ರಾಸಾಯನಿಕ ಬಳಸದೆ ಕೃಷಿ ಸಾಧ್ಯ

ರಾಮನಗರ: ಜಿಲ್ಲೆಯ ರೈತರಿಗೆ ರಾಸಾಯನಿಕ ಬಳಸದೆ ನೈಸರ್ಗಿಕ ಕೃಷಿ ಪದ್ಧತಿ ಪರಿಚಯಿಸುವ ಉದ್ದೇಶದಿಂದ ವಾರ್ತಾ ಇಲಾಖೆ, ಮಂಡ್ಯದ ಅನನ್ಯ ಹಾರ್ಟ್ ಸಂಸ್ಥೆ ಮತ್ತು ಪ್ರಕೃತಿ ಟ್ರಸ್ಟ್ ಸಹಕಾರದಲ್ಲಿ ಮಾದರಿ ರೈತ ಯುವಕ ಸುರೇಂದ್ರ ಅವರ ತೋಟದಲ್ಲಿ ವಿನೂತನ ಮಾಧ್ಯಮ ಸಂವಾದ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.

ಕೃಷಿ ಪ್ರಾತ್ಯಕ್ಷಿಕೆ ವೀಕ್ಷಿಸಿ, ಅಗತ್ಯ ಮಾಹಿತಿ ಪಡೆಯಲು ಆಗಮಿಸಿದ ಕೃಷಿ ಆಸಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಸುರೇಂದ್ರ ಪಾಠ ಮಾಡಿದರು. ಭೂಮಿ, ನೀರು, ಗಾಳಿ ಕಲುಷಿತಗೊಂಡರೆ ಜೀವ ಸಂಕುಲ ಉಳಿಯಲು ಸಾಧ್ಯವಿಲ್ಲ. ಅದನ್ನು ಯುವಜನತೆ ಅರ್ಥಮಾಡಿಕೊಳ್ಳಬೇಕು. ಹಳ್ಳಿಯ ಬದುಕು ಸಾಕೆಂದು ನಗರ ಪ್ರದೇಶದ ಕಡೆಗೆ ವಲಸೆ ಹೋಗುತ್ತಿರುವ ಯುವ ಸಮುದಾಯದ ಮಧ್ಯೆ ಹತ್ತು ವರ್ಷಗಳ ಹಿಂದೆ ನಾನೂ ಸಹ ನಗರಕ್ಕೆ ವಲಸೆ ಹೋಗಿ ಬೇಸತ್ತು, ನನ್ನ ಅಪ್ಪ ಕೊಟ್ಟಿರುವ ಭೂಮಿಯ ಕಡೆಗೆ ಮುಖ ಮಾಡಿ ಇಂದು ನೆಮ್ಮದಿ ಬದುಕು ಕಟ್ಟಿಕೊಂಡಿದ್ದೇನೆ. ಪರಿಸರ ಮತ್ತು ಕೃಷಿ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಪ್ರಯತ್ನ ನಾವೆಲ್ಲ ಮಾಡಬೇಕು ಎಂದರು.

ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್.ಶಂಕರಪ್ಪ ಮಾತನಾಡಿ, ವಾರ್ತಾ ಇಲಾಖೆ ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಸೇವೆ ಮತ್ತು ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ಎಷ್ಟು ಮುಖ್ಯವೋ, ಅದೇ ರೀತಿ ಸೌಲಭ್ಯಗಳು ಎಷ್ಟರ ಮಟ್ಟಿಗೆ ಸದ್ಬಳಕೆಯಾಗಿವೆ ಎಂಬುದನ್ನು ಜನರ ಮುಂದಿಡುವುದೂ ಸಹ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದ್ದು, ನೈಸರ್ಗಿಕ ಕೃಷಿ ಪದ್ಧತಿಯನ್ನು ಜಿಲ್ಲೆಯ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇನೆ ಎಂದರು.

ಕಾರ್ಯಕ್ರಮದ ನೆನಪಿಗಾಗಿ ಸುರೇಂದ್ರ ಅವರ ತೋಟದಲ್ಲಿ ಗಿಡ ನೆಡಲಾಯಿತು. ಮಂಡ್ಯದ ಅನನ್ಯ ಹಾರ್ಟ್ ಸಂಸ್ಥೆಯ ಅಧ್ಯಕ್ಷೆ ಅನುಪಮಾ, ಡಾ.ಪವಿತ್ರಾ, ಡಾ.ಪ್ರೇಮಾ, ಹೇಮಂತ್, ಹರ್ಷಿತ್ ಮತ್ತಿತರರು ಪಾಲ್ಗೊಂಡಿದ್ದರು.

ಕೃಷಿಯಲ್ಲಿ ಸಾಧನೆ ಮಾಡಿದ ಸುರೇಂದ್ರ: ರೈತನೋರ್ವ ವಿವೇಚನಾಶೀಲನಾಗಿ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ ಕೃಷಿಯಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ತಾಲೂಕಿನ ನಿಜಯಪ್ಪನದೊಡ್ಡಿಯ ಯುವ ರೈತ ಸುರೇಂದ್ರ ಉತ್ತಮ ನಿದರ್ಶನ.

ರಾಮನಗರದ ಜಾಲಮಂಗಲ ರಸ್ತೆಯ ಪುಟ್ಟಹಳ್ಳಿ ನಿಜಯಪ್ಪನದೊಡ್ಡಿಯ ಪ್ರಗತಿಪರ ರೈತ ಸುರೇಂದ್ರ ಅವರ ಬಳಿ ನಾಲ್ಕು ಎಕರೆ ಜಮೀನಿದೆ. ಇದ್ದ ಜಮೀನಿನಲ್ಲೇ ವ್ಯವಸ್ಥಿತವಾಗಿ ವಿವಿಧ ಜಾತಿಯ ಹಣ್ಣು, ತರಕಾರಿ ಸೇರಿ ಕೆಲ ವಿದೇಶಿ ತಳಿಗಳನ್ನು ಬಿತ್ತಿ, ಸಂಶೋಧನೆಯಲ್ಲೂ ತೊಡಗಿಕೊಂಡಿದ್ದಾರೆ. ಮಣ್ಣಿನ ಗುಣಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡು ಸಾವಯವ ಕೃಷಿಯಲ್ಲೇ ಜೀವನ ಕಟ್ಟಿಕೊಂಡಿದ್ದಾರೆ ಸುರೇಂದ್ರ.

ತೋಟದ ಸುತ್ತಲೂ ಮರಗಳ ಬೇಲಿ ನಿರ್ವಿುಸಿಕೊಂಡು ಬೆಳೆ ರಕ್ಷಣೆ ಮಾಡಿಕೊಂಡಿರುವುದು ಅವರ ಪ್ರಕೃತಿಪರ ಕಾಳಜಿ ತೋರಿಸುತ್ತದೆ. ದೀರ್ಘ ಕಾಲದ ಯೋಜನೆಗಳನ್ನು ರೂಪಿಸಿಕೊಂಡ ಅವರು, ಮಳೆ ಆಶ್ರಯದಲ್ಲಿ ಬದುಕು ಸಾಗಿಸುವುದನ್ನು ನಿಲ್ಲಿಸುವವರೆಗೆ ರೈತ ಸ್ವಾವಲಂಬಿಯಾಗಲು ಸಾಧ್ಯವಿಲ್ಲ ಎಂದು ಮೂರು ತಲೆಮಾರಿನ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಶ್ರೀಗಂಧ, ತೇಗ ಸೇರಿ ಬೆಲೆ ಬಾಳುವ ಮರಗಳನ್ನು ನೆಟ್ಟಿದ್ದಾರೆ. ನುಗ್ಗೆ, ಹೀರೆ, ಬೆಂಡೆ, ಪಡವಲ, ಸೋರೇಕಾಯಿ, ಬದನೆ, ಸೊಪ್ಪುಗಳು ಸೇರಿ ನಿತ್ಯ ಉಪಯೋಗಿ ತರಕಾರಿಗಳನ್ನು ಬೆಳೆಸಿದ್ದಾರೆ. ದೇಶಿ ಬೀಜ ಸಂರಕ್ಷಣೆ ಬಗ್ಗೆ ಆಳವಾಗಿ ಚಿಂತನೆ ನಡೆಸಿ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಕೃಷಿಗೆ ಪೂರಕವಾದ ಗೋಬರ್ ಗ್ಯಾಸ್ ಘಟಕ, ಎರೆಹುಳು ಗೊಬ್ಬರ ಘಟಕ, ಜೀವಾಮೃತ ಘಟಕ, ಮಳೆನೀರು ಇಂಗುಗುಂಡಿ ನಿರ್ವಿುಸಿಕೊಂಡು ಸಾವಯವ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ.

ರೈತರಿಗೆ ಅರಿವು: ಸುರೇಂದ್ರ ಅವರ ಸಾವಯವ ಕೃಷಿ ಸಾಧನೆ ಪರಿಗಣಿಸಿ ಹಲವು ಸಂಘ-ಸಂಸ್ಥೆಗಳು ಮತ್ತು ಸರ್ಕಾರ ಪೊ›ೕತ್ಸಾಹ ಮತ್ತು ಸಹಕಾರ ನೀಡಿವೆ. ಹಲವು ಪ್ರಶಸ್ತಿ-ಪುರಸ್ಕಾರವನ್ನು ನೀಡಿ ಗೌರವಿಸಿವೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಅವರ ತೋಟ ನೋಡಲು ಬರುವವರಿಗೆ ರಾಸಾಯನಿಕಗಳ ದುಷ್ಪರಿಣಾಮದ ಬಗ್ಗೆ ತಿಳಿ ಹೇಳುವ ಮೂಲಕ ರೈತರಲ್ಲಿ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *