Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ರಿಯಾಲ್ಟಿಗೆ ಆರೋಗ್ಯ ವಿವಿ ಶುಕ್ರದೆಸೆ

Saturday, 23.06.2018, 3:03 AM       No Comments

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರಗೊಳ್ಳುತ್ತಿರುವುದರಿಂದ ರಾಮನಗರ ಸುತ್ತ ರಿಯಾಲ್ಟಿ ಚಟುವಟಿಕೆ ಗರಿಗೆದರಿದೆ.

| ಹೊಸಹಟ್ಟಿ ಕುಮಾರ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಲೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರಿಸುವ ಅಂತಿಮ ಹಂತದ ಸಿದ್ಧತೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ರಿಯಾಲ್ಟಿ ಕ್ಷೇತ್ರಕ್ಕೆ ಇನ್ನಷ್ಟು ಚೇತರಿಕೆ ಕಂಡುಬಂದಿದೆ.

2008ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಸ್ವಕ್ಷೇತ್ರ ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೆ ಮುಂದಾಗಿದ್ದರು. ಆದರೆ, ಆಗ ಅವರ ಸರ್ಕಾರ ಪತನಗೊಂಡ ನಂತರ ಈ ಯೋಜನೆ ಕುಂಟುತ್ತಲೇ ಸಾಗಿತ್ತು. ಈಗ ಅವರು ಮತ್ತೊಮ್ಮೆ ಸಿಎಂ ಆಗಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಯೋಜನೆ ಜಾರಿ ತೀವ್ರಗೊಂಡಿದೆ. ಇದರಿಂದಾಗಿ ರಾಮನಗರ ಹಾಗೂ ಸುತ್ತಲಿನ ಪ್ರದೇಶಗಳ ಭೂಮಿಗೆ ಅಧಿಕ ಬೇಡಿಕೆ ಬಂದಿದೆ.

ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ವಿವಿ ಸ್ಥಾಪನೆ ಯೋಜನೆಗೆ ಅಗತ್ಯವಿರುವ ಜಮೀನು ವಶಪಡಿಸಿಕೊಂಡು ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಅನುದಾನ ಬಿಡುಗಡೆ ಮಾಡುವ ಭರವಸೆ ಕೊಟ್ಟಿರುವ ಹಿನ್ನೆಲೆಯಲ್ಲಿ ಯೋಜನೆ ಜಾರಿ ವೇಗ ಪಡೆದುಕೊಂಡಿದೆ. ರಾಮನಗರದ ಅರ್ಚಕರಹಳ್ಳಿ ವಿಶ್ವವಿದ್ಯಾಲಯ ಸ್ಥಾಪನೆ ಯೋಜನೆಗೆ ಜಾಗ ನಿಗದಿಪಡಿಸಲಾಗಿತ್ತು. ಆದರೆ, ರೈತರು ಜಮೀನು ಕೊಡದೆ ಕೋರ್ಟ್ ಮೆಟ್ಟಿಲೇರಿದ್ದರು. ಈಗ ರೈತರು ಕೂಡ ಜಮೀನು ಕೊಡಲು ಒಪ್ಪಿರುವುದರಿಂದ ಯೋಜನೆಗೆ ಮುಹೂರ್ತ ಕೂಡಿಬಂದಿದೆ. ಅರ್ಚಕರಹಳ್ಳಿ ಬಳಿ ವಿಶಾಲ ಪ್ರದೇಶದಲ್ಲಿ ರಾಜೀವ್​ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ತಲೆಯೆತ್ತಲಿದೆ. ಇದರಿಂದ ರಾಮನಗರದ ಹೆಗ್ಗುರುತು ರಾಷ್ಟ್ರಮಟ್ಟದಲ್ಲಿ ಮೂಡಲಿದೆ.

ಇದು ಸ್ಥಳೀಯ ರಿಯಾಲ್ಟಿ ಕ್ಷೇತ್ರಕ್ಕೆ ಶುಕ್ರದೆಸೆ ತರುವುದು ಗ್ಯಾರಂಟಿ. ಬೆಂಗಳೂರು ನಗರ ಭಾರಿ ಒತ್ತಡದಿಂದ ನಲುಗುತ್ತಿದೆ. ಒತ್ತಡ ಕಡಿಮೆ ಮಾಡಲು ಬೆಂಗಳೂರಿನ ಸಮೀಪ ಇರುವ ಪ್ರದೇಶಗಳಿಗೆ ಯೋಜನೆಗಳನ್ನು ವರ್ಗಾಯಿಸಲು ಹಲವು ಸರ್ಕಾರಗಳು ಮುಂದಾದವು. ಅಲ್ಲದೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರ್ಪಡುತ್ತಿರುವುದು ಕೂಡ ರಾಮನಗರ ರಿಯಾಲ್ಟಿ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಹೆದ್ದಾರಿಯಲ್ಲಿ ಸಿಗುವ ರಾಮನಗರ, ಚನ್ನಪಟ್ಟಣ ರಿಯಾಲ್ಟಿ ಕ್ಷೇತ್ರದ ಸೂಜಿಗಲ್ಲಾಗಿ ಮಾರ್ಪಡಲಿವೆ. ಅಲ್ಲದೆ ಕನಕಪುರ ಹಾಗೂ ಮಾಡಿ ಕೂಡ ಆರೋಗ್ಯ ವಿವಿ ನಿರ್ವಣದಿಂದ ರಿಯಾಲ್ಟಿ ಕ್ಷೇತ್ರದಲ್ಲಿ ಛಾಪು ಮೂಡಿಸಲಿವೆ.

ಮೂಲ ಸೌಕರ್ಯಕ್ಕಿಲ್ಲ ಕೊರತೆ

ರಾಮನಗರ ಜಿಲ್ಲೆಗೆ ಸರ್ಕಾರ ಅಗತ್ಯ ಮೂಲಸೌಲಭ್ಯಗಳನ್ನು ವಿತರಿಸಿದೆ. ಚನ್ನಪಟ್ಟಣ, ರಾಮನಗರ ಹಾಗೂ ಕನಕಪುರಕ್ಕೆ ಈಗಾಗಲೇ ಕುಡಿಯಲು ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ವಿಶಾಲ ರಸ್ತೆಗಳು ನಿರ್ವಣವಾಗಲಿದೆ. ಉತ್ತಮ ಹವೆ ಹೊಂದಿರುವುದರಿಂದ ಗ್ರಾಹಕರು ರಾಮನಗರ ಜಿಲ್ಲೆಯತ್ತ ಕಣ್ಣು ಹಾಯಿಸಿದ್ದಾರೆ. ಗ್ರಾಹಕರ ಅಗತ್ಯ ಪೂರೈಸಲು ವಿವಿಧ ರಿಯಾಲ್ಟಿ ಕಂಪನಿಗಳು ಕೂಡ ಮುಂದಾಗಿ ಹಣ ತೊಡಗಿಸಿವೆ. ಜಿಲ್ಲೆಯಲ್ಲಿ ಬಹುತೇಕ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳು ಜಾರಿಯಾಗಿದ್ದು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಅಲ್ಲದೆ ಉತ್ತಮ ಮಳೆಯಿಂದ ಅಂತರ್ಜಲಮಟ್ಟ ಏರಿಕೆಯಾಗಿದ್ದು ವಸತಿ ಯೋಜನೆಗಳಿಗೆ ಪೂರಕವಾಗಿದೆ. ಹೀಗಾಗಿ ಕೈಗಾರಿಕೆ, ವಸತಿ ಸೇರಿ ವಿವಿಧ ಯೋಜನೆಗಳನ್ನು ನಿರ್ಮಾಣ ಮಾಡಲು ಬೃಹತ್ ರಿಯಾಲ್ಟಿ ಕಂಪನಿಗಳು ಚಿತ್ತ ಹರಿಸಿವೆ. ರಾಜೀವ್​ಗಾಂಧಿ ಆರೋಗ್ಯ ವಿವಿ ಸ್ಥಾಪನೆ ಕಾಮಗಾರಿ ಆರಂಭವಾಗುತ್ತಲೇ ರಾಮನಗರ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಬೃಹತ್ ರಿಯಾಲ್ಟಿ ಕಂಪನಿಗಳು ಕೂಡ ಹಣ ತೊಡಗಿಸಲು ಈಗಾಗಲೇ ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ.

250 ಎಕರೆ ಜಾಗದಲ್ಲಿ ವಿವಿ

2008ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿವಿ ಯೋಜನೆಗೆ ಚಾಲನೆ ನೀಡಿದ್ದರು. ರಾಮನಗರದ ವಿವಿಧ ಕಡೆ ಜಾಗ ಹುಡುಕಿ ಅಂತಿಮವಾಗಿ ಅರ್ಚಕರಹಳ್ಳಿ ಬಳಿ ಜಾಗ ನಿಗದಿ ಪಡಿಸಲಾಗಿತ್ತು. ಯೋಜನೆಗೆ ಸುಮಾರು 250 ಎಕರೆ ಜಾಗ ಅಗತ್ಯ ಇದ್ದು ಇದರಲ್ಲಿ ಅರ್ಧದಷ್ಟು ಸರ್ಕಾರಿ ಜಾಗ ಇದೆ. ಉಳಿದ ಅರ್ಧದಷ್ಟು ಜಾಗವನ್ನು ರೈತರಿಂದ ಖರೀದಿ ಮಾಡಲು ನಿರ್ಧರಿಸಲಾಗಿತ್ತು. ರೈತರು ಯೋಜನೆಗೆ ಜಾಗ ಕೊಡುವುದಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ನಲ್ಲಿ ತೀರ್ವನವಾಗಿ ರೈತರಿಗೆ ಅಗತ್ಯ ಪರಿಹಾರ ಜಮೀನು ವಶಪಡಿಸಿ ಕೊಳ್ಳುವಂತೆ ಆದೇಶ ನೀಡಿದೆ. ವಿವಿ ಸ್ಥಾಪನೆಯಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮನ್ನಣೆ ಸಿಗುವುದರಿಂದಾಗಿ ದೇಶ-ವಿದೇಶದ ಪ್ರತಿಷ್ಠಿತ ಕಂಪನಿಗಳು ಈ ಭಾಗದಲ್ಲಿ ಹಣ ಹೂಡಿಕೆಗೆ ಉತ್ಸುಕತೆ ತೋರಲಿವೆ. ಹೊರವಲಯದ ಜಿಲ್ಲೆಗಳತ್ತ ಇಂಥ ಯೋಜನೆಗಳು ವಿಸ್ತರಣೆಯಾದರೆ ಬೆಂಗಳೂರಿನ ಒತ್ತಡವೂ ಸ್ವಲ್ಪಮಟ್ಟಿಗೆ ಸುಧಾರಣೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

Leave a Reply

Your email address will not be published. Required fields are marked *

Back To Top