ರಿಲ್ಯಾಕ್ಸ್ ಮೂಡ್​ನಲ್ಲಿ ಬಿಎಸ್​ವೈ

ಶಿಕಾರಿಪುರ: ರಾಜ್ಯಾದ್ಯಂತ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎರಡನೇ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಶಿಕಾರಿಪುರದಲ್ಲಿ ವಿಶ್ರಾಂತಿ ಪಡೆದರು.

ಶಿಕಾರಿಪುರಕ್ಕೆ ಸೋಮವಾರ ರಾತ್ರಿಯೇ ಆಗಮಿಸಿದ್ದ ಅವರು ಮಂಗಳವಾರ ಮತದಾನ ಮಾಡಿದ ನಂತರ ಬೇರೆ ಜಿಲ್ಲೆ ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರ ಜತೆ ಇಡೀ ದಿನ ಚರ್ಚೆ ನಡೆಸಿದರು. ರಾತ್ರಿ ಪ್ರಮುಖರ ಬೈಠಕ್ ನಡೆಸಿ, ಕಾರ್ಯಕರ್ತರೊಂದಿಗೆ ಊಟ ಮಾಡಿದರು.

ಬುಧವಾರ ಬೆಳಗ್ಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಪ್ರಮುಖರು ಹಾಗೂ ಕಾರ್ಯಕರ್ತರ ಜತೆ ಚರ್ಚೆ ನಡೆಸಿದರು. ಈ ನಡುವೆ ತೋಟಕ್ಕೆ ಹೋಗಿಬಂದ ಅವರು, ಬಳಿಕ ಪಟ್ಟಣದ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದರು. ಎರಡು ತಿಂಗಳು ಚುನಾವಣಾ ಪ್ರಚಾರ ಹಾಗೂ ಪ್ರವಾಸದಿಂದ ಬಳಲಿದ್ದ ಅವರು ಎರಡು ದಿನ ತವರಿನಲ್ಲಿ ಕಾರ್ಯಕರ್ತರು ಹಾಗೂ ಜನರ ಜತೆ ಬೆರೆತು ರಿಲ್ಯಾಕ್ಸ್ ಮೂಡ್​ಗೆ ಜಾರಿದರು. ಜನ ಹಾಗೂ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಒಳ್ಳೆಯ ಬದಲಾವಣೆ ಆಗಲಿದೆ. ತಾಲೂಕು ಹಾಗೂ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು. ಬುಧವಾರ ಸಂಜೆ ಶಿವಮೊಗ್ಗಕ್ಕೆ ತೆರಳಿದ ಯಡಿಯೂರಪ್ಪ ಅಲ್ಲಿಂದ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.