ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲಮನ್ನಾಕ್ಕೆ ವಿಳಂಬ

ಶಿವಮೊಗ್ಗ: ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲಮನ್ನಾ ಮಾಡಲು ವಿಳಂಬ ನೀತಿ ಖಂಡಿಸಿ ಜಿಲ್ಲಾ ಜೆಡಿಎಸ್ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪೂರ್ವ ಭರವಸೆಯಂತೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲ ಮನ್ನಾ ಘೊಷಿಸಿದ್ದಾರೆ. ಸಹಕಾರಿ ಕ್ಷೇತ್ರದ ಸಾಲಮನ್ನಾ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಆದರೆ ರಾಷ್ಟ್ರೀಯ ಬ್ಯಾಂಕ್​ಗಳು ನಿರ್ಲಕ್ಷ್ಯ ತೋರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 13 ಸಾವಿರಕ್ಕೂ ಹೆಚ್ಚು ರೈತರು ರಾಷ್ಟ್ರೀಕೃತ ಬ್ಯಾಂಕ್​ಗಳ ವಿಳಂಬ ನೀತಿಯಿಂದ ತೊಂದರೆಗೆ ಒಳಗಾಗಿದ್ದಾರೆ. ಕೂಡಲೆ ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ಮಾಡಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಭದ್ರಾ ಅಣೆಕಟ್ಟೆ ಕಟ್ಟಲು ಮನೆ ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ ಶಿವಮೊಗ್ಗ ತಾಲೂಕಿನ ಹುರುಳಿಹಳ್ಳಿ, ತೋಟದಕೆರೆ, ಲಕ್ಕಿನಕೊಪ್ಪ ಗ್ರಾಮಗಳಲ್ಲಿ ಜಮೀನು ಮಂಜೂರು ಮಾಡಲಾಗಿದೆ. ಸಾಗುವಳಿದಾರರಿಗೆ ಹಕ್ಕುಪತ್ರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲಿ ಶಾಸಕ ಪ್ರೀತಂಗೌಡ ನಿವಾಸದ ಎದುರು ಶಾಂತಿಯುತ ಪ್ರತಿಭಟನೆ ನಡೆಸಿದರೂ ಗೂಂಡಾಗಿರಿ ನಡೆಸಿದ್ದಾರೆಂದು ರಾಜ್ಯಪಾಲರಿಗೆ ದೂರಲಾಗಿದೆ. ಪ್ರೀತಂಗೌಡ ನೇರ ಹೊಣೆ ಆಗಿದ್ದಾರೆ ಎಂದು ಆರೋಪಿಸಿದರು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಮೌಲ್ಯ ಕುಸಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಜೆಡಿಎಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ. ಮಂಜುನಾಥ್​ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಎಚ್.ಪಾಲಾಕ್ಷಿ, ನಾಗರಾಜ್ ಕಂಕಾರಿ, ಜಿ.ಡಿ.ಮಂಜುನಾಥ್, ಶಾಂತಾ ಸುರೇಂದ್ರ ಮತ್ತಿತರರು ಇದ್ದರು.