ರಾಷ್ಟ್ರಪತಿ ಪಟ್ಟ ಯಾರಿಗೆ?

ರಾಷ್ಟ್ರಪತಿ ಆಯ್ಕೆಗಾಗಿ ಇಂದು (ಜುಲೈ 17) ಮತದಾನ ನಡೆಯಲಿದೆ. ಒಟ್ಟು 4,851 ಸಂಸದರು ಮತ್ತು ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಎನ್​ಡಿಎ ಅಭ್ಯರ್ಥಿ ರಾಮನಾಥ ಕೋವಿಂದ ಮತ್ತು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಜು.20ರಂದು ಫಲಿತಾಂಶ ಪ್ರಕಟವಾಗಲಿದ್ದು, ರಾಜಕೀಯ ಪಕ್ಷಗಳ ಸಮೀಕರಣಗಳನ್ನು ಗಮನಿಸಿದರೆ ಕೋವಿಂದ ಗೆಲುವ ಖಚಿತ ಎನ್ನಲಾಗಿದೆ. ಒಂದು ವೇಳೆ ಕೋವಿಂದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದೇ ಆದಲ್ಲಿ ದೇಶಕ್ಕೆ ಒಂಭತ್ತು ಪ್ರಧಾನಮಂತ್ರಿಗಳನ್ನು ನೀಡಿದ ಉತ್ತರಪ್ರದೇಶದಿಂದ ಮೊದಲ ಬಾರಿ ರಾಷ್ಟ್ರಪತಿಯೊಬ್ಬರ ಆಯ್ಕೆಯಾದಂತಾಗಲಿದೆ. ಅದೇ ಮೀರಾ ಕುಮಾರ್ ಆಯ್ಕೆಯಾದಲ್ಲಿ ಪ್ರತಿಭಾ ಪಾಟೀಲ್ ಬಳಿಕ ರಾಷ್ಟ್ರಪತಿಯಾಗಿ ಆಯ್ಕೆಯಾದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇವರಿಬ್ಬರಲ್ಲಿ ಯಾರೇ ಜಯಗಳಿಸಿದರೂ ಕೆ. ಆರ್. ನಾರಾಯಣನ್ ಬಳಿಕ ರಾಷ್ಟ್ರಪತಿಯಾದ ದಲಿತ ನಾಯಕರಾಗಲಿದ್ದಾರೆ.

ಹೀಗೆ ಗೆದ್ದಿದ್ದರು ಮುಖರ್ಜಿ

2012ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಇಬ್ಬರು ಸ್ಪರ್ಧಿಗಳಿದ್ದರು. ಈ ಚುನಾವಣೆಯಲ್ಲಿ ಒಟ್ಟು 10,29,750 ಮೌಲ್ಯದ ಮತ ಚಲಾವಣೆಯಾಗಿತ್ತು. ಈ ಪೈಕಿ 7,13,763 ಮತಗಳನ್ನು ಗಳಿಸುವ ಮೂಲಕ ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.

ಮತಗಳ ಮೌಲ್ಯ ಅಳೆಯುವುದು ಹೇಗೆ?

ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸುವ ಪ್ರತಿಯೊಬ್ಬ ಸಂಸದ ಮತ್ತು ಶಾಸಕರ ಮತಗಳಿಗೂ ಒಂದು ಮೌಲ್ಯ ನಿಗದಿಪಡಿಸಲಾಗಿರುತ್ತದೆ. ಮೌಲ್ಯ ನಿರ್ಧಾರದಲ್ಲಿ ರಾಜ್ಯದ ಜನಸಂಖ್ಯೆ ಮಹತ್ವದ ಪಾತ್ರವಹಿಸುತ್ತದೆ. ಸಂಸದರು ಮತ್ತು ಶಾಸಕರ ಮತಗಳ ಮೌಲ್ಯ ಅಳೆಯುವುದಕ್ಕೆ ಎರಡು ಬಗೆಯ ಫಾಮುಲಾಗಳನ್ನು ಬಳಸಲಾಗುತ್ತದೆ.

