು ಸ್ಥಳೀಯ ಗ್ರಾಮಸ್ಥರ ಜಟಾಪಟಿಯಿಂದ ಅಗ್ನಿಕೊಂಡ ಮತ್ತು ರಥೋತ್ಸವ ತಡೆಯಾಗಿತ್ತು. ಇದರಿಂದ ಭಕ್ತರು ನಿರಾಶೆಗೊಂಡಿದ್ದರು. ಪುರಾತನ ಕ್ಷೇತ್ರದಲ್ಲಿ ಜಾತ್ರೆ ನಿಲ್ಲಬಾರದು ಎಂಬುದನ್ನು ಅರಿತ ಅವ್ವೇರಹಳ್ಳಿ, ನೆಲಮಲೆ, ಕೆ.ಜಿ. ಹೊಸಹಳ್ಳಿ ಸೇರಿ ಸುತ್ತಮುತ್ತಲ ಸೇವಾ ಗ್ರಾಮಗಳ ಗ್ರಾಮಸ್ಥರು ಸಭೆ ಸೇರಿ ಒಟ್ಟಾಗಿ ಜೂ.17ರ ಸೋಮವಾರ ಪೌರ್ಣಮಿ ದಿನ ಮತ್ತೆ ಅಗ್ನಿಕೊಂಡ ಮತ್ತು ರಥೋತ್ಸವ ಆಚರಿಸಲು ನಿರ್ಧರಿಸಿದ್ದಂತೆ ಬಸವೇಶ್ವರ ಅಗ್ನಿಕೊಂಡ ಮತ್ತು ರೇವಣಸಿದ್ದೇಶ್ವರಸ್ವಾಮಿ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು.

Leave a Reply

Your email address will not be published. Required fields are marked *