ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ 16ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನವನ್ನು ನ. 15, 16ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಸ.ರಾ.ಲೇಪಾಕ್ಷ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಉದ್ಯೋಗ ಸಾಧ್ಯತೆ, ಉದ್ಯಮಶೀಲತೆ ಮತ್ತು ಸಾಮಾಜಿಕ ಮುಖಾಮುಖಿ’ ನವದಿಕ್ಕಿನೆಡೆಗೆ ಸಮಾಜಶಾಸ್ತ್ರ ವಿಷಯ ಕುರಿತು ಸಮ್ಮೇಳನ ನಡೆಯಲಿದೆ ಎಂದರು.
ಇದೇ ವೇಳೆ 300ಕ್ಕೂ ಅಧಿಕ ಪ್ರಬಂಧ ಮಂಡನೆಯಾಗಲಿದ್ದು, ದುರ್ಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಸಂಕ್ಷಿಪ್ತ ಚಿತ್ರಣವನ್ನು ಪ್ರೊ.ಎಂ.ಗುರುಲಿಂಗಯ್ಯ ವಿವರಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನವನ್ನು 15ರಂದು ಬೆಳಗ್ಗೆ 10.30ಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸುವರು. ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಟಿ. ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಶೃತಿ ತಾಂಬೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಎಂಎಲ್ಸಿ ಕೆ.ಎಸ್.ನವೀನ್, ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತೆ ಎನ್.ಮಂಜುಶ್ರೀ, ಜಂಟಿ ನಿರ್ದೇಶಕ ಕೆ.ಎ.ವಿಷ್ಣುಮೂರ್ತಿ, ಇಂಡಿಯನ್ ಸೋಷಿಯಾಲಾಜಿಕಲ್ ಸೊಸೈಟಿ ಮಾಜಿ ಅಧ್ಯಕ್ಷೆ ಪ್ರೊ.ಆರ್.ಇಂದಿರಾ ಭಾಗವಹಿಸಲಿದ್ದಾರೆ ಎಂದರು.
16ರ ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೂ ಸಮಾರೋಪ ನಡೆಯಲಿದೆ. ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ರಾಮೇಗೌಡ, ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಸುಭಾಷ್ ಚಂದ್ರ ಸಿ.ನಾಟಿಕರ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಉಪನ್ಯಾಸಕರಾದ ಎಸ್.ಆನಂದ್, ಪ್ರೊ.ನಯಾಜ್ ಇದ್ದರು.