ಥಿ ಶಾಸಕರು: ಇವರ ಮತದ ಮೌಲ್ಯ ಅಳೆಯು ವುದಕ್ಕೆ ಎಲ್ಲ ಶಾಸಕರ ಸಂಖ್ಯೆಯನ್ನು 1000ದಿಂದ ಗುಣಿಸಲಾಗುತ್ತದೆ. ಇದನ್ನು ಆಯಾಯ ರಾಜ್ಯದಲ್ಲಿ 1971ರಲ್ಲಿದ್ದ ಒಟ್ಟು ಜನಸಂಖ್ಯೆಯಿಂದ ಭಾಗಿಸಲಾಗುತ್ತದೆ. ದೇಶಾದ್ಯಂತ ಇರುವ ಶಾಸಕರ ಮತಗಳ ಒಟ್ಟು ಮೌಲ್ಯ 5,43,218 ಆಗಿದೆ. ಉದಾಹರಣೆಗೆ ಮಧ್ಯಪ್ರದೇಶದಲ್ಲಿ ಶಾಸಕರ ಸಂಖ್ಯೆ 230 ಇದೆ. ಇದನ್ನು 1000ದಿಂದ ಗುಣಿಸಬೇಕು. ಇದರಿಂದ ಬಂದ ಉತ್ತರದಿಂದ 1971ರಲ್ಲಿ ಇಲ್ಲಿದ್ದ ಜನಸಂಖ್ಯೆ 30,017,180ಯನ್ನು ಭಾಗಿಸಬೇಕು. ಆಗ 131 ಆಗುತ್ತದೆ. ಅಂದರೆ ಅಲ್ಲಿನ ಶಾಸಕರ ಮತದ ಮೌಲ್ಯ 131.

ಥಿ ಸಂಸದರು: ಇವರ ಮತದ ಮೌಲ್ಯ ಅಳೆಯುವುದಕ್ಕೆ ಶಾಸಕರ ಒಟ್ಟು ಮತದ ಮೌಲ್ಯವನ್ನು ಸಂಸದರ ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಅಂದರೆ ಶಾಸಕರ ಮತದ ಮೌಲ್ಯ 5,43,218ನ್ನು 776ರಿಂದ ಭಾಗಿಸಲಾಗುತ್ತದೆ. ಪ್ರತಿಯೊಬ್ಬ ಸಂಸದರ ಮತದ ಮೌಲ್ಯ 708 ಆಗಿರುತ್ತದೆ. ಸಂಸದರ ಸಂಖ್ಯೆ ಮಧ್ಯದಲ್ಲಿ ಕಡಿಮೆಯಾದರೆ ಮೌಲ್ಯ ಕಡಿಮೆಯಾಗುವುದಿಲ್ಲ.

ರಾಷ್ಟ್ರಪತಿಯ ಅಧಿಕಾರವೇನು?

ಭಾರತದ ರಾಷ್ಟ್ರಪತಿಗಳಿಗೆ ಎಕ್ಸಿಕ್ಯುಟಿವ್ ಪವರ್ ನೀಡಲಾಗಿದೆ. ಆದರೆ ಸಂಸತ್ತಿನಲ್ಲಿ ದೋಷಾ ರೋಪಣೆ (ಇಂಪೀಚ್​ವೆುಂಟ್) ಪ್ರಕ್ರಿಯೆಯಿಂದ ರಾಷ್ಟ್ರಪತಿಯನ್ನು ಅವರ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿದೆ. ಆದರೆ ಸಂವಿಧಾನಕ್ಕೆ ವಿರೋಧವಾಗಿ ನಡೆದಾಗ ಮಾತ್ರವೇ ದೋಷಾರೋಪಣೆ ಮಾಡಬಹುದಾಗಿದೆ. ರಾಷ್ಟ್ರಪತಿ ನಿರ್ಧಾರದ ಮರುಪರಿಶೀಲನೆ ಸೂಚಿಸಬಹುದಾಗಿದೆ. ಆದರೆ 2ನೇ ಬಾರಿಯೂ ತಪ್ಪೆಂದು ಸಹಮತಕ್ಕೆ ಬಂದಲ್ಲಿ ರಾಷ್ಟ್ರಪತಿ ಸ್ಥಾನ ತ್ಯಜಿಸಬೇಕಾಗುತ್ತದೆ.

ಗೆಲುವಿಗೆ ಎಷ್ಟು ಮತಗಳು ಅಗತ್ಯ?

ಅಭ್ಯರ್ಥಿಯು ರಾಷ್ಟ್ರಪತಿಯಾಗಿ ಆಯ್ಕೆಯಾಗಬೇಕೆಂದರೆ ಎಲ್ಲ ಸಂಸದರು ಮತ್ತು ಶಾಸಕರ ಒಟ್ಟು ಮತದ ಮೌಲ್ಯದ ಶೇ.50ಕ್ಕಿಂತ ಒಂದು ಮತ ಹೆಚ್ಚಾಗಿ ಪಡೆದಿರಬೇಕಾಗಿರುತ್ತದೆ. ಮತಗಳ ಒಟ್ಟು ಮೌಲ್ಯ 3,84, 444+1,63,548+5,43,218=10,91,210 ಆಗಿರುತ್ತದೆ. ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಅಭ್ಯರ್ಥಿಯೋರ್ವರು 10,91,210ನ್ನು 2ರಿಂದ ಭಾಗಿಸಿದಾಗ ಬರುವ ಮೌಲ್ಯಕ್ಕೆ ಒಂದನ್ನು ಸೇರಿಸಿದಷ್ಟು ಅಂದರೆ 5,45,606 ಮತದ ಮೌಲ್ಯ ಗಳಿಸುವ ಅಗತ್ಯವಿರಲಿದೆ.

ಸಂಸದರು ಮತ್ತು ಶಾಸಕರ ಮತಗಳ ಮೌಲ್ಯವೆಷ್ಟು?

  •  ಲೋಕಸಭೆ: 543 ಸಂಸದರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಪ್ರತಿಯೊಬ್ಬ ಸಂಸದನ ಮತದ ಮೌಲ್ಯ 708. ಹೀಗಾಗಿ ಸಂಸದರ ಮತಗಳ ಒಟ್ಟು ಮೌಲ್ಯ 543708= 3,84,444 ಆಗಿರಲಿದೆ.
  •  ರಾಜ್ಯಸಭೆ: 233 ಸಂಸದರಿದ್ದಾರೆ. ಆದರೆ ಇದರಲ್ಲಿ ಇಬ್ಬರಿಗೆ ಮತ ಚಲಾಯಿಸಲಾಗುವುದಿಲ್ಲ. ಹೀಗಾಗಿ 231 ಸಂಸದರು ಮಾತ್ರ ಮತ ಚಲಾಯಿಸಲು ಅರ್ಹರು. ಇವರ ಮತಗಳ ಮೌಲ್ಯ ಕೂಡ 708 ಆಗಿದೆ. ಎಲ್ಲ ಸಂಸದರ ಮತಗಳ ಒಟ್ಟು ಮೌಲ್ಯ 231708= 1,63,548 ಆಗಿರಲಿದೆ.
  •  ಶಾಸಕರು: ದೇಶಾದ್ಯಂತದ 31 ವಿಧಾನಸಭೆಗಳ 4120 ಶಾಸಕರಿದ್ದಾರೆ. ಆದರೆ ಕೆಲವು ರಾಜ್ಯಗಳಲ್ಲಿ ಕೆಲ ಶಾಸಕರನ್ನು ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ 4076 ಶಾಸಕರಷ್ಟೇ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಪ್ರತಿಯೊಂದು ರಾಜ್ಯದ ಶಾಸಕರ ಮತಗಳ ಮೌಲ್ಯ ಭಿನ್ನ ಭಿನ್ನವಾಗಿರುತ್ತದೆ. ಶಾಸಕರ ಮತಗಳ ಒಟ್ಟು ಮೌಲ್ಯ 5,43,218 ಆಗಿದೆ. ಆದರೆ ರಾಜ್ಯಸಭೆಯ 12 ನಾಮನಿರ್ದೇಶಿತ ಸದಸ್ಯರು ಮತ್ತು ಲೋಕಸಭೆಯ ಇಬ್ಬರು ಆಂಗ್ಲೋ ಇಂಡಿಯನ್ಸ್ ಸಮಿತಿಯ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಯಾರ ಬೆಂಬಲ ಯಾರಿಗೆ?

ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೊಷಿಸುವುದಕ್ಕೂ ಮೊದಲು ಎನ್​ಡಿಎ ಒಟ್ಟು ಮತ ಪ್ರಮಾಣ ಶೇ.48.10 ಆಗಿತ್ತು. ಕೋವಿಂದ ಹೆಸರು ಘೊಷಣೆಯಾಗುತ್ತಿದ್ದಂತೆ ಕೆಲ ಪಕ್ಷಗಳು ಬೆಂಬಲ ಘೊಷಿಸಿದವು. ಅವುಗಳು ಇಂತಿವೆ.

