ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮಕ್ಕಳಿಗೆ ವಚನಾನಂದ ಶ್ರೀಗಳಿಂದ ಅಕ್ಷರಾಭ್ಯಾಸ

ದಾವಣಗೆರೆ: ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆದ ಐವರು ಮಕ್ಕಳಿಗೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅಕ್ಷರಾಭ್ಯಾಸ ಮಾಡಿಸಿದರು.

ಭಾನುವಾರ ಶಾಲೆಯಲ್ಲಿ ಆಯೋಜಿಸಿದ್ದ ಅಕ್ಷರಾಭ್ಯಾಸ, ವಿದ್ಯಾರಂಭಂ ಕಾರ್ಯಕ್ರಮದಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ಎಚ್.ಪಿ. ಯತಿರಾಜ್, ಋತಿಕ್ ಎಸ್. ಉಪ್ಪಿನ್, ಆರಾಧ್ಯ ಡಿ. ಕುಲಕರ್ಣಿ, ಆದ್ಯಾ ಪಿ. ಕಾಂಬ್ಲೆ, ಕೃಪಾ ಎಸ್. ನಾಯಕ್ ಎಂಬ ಐವರು ಮಕ್ಕಳಿಗೆ ಶ್ರೀಗಳು ಸಾಂಕೇತಿಕವಾಗಿ ಅಕ್ಷರಾಭ್ಯಾಸ ಮಾಡಿಸಿದರು. ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಹೇಳಿಕೊಟ್ಟರು. ಬಳಿಕ ಎಲ್ಲಾ ಮಕ್ಕಳಿಗೂ ಆಶೀರ್ವಾದ ಮಾಡಿ, ಅಕ್ಷರ, ವಿದ್ಯೆಯ ಮಹತ್ವ ತಿಳಿಸಿಕೊಟ್ಟರು.

ವಿದ್ಯಾರ್ಥಿ ಯೋಗದ ಕೆಲವು ಆಸನಗಳನ್ನು ಪ್ರದರ್ಶಿಸಿದ ಅವರು, ಭಾರತೀಯ ಭಾಷೆಗಳ ಸತ್ವ ಇರುವುದು ಸ್ವರಗಳಲ್ಲಿ. ಇವುಗಳನ್ನು ಬಾಲ್ಯದಲ್ಲಿ ಜೋರಾಗಿ ಹೇಳಿದರೆ ಶರೀರದ ನರನಾಡಿಗಳು ಸಕ್ರಿಯವಾಗಿರುತ್ತವೆ. ಇದರಿಂದ ಮಾನಸಿಕ, ದೈಹಿಕ ಆರೋಗ್ಯ ದೃಢವಾಗಿರುತ್ತದೆ. ಆದ್ದರಿಂದಲೇ ಈ ಹಿಂದೆ ಶಾಲೆಗಳಲ್ಲಿ ನಾಲ್ಕು ಬಾರಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಈ ಸಂಸ್ಕೃತಿ ಭಾರತ ಸೇರಿ ಕೆಲವು ದೇಶಗಳಲ್ಲಿ ಮಾತ್ರ ಇದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಎ.ಆರ್. ದ್ವಾರಕನಾಥ್ ಮಾತನಾಡಿ, ಅಕ್ಷರಾಭ್ಯಾಸ ಪದ್ಧತಿ ಷೋಡಶ ಸಂಸ್ಕಾರಗಳಲ್ಲಿ ಒಂದು. ಇದನ್ನು ಎಲ್ಲಾ ಶಾಲೆಗಳು ಅಳವಡಿಸಿಕೊಂಡರೆ ಒಳ್ಳೆಯದು. ನಮ್ಮ ಶಾಲೆಯಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ಕೊಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಗಣಪತಿ ಹೋಮ ನೆರವೇರಿಸಲಾಗಿತ್ತು. ಶಾಲೆಯ ಕಾರ್ಯದರ್ಶಿ ಜಯಣ್ಣ, ಕರೆಸ್ಪಾಂಡೆಂಟ್ ಶಂಭುಲಿಂಗಪ್ಪ, ಸದಸ್ಯರಾದ ವಿನಾಯಕ, ಗಿರೀಶ್, ಪ್ರಾಚಾರ್ಯ ಮಂಜುನಾಥ್ ಇತರರಿದ್ದರು.