ಹಡಪದ ಅಪ್ಪಣ್ಣ ಶ್ರೇಷ್ಠ ಸಂತವಿಜಯವಾಣಿ ಸುದ್ದಿಜಾಲ ಹುಣಸೂರು
ಶಿವಶರಣ ಹಡಪದ ಅಪ್ಪಣ್ಣ ಶ್ರೇಷ್ಠ ಸಂತರಲ್ಲಿ ಒಬ್ಬರು ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಎಸ್.ಜಯರಾಂ ಅಭಿಪ್ರಾಯಪಟ್ಟರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ರಾಜ್ಯ ಸವಿತಾ ಸಮಾಜದ ತಾಲೂಕು ಘಟಕಗಳ ಸಹಯೋಗದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಮತ್ತು ಸವಿತಾ ಸಮಾಜದ ಮಹರ್ಷಿ ಅವರ 2 ನೇ ವರ್ಷದ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಬಸವಣ್ಣ ಅವರ ಶಿಷ್ಯನಾಗಿ ಅವರ ನೀತಿಯನ್ನು ಅನುಸರಿಸಿದ ಅಪ್ಪಣ್ಣ, ಜಾತೀಯತೆ ವಿಜೃಂಭಿಸುತ್ತಿದ್ದ ಸಮಯದಲ್ಲಿ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಸಮಾಜದ ಕಣ್ಣು ತೆರೆಸಲು ಪ್ರಯತ್ನಿಸಿದರು. ಗೊಡ್ಡು ಸಂಪ್ರದಾಯಗಳ ಕುರಿತು ವಚನಗಳ ಮೂಲಕ ಅರಿವು ಮೂಡಿಸಿದರು ಎಂದರು.
ಸವಿತಾ ಸಮುದಾಯಕ್ಕೆ ಇಂದಿನ ದಿನಗಳಲ್ಲಿ ಬ್ಯೂಟಿ ಪಾರ್ಲರ್ ಎಂಬ ಭೂತ ಕೊಡಲಿಪೆಟ್ಟು ನೀಡಿದೆ. ಸರ್ಕಾರಗಳು ಶೋಷಿತ ಸವಿತಾ ಸಮುದಾಯದ ಬೆಂಬಲಕ್ಕೆ ಮುಂದೆ ಬರಬೇಕಿದೆ ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಐ.ಇ.ಬಸವರಾಜು, ಇಒ ಗಿರೀಶ್, ಕಾಯಕ ಸಮುದಾಯಗಳ ಜಿಲ್ಲಾಧ್ಯಕ್ಷ ಪುಟ್ಟಸಿದ್ದಶೆಟ್ಟಿ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಲ್.ಆರ್.ನಾಗೇಶ್, ತಾಲೂಕು ಅಧ್ಯಕ್ಷ ಗೌರೀಶ್, ಉಪಾಧ್ಯಕ್ಷ ಬಾಬು, ಕಾರ್ಯದರ್ಶಿ ರಮೇಶ್ ಸೇರಿ ಪದಾಧಿಕಾರಿಗಳು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಹುಣಸೂರು-ಮೈಸೂರು ಹೆದ್ದಾರಿಯ ಆಂಜನೇಯಸ್ವಾಮಿ ದೇವಾಲಯದಿಂದ ಹಡಪದ ಅಪ್ಪಣ್ಣ ಅವರ ಭಾವಚಿತ್ರ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಸಲಾಯಿತು.

Leave a Reply

Your email address will not be published. Required fields are marked *