ಪಕ್ಷ ಮತಪ್ರಮಾಣ(ಶೇಕಡವಾರು)

ಟಿಆರ್​ಎಸ್ 1.99

ಎಐಎಡಿಎಂಕೆ 5.39

ವೈಎಸ್​ಆರ್ ಕಾಂಗ್ರೆಸ್ 1.53

ಜೆಡಿಯು 1.89

ಬಿಜೆಡಿ 2.99

ಹೀಗಾಗಿ ಇದೀಗ ಎನ್​ಡಿಎ ಬಳಿ ಇರುವ ಮತ ಪ್ರಮಾಣ ಶೇ.61.89 ಆಗಿದೆ.

ಉತ್ತಮ ವರ್ಚಸ್ಸಿನ ಕೋವಿಂದ

71 ವರ್ಷದ ರಾಮನಾಥ ಕೋವಿಂದ ಉತ್ತಮ ನಾಯಕರೆಂಬ ವರ್ಚಸ್ಸು ಹೊಂದಿದ್ದಾರೆ. ಕಾನೂನು ಮತ್ತು ಸಂವಿಧಾನದಲ್ಲಿ ಪಾಂಡಿತ್ಯ ಹೊಂದಿದ್ದು, ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಇವರು, ಬಿಹಾರದ ರಾಜ್ಯಪಾಲರಾಗಿದ್ದರು.

ರಾಷ್ಟ್ರಪತಿಯಾಗಿ ಆಯ್ಕೆಯಾದಲ್ಲಿ ಆ ಸ್ಥಾನದ ಗೌರವ ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಭಾರತೀಯರಾಗಿ ನಮ್ಮ ಸಂವಿಧಾನಕ್ಕೆ ಗೌರವಿಸುವುದು ಎಲ್ಲರ ಕರ್ತವ್ಯ. ಸಂವಿಧಾನದ ಆಧಾರವಾಗಿ ಜಾತಿ, ಧರ್ಮ, ಲಿಂಗ ಅಥವಾ ಭಾಷೆಯ ಆಧಾರದಲ್ಲಿ ಯಾವುದೇ ರೀತಿಯ ಭೇದಭಾವ ಮಾಡಬಾರದು. ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುವೆ.

| ರಾಮನಾಥ ಕೋವಿಂದ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ

 

ಕೋವಿಂದ ರಾಷ್ಟ್ರಪತಿಯಾದರೆ ಲಾಭವೇನು?

ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತವಿದೆ. 17 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಎನ್​ಡಿಎ ಅಭ್ಯರ್ಥಿಯೇ ರಾಷ್ಟ್ರಪತಿಯಾಗಿ ಆಯ್ಕೆಯಾದಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗಲಿದೆ.

ಭೂಸ್ವಾದೀನ ಮಸೂದೆ ಮತ್ತೆ ಜಾರಿಗೆ ತರುವ ಸಾಧ್ಯತೆಯಿದೆ. ಮೂರು ಬಾರಿ ಸುಗ್ರೀವಾಜ್ಞೆ ಜಾರಿಗೊಳಿಸಿದ ಹೊರತಾಗಿಯೂ ಇದನ್ನು ಕೈಬಿಡಬೇಕಾಯಿತು ಎಂಬುದು ಗಮನಾರ್ಹ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಜತೆಯಲ್ಲಿಯೇ ಮಾಡುವುದಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ಬೇಗನೆ ತೆಗೆದುಕೊಳ್ಳಬಹುದು. ಚುನಾವಣೆಗಳಲ್ಲಿ ರಾಜ್ಯದ ಫಂಡಿಂಗ್ ಬಗ್ಗೆ ಸಾಕಷ್ಟು ವಿವಾದಗಳಿವೆ. ಇದರ ಪರಿಹಾರಕ್ಕಾಗಿ ಹೊಸ ಕಾನೂನು ಜಾರಿಗೆ ತರುವ ಸಾಧ್ಯತೆಯಿದೆ.

ಸರಳ ನಾಯಕಿ ಮೀರಾ ಕುಮಾರ್

ಬಿಹಾರದಲ್ಲಿ ಜನಿಸಿದ ಮೀರಾ ಕುಮಾರ್ (72) ಸರಳ ಹಾಗೂ ಸೌಜನ್ಯದ ವ್ಯಕ್ತಿತ್ವ ಹೊಂದಿದ್ದು, ಉತ್ತಮ ನಾಯಕಿಯಾಗಿ ವರ್ಚಸ್ಸು ಪಡೆದಿದ್ದಾರೆ. ಲೋಕಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇಂಡಿಯನ್ ಫಾರಿನ್ ಸರ್ವಿಸ್​ನಲ್ಲಿ ಸೇವೆ ಸಲ್ಲಿಸಿದ್ದರಿಂದ ವಿದೇಶ ನೀತಿಗಳ ಬಗ್ಗೆ ಅರಿವು ಹೊಂದಿದ್ದು, ದಲಿತ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಉಪಪ್ರಧಾನಿಯಾಗಿದ್ದ ಜಗಜೀವನರಾಮ್ ಅವರ ಮಗಳೆಂಬ ಹಿರಿಮೆ. ರಾಮವಿಲಾಸ್ ಪಾಸ್ವಾನ್ ಮತ್ತು ಮಾಯಾವತಿಯಂಥ ದಿಗ್ಗಜ ನಾಯಕರಿಗೆ ಚುನಾವಣೆಯಲ್ಲಿ ಸೋಲಿನ ರುಚಿ ಉಣಿಸಿದ್ದಾರೆ. ಕರೋಲ್​ಬಾಗ್ ಕ್ಷೇತ್ರದಿಂದ 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಕುಂದಿದ ಪ್ರತಿಪಕ್ಷಗಳ ಬಲ

ಎನ್​ಡಿಎ ರಾಮನಾಥ ಕೋವಿಂದರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೊಷಣೆ ಮಾಡುವ ಮೊದಲೇ ಎಲ್ಲ ಪ್ರತಿಪಕ್ಷಗಳು ಒಂದಾಗಿದ್ದರೆ ಅವರ ಒಟ್ಟು ಮತ 5,68,148 ಆಗಿರುತ್ತಿತ್ತು. ಅಂದರೆ ಶೇ.51.90 ಮತಗಳಿರುತ್ತಿದ್ದವು. ಯುಪಿಎ ಮೀರಾ ಕುಮಾರ್ ಅವರನ್ನು ಅಭ್ಯರ್ಥಿ ಎಂದು ಘೊಷಣೆ ಮಾಡಿದ ಬಳಿಕ ಬಿಎಸ್​ಪಿ ಯುಪಿಎಗೆ ಬೆಂಬಲಿಸಿದೆ. ಸಮಾಜವಾದಿ ಪಕ್ಷದಲ್ಲಿ ಇಬ್ಬಂದಿ ನಿಲುವಿದೆ. ಮುಲಾಯಂ-ಶಿವಪಾಲ್ ಕೋವಿಂದ ಪರವಿದ್ದರೆ, ಅಖಿಲೇಶ್ ಮೀರಾ ಕುಮಾರ್​ರನ್ನು ಬೆಂಬಲಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷ ಮೀರಾ ಕುಮಾರ್​ರನ್ನು ಬೆಂಬಲಿಸುವ ಸಾಧ್ಯತೆಯಿದೆ.

ಪಕ್ಷ ಮತಪ್ರಮಾಣ (ಶೇಕಡವಾರು)

ಎಸ್ಪಿ 2.36

ಬಿಎಸ್ಪಿ 0.74

ಎಎಪಿ 0.82

ಐಎನ್​ಡಿಎಲ್ 0.38

ಸದ್ಯ ಯುಪಿಎ ಮತ ಪ್ರಮಾಣ 4,34,241 ಅಂದರೆ ಶೇ.39.70.

ಈ ಚುನಾವಣೆ ಜಾತ್ಯತೀತತೆಯ ರಕ್ಷಣೆ ಹಾಗೂ ವಿಚಾರಧಾರೆ ನಡುವಿನ ಸಮರವಾಗಿದೆ. ಎಲ್ಲ ಶಾಸಕರು ಮತ್ತು ಸಂಸದರು ಅಂತರಾತ್ಮದ ಕರೆಗೆ ಓಗೊಟ್ಟು ಮತ ನೀಡಬೇಕು. ಆ ಮೂಲಕ ಈ ದೇಶದ ಭವಿಷ್ಯವನ್ನು ಮತ್ತಷ್ಟು ಉಜ್ವಲವಾಗಿಸಲು ಮುಂದಾಗಬೇಕು.

| ಮೀರಾ ಕುಮಾರ್ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ

ನಾಮಪತ್ರ ಊರ್ಜಿತವಾಗಬೇಕಾದರೆ, ಅಭ್ಯರ್ಥಿ ಭಾರತೀಯನಾಗಿರಬೇಕು, 35 ವರ್ಷ ವಯಸ್ಸು ಪೂರ್ತಿಯಾಗಬೇಕು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಲಾಭದಾಯಕ ಹುದ್ದೆ ನಿರ್ವಹಿಸುತ್ತಿರಬಾರದು. 1974ರ ನಿಯಮ ಪ್ರಕಾರ, ಕನಿಷ್ಠ 50 ಅನುಮೋದಕರು ಮತ್ತು ಕನಿಷ್ಠ 50 ಬೆಂಬಲಿಸುವವರ ಸಹಿಯೊಂದಿಗೆ ಫಾರಂ ನಂ. 2ನ್ನು ಭರ್ತಿ ಮಾಡಿ, ಖುದ್ದು ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಇದೇ ಸಂದರ್ಭದಲ್ಲಿ ಸುರಕ್ಷಾ ಠೇವಣಿಯಾಗಿ 15 ಸಾವಿರ ರೂಪಾಯಿ ಇಡಬೇಕು. ಈ ಠೇವಣಿಯನ್ನು ಅವರ ಹೆಸರಿನಲ್ಲಿ ಆರ್​ಬಿಐ ಅಥವಾ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗುವುದು. ನಾಮಪತ್ರದ ಜತೆಗೆ ದೃಢೀಕೃತ ಮತದಾರರ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು. ಒಂದು ಚುನಾವಣೆಯಲ್ಲಿ ಒಬ್ಬ ಮತದಾರ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಯನ್ನು ಅನುಮೋದಿಸುವಂತಿಲ್ಲ. ನಾಮಪತ್ರ ಸ್ವೀಕರಿಸುವ ನಿಗದಿತ ದಿನಗಳಲ್ಲಿ ಬೆಳಗ್ಗೆ 11 ಮತ್ತು ಮಧ್ಯಾಹ್ನ 3 ಗಂಟೆ ನಡುವಿನ ಅವಧಿಯ ಹೊರತಾಗಿ ಉಳಿದ ಸಮಯದಲ್ಲಿ ನಾಮಪತ್ರ ಸ್ವೀಕರಿಸುವಂತಿಲ್ಲ.

ರಾಷ್ಟ್ರಪತಿ ಆಗುವುದಕ್ಕೆ ಅರ್ಹತೆಗಳೇನು ಬೇಕು?

ಸಂವಿಧಾನದ 58ನೇ ಪರಿಚ್ಛೇದ ಪ್ರಕಾರ, ಭಾರತೀಯ ಪ್ರಜೆ ಆಗಿದ್ದು, ಕನಿಷ್ಠ 35 ವರ್ಷ ವಯಸ್ಸು ಆಗಿರಬೇಕು. ಹಾಲಿ ಉಪರಾಷ್ಟ್ರಪತಿ, ಯಾವುದೇ ರಾಜ್ಯದ ಗವರ್ನರ್, ಅಥವಾ ಸಚಿವರು ರಾಷ್ಟ್ರಪತಿಯಾಗಿ ಅಯ್ಕೆ ಆಗಬಹುದು. ಇವರು ಸ್ಪರ್ಧಿಸಬೇಕಾದರೆ, ತಾವಿರುವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. 1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಕಾಯಿದೆಯಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಇನ್ನಾವುದೆ ಸ್ಥಳೀಯ ಸಂಸ್ಥೆಗಳ ಯಾವುದಾದರೂ ಲಾಭದಾಯಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ.

ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಘೊಷಣೆ ಇಂದು

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿದ್ದು, ಎನ್​ಡಿಎ ಅಭ್ಯರ್ಥಿ ಘೊಷಣೆ ಸೋಮವಾರ ಸಂಜೆ ಹೊತ್ತಿಗೆ ಆಗಲಿದೆ. ಅಭ್ಯರ್ಥಿ ಹೆಸರನ್ನು ಗುಟ್ಟಾಗಿರಿಸಲಾಗಿದ್ದು, ಜು. 17ರಂದು ನಡೆಯುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಕಟವಾಗಲಿದೆ ಎಂದು ಮೂಲಗಳು ಹೇಳಿವೆ.

ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ರಾಮನಾಥ ಕೋವಿಂದ ಅವರಿಗೆ ಎನ್​ಡಿಎಯೇತರ ಅನೇಕ ಪಕ್ಷಗಳು ಬೆಂಬಲ ಸೂಚಿಸಿವೆ. ಹೀಗಿರುವಾಗ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರನ್ನು ಘೊಷಣೆ ಮಾಡಿ, ಆ ಅಭ್ಯರ್ಥಿಯು ರಾಷ್ಟ್ರಪತಿ ಚುನಾವಣೆಗೆ ಬೆಂಬಲ ಸೂಚಿಸಿರುವ ಇತರ ಪಕ್ಷಗಳಿಗೆ ಇಷ್ಟವಾಗದಿದ್ದರೆ ಅದರಿಂದ ಮತದಾನದ ಮೇಲೆ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರಪತಿ ಚುನಾವಣೆ ಮತದಾನ ಮುಗಿದ ಬಳಿಕ ಹೆಸರು ಘೊಷಣೆ ಮಾಡುವ ಕಾರ್ಯತಂತ್ರ ಬಿಜೆಪಿ ಅನುಸರಿಸಿದೆ.

ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿ ಘೊಷಣೆ ಆಗುವುದಕ್ಕೂ ಮೊದಲೇ ಎನ್​ಡಿಎ ಬಿಹಾರದ ರಾಜ್ಯಪಾಲ ರಾಮನಾಥ ಕೋವಿಂದ ಅವರನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿತ್ತು. ಇದರಿಂದ ವಿರೋಧ ಪಕ್ಷಗಳು ದಲಿತ ಕಾರ್ಡನ್ನೇ ಅನಿವಾರ್ಯವಾಗಿ ಬಳಸುವ ಸಂದಿಗ್ಧತೆಗೆ ಒಳಗಾಗಿ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಆಯ್ಕೆ ಮಾಡಿದವು. ಆದರೆ, ಉಪರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ 18 ವಿರೋಧ ಪಕ್ಷಗಳು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಈ ಮೂಲಕ ಆಡಳಿತಾರೂಢ ಎನ್​ಡಿಎ ಅಭ್ಯರ್ಥಿ ಆಯ್ಕೆಗೂ ಮುಂಚೆಯೇ ಅಂತಿಮಗೊಳಿಸಿ ಒಗ್ಗಟ್ಟು ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ. ಆ.5ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್​ನ ಉಭಯ ಸದನಗಳ ಸದಸ್ಯರು (790) ಮಾತ್ರ ಮತದಾನದ ಹಕ್ಕನ್ನು ಹೊಂದಿದ್ದು, ಎನ್​ಡಿಎ 500ಕ್ಕೂ ಹೆಚ್ಚು ಸಂಸದರ ಬೆಂಬಲ ಹೊಂದಿದೆ.

ಬೆಂಗಳೂರಿನಲ್ಲಿ ಸಕಲ ಸಿದ್ಧತೆ

ರಾಷ್ಟ್ರಪತಿ ಚುನಾವಣೆಗೆ ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ 106ನೇ ಕೊಠಡಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವಾರವಷ್ಟೆ ನವದೆಹಲಿಯಿಂದ ತಂದಿರುವ ಮತಪೆಟ್ಟಿಗೆಯನ್ನು 107ನೇ ಕೊಠಡಿಯಲ್ಲಿ(ಸ್ಟ್ರಾಂಗ್ ರೂಂ) ಭದ್ರವಾಗಿರಿಸಲಾಗಿದೆ. ದೇಶಾದ್ಯಂತ ನಡೆಯುವ ಚುನಾವಣೆ ಪ್ರಕ್ರಿಯೆಗೆ ಲೋಕಸಭೆ ಕಾರ್ಯದರ್ಶಿ ಅನೂಪ್ ಮಿಶ್ರಾ ಅವರು ಮುಖ್ಯ ಚುನಾವಣಾಧಿಕಾರಿಯಾಗಿದ್ದು, ಎಲ್ಲ ರಾಜ್ಯಗಳ ವಿಧಾನಸಭೆ ಕಾರ್ಯದರ್ಶಿಗಳನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರ ಉಸ್ತುವಾರಿಯಲ್ಲಿ ಸೋಮವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಚುನಾವಣೆ ನಡೆಯಲಿದೆ. ಈ ಕುರಿತು ಮಾತನಾಡಿದ ವಿಧಾನಸಬೆ ಕಾರ್ಯದರ್ಶಿ ಎಸ್. ಮೂರ್ತಿಯವರು, ಪರೋಕ್ಷ ಚುನಾವಣೆ ಮೂಲಕ ರಾಷ್ಟ್ರಪತಿ ಆಯ್ಕೆ ನಡೆಯುತ್ತದೆ. ಜನರು ತಮ್ಮ ಪ್ರತಿನಿಧಿಗಳ ಮೂಲಕ ಆಯ್ಕೆ ಮಾಡುತ್ತಾರೆ. ರಾಜ್ಯದ ಶಾಸಕರೊಬ್ಬರಿಗೆ 131 ಹಾಗೂ ಸಂಸದರೊಬ್ಬರಿಗೆ 708 ಮತ ಮೌಲ್ಯ ನಿಗದಿಯಾಗಿದೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

224+1 ಸದಸ್ಯರ ಮತದಾನ

ಯಾವುದೇ ರಾಜ್ಯದ ಶಾಸಕ, ಸಂಸದರು ತಮಗಿಷ್ಟದ ರಾಜ್ಯದಲ್ಲಿ ಮತದಾನ ಮಾಡಬಹುದು ಎಂಬುದು ರಾಷ್ಟ್ರಪತಿ ಚುನಾವಣೆಯ ವಿಶೇಷವಾಗಿದೆ. ಈ ಕುರಿತು ವಾರದ ಮೊದಲು ತಮ್ಮ ರಾಜ್ಯದ ವಿಧಾನಸಭೆಗೆ ತಿಳಿಸಿದರೆ ಅವರಿಗಿಷ್ಠದ ರಾಜ್ಯದ ವಿಧಾನಸಭೆಗೆ ಮತಪತ್ರ ಹಾಗೂ ಮತಮೌಲ್ಯವನ್ನು ವರ್ಗಾವಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಕರ್ನಾಟಕದಲ್ಲಿ ಮತದಾನ ಮಾಡುವುದಾಗಿ ಯಾವುದೇ ರಾಜ್ಯದ ಜನಪ್ರತಿನಿಧಿಗಳಾಗಲಿ, ಬೇರೆ ರಾಜ್ಯ ಬೇಕು ಎಂದು ರಾಜ್ಯದ ಜನಪ್ರತಿನಿಧಿಗಳ್ಯಾರೂ ತಿಳಿಸಿಲ್ಲ. ರಾಜ್ಯದ 28 ಸಂಸದರು ಹಾಗೂ 12 ರಾಜ್ಯಸಭೆ ಸದಸ್ಯರ ಪೈಕಿ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಮಾತ್ರ ಬೆಂಗಳೂರಿನಲ್ಲಿ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ಉಳಿದ 39 ಸದಸ್ಯರೂ ನವದೆಹಲಿಯಲ್ಲಿ ಮತದಾನ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 225 ಜನಪ್ರತಿನಿಧಿಗಳು ಮತದಾನ ಮಾಡಲು ಅರ್ಹರಾಗಿದ್ದಾರೆ.

ಚುನಾವಣಾ ವೀಕ್ಷಕರ ನೇಮಕ

ಚುನಾವಣೆ ಪ್ರಕ್ರಿಯೆ ಗಮನಿಸಲು ಕೇಂದ್ರದ ಐಎಎಸ್ ಅಧಿಕಾರಿ ಅರುಣ್ ಸಿಂಘಾಲ್ ಅವರನ್ನು ವೀಕ್ಷಕರಾಗಿ ಕರ್ನಾಟಕಕ್ಕೆ ನೇಮಿಸಲಾಗಿದೆ. ಶನಿವಾರವೇ ಆಗಮಿಸಿರುವ ಸಿಂಘಾಲ್, ಈಗಾಗಲೇ ಮತಗಟ್ಟೆಗೆ ತೆರಳಿ ