ಕಡೂರು: ವಿವಿಧ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ಸೇರಿದಂತೆ ಸರ್ಕಾರದ ಯೋಜನೆಗಳ ಲೆಕ್ಕಶೀರ್ಷಿಕೆಯಡಿಯ ಅನುದಾನ ಬಳಸಿಕೊಂಡು, ಈ ಬಾರಿ ವಿಶೇಷವಾಗಿ 10 ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ 31.93 ಲಕ್ಷ ರೂ. ಉಳಿತಾಯದ ಪುರಸಭೆ ಬಜೆಟ್ ಮಂಡಿಸಲಾಗಿದೆ.
ಬುಧವಾರ ಪುರಸಭೆಯಲ್ಲಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ 2025-26ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿ, ಎಲ್ಲ ಮೂಲಗಳಿಂದ 37.46 ಕೋಟಿ ರೂ. ಆದಾಯ ಮತ್ತು 37.14 ಕೋಟಿ ವೆಚ್ಚ ಅಳವಡಿಸಿಕೊಂಡು 31.93 ಲಕ್ಷ ರೂ . ಉಳಿತಾಯ ಮಾಡಲಾಗುವುದು. ಒಟ್ಟು 37.46 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಪ್ರಮುಖವಾಗಿ ಕಟ್ಟಡ ಆಸ್ತಿ ತೆರಿಗೆ, ಆಸ್ತಿ ತೆರಿಗೆಯ ದಂಡ, ಉದ್ದಿಮೆ ಪರವಾನಗಿ ಶುಲ್ಕ, ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ ಶುಲ್ಕ, ನಿವೇಶನ ಅಭಿವೃದ್ಧಿ ಶುಲ್ಕ, ಬ್ಯಾಂಕ್ ಬಡ್ಡಿ, ಸಂಗ್ರಹಣಾ ಶುಲ್ಕ, ಮಾರುಕಟ್ಟೆ ಬಾಡಿಗೆ ಶುಲ್ಕ, ಖಾತೆ ಬದಲಾವಣೆ, ಖಾತಾ ನಕಲು, ಇತರ ಪ್ರಮಾಣ ಪತ್ರಗಳ ಶುಲ್ಕ, ಟೆಂಡರ್ ಫಾರ್ಮ್‌ಗಳ ಮಾರಾಟದಿಂದ, ನೀರಿನ ದರಗಳ ವಸೂಲಾತಿ, ನೀರಿನ ಸಂಪರ್ಕ ಮತ್ತು ಠೇವಣಿ ಆದಾಯ, ಕುಡಿಯುವ ನೀರು ಬರ ಪರಿಹಾರ, ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಗಾಗಿ ಎಸ್‌ಎಫ್‌ಸಿ ವಿದ್ಯುತ್ ಅನುದಾನ, ಪುರಸಭಾ ಅಧಿಕಾರಿ ಮತ್ತು ನೌಕರರ ವೇತನಕ್ಕಾಗಿ ಸರ್ಕಾರದಿಂದ ಬರುವ ಆದಾಯ, ಸರ್ಕಾರದಿಂದ ಇತರ ಅನುದಾನಗಳು ಸೇರಿದಂತೆ ಇತರ ಆದಾಯಗಳ ಮೂಲಗಳಿಂದ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ನಗರದ ರಸ್ತೆ ಹಾಗೂ ಚರಂಡಿಗಳ ದುರಸ್ತಿ ಮತ್ತು ನಿರ್ಮಾಣಕ್ಕಾಗಿ 4 ಕೋಟಿ, ಕಚೇರಿಗೆ ಗಣಕಯಂತ್ರಗಳು ಇತರ ಉಪಕರಣಗಳ ಖರೀದಿಗಾಗಿ 13.30 ಲಕ್ಷ, ಬೀದಿ ದೀಪಗಳ ದುರಸ್ತಿ 25 ಲಕ್ಷ, ಕಟ್ಟಡ ದುರಸ್ತಿ ಮತ್ತು ನಿರ್ವಹಣೆಗೆ 20 ಲಕ್ಷ, ನೈರ್ಮಲ್ಯ ಮತ್ತು ಘನತಾಜ್ಯ ವಸ್ತು ನಿರ್ವಹಣೆಗೆ ಅಗತ್ಯ ಯಂತ್ರೋಪಕರಣಗಳ ಖರೀದಿಗಾಗಿ 1.25 ಕೋಟಿ, ದುರಸ್ತಿಗೆ 50 ಲಕ್ಷ, ಹೊಸ ಬೀದಿದೀಪ ಮತ್ತು ಹೈಮಾಸ್ಟ್ ಅಳವಡಿಕೆಗಾಗಿ 27 ಲಕ್ಷ, ಸಾಮಗ್ರಿಗಳ ಖರೀದಿಗೆ 1.75 ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ 50 ಲಕ್ಷ, ನೈರ್ಮಲ್ಯ ವಿಭಾಗಕ್ಕೆ ಭಾರಿ ವಾಹನಗಳ ಖರೀದಿಗೆ 34 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದರು.
ಘನತಾಜ್ಯ, ನೀರು ಸರಬರಾಜು ಹೊರಗುತ್ತಿಗೆ ನೌಕರರ ವೇತನ ಮತ್ತು ದುರಸ್ತಿಗಾಗಿ 2.25 ಕೋಟಿ, ಶೇ.24.10 ಯೋಜನೆಯಡಿ 18.95 ಲಕ್ಷ, ಶೇ.7.25 ಯೋಜನೆಯಡಿ 7.69 ಲಕ್ಷ, ಶೇ.5 ಯೋಜನೆಯಡಿ 6.86 ಲಕ್ಷ, ನಲ್ಮ್ ಯೋಜನೆಯಡಿ 5 ಲಕ್ಷ, ಜಾಹೀರಾತು ಇತರ ಪ್ರಚಾರಕ್ಕಾಗಿ 7 ಲಕ್ಷ, ಪುರಸಭಾ ಸದಸ್ಯರ ಗೌರವಧನ, ಅಧ್ಯಯನ ಪ್ರವಾಸ ವೆಚ್ಚಕ್ಕಾಗಿ 5 ಲಕ್ಷ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.
ಪಟ್ಟಣದ ಮೂಲಭೂತಸೌಕರ್ಯಗಳಿಗೆ ಒತ್ತುಕೊಟ್ಟು ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಿರುವುದು ಅಧ್ಯಕ್ಷರ ಕಾರ್ಯಕ್ಷಮತೆ ಹೆಚ್ಚಿಸಿದಂತಾಗಿದೆ ಎಂದು ಉಪಾಧ್ಯಕ್ಷೆ ಮಂಜುಳಾ ಚಂದ್ರು ಮೆಚ್ಚುಗೆ ವ್ಯಕ್ತಪಡಿಸಿದರು.
ಈರಳ್ಳಿ ರಮೇಶ್ ಮಾತನಾಡಿ, ಬಜೆಟ್ ಮಂಡನೆಯಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಗಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಮೀಸಲಿಡಬೇಕಿದೆ. ಕಂದಾಯ ವಸೂಲಾತಿಯಲ್ಲಿ ವಾಣಿಜ್ಯ ಕಟ್ಟಡಗಳಿಂದ ಹೆಚ್ಚು ತೆರಿಗೆ ಹಣದ ಸಂಗ್ರಹಕ್ಕೆ ಅನುದಾನ ನಿರೀಕ್ಷಿಸಿದರೆ ಪುರಸಭೆಗೆ ಆದಾಯವೃದ್ಧಿಗೊಳ್ಳಲಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸುವಂತೆ ಸಲಹೆ ನೀಡಿದರು.
ಸೈಯಾದ್ ಯಾಸೀನ್ ಮಾತನಾಡಿ, ಅಧ್ಯಕ್ಷ ಭಂಡಾರಿ ಶ್ರೀನಿವಾಸ್ 6ನೇ ಬಾರಿ ಬಜೆಟ್ ಮಂಡಿಸಿರುವುದು ಹೆಗ್ಗಳಿಕೆಯಾಗಿದೆ ಎಂದರು.
ಸದಸ್ಯರಿಗೆ ಬಜೆಟ್ ಮಂಡನೆಯ ಕೈಪಿಡಿಯೊಂದಿಗೆ ಲೆದರ್ ಬ್ಯಾಗ್‌ಗಳನ್ನು ವಿತರಿಸಲಾಯಿತು. ಜಿ.ಸೋಮಯ್ಯ, ಮರುಗುದ್ದಿ ಮನು, ಸಂದೇಶ್‌ಕುಮಾರ್, ಪುಷ್ಪಲತಾ ಮಂಜುನಾಥ್, ಹಾಲಮ್ಮ, ಭಾಗ್ಯಾ ರಂಗನಾಥ್, ಕೆ.ಯತಿರಾಜ್, ಇಕ್ಬಾಲ್, ಲತಾ ರಾಜು, ಪದ್ಮಾ ಶಂಕರ್, ಸುಧಾ ಉಮೇಶ್, ವಿಜಯಾ ಚಿನ್ನರಾಜು, ಜ್ಯೋತಿ ಆನಂದ್, ಮೋಹನ್‌ಕುಮಾರ್, ಗೋವಿಂದರಾಜು, ಕಮಲಾ ವೆಂಕಟೇಶ್, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಇತರರಿದ್ದರು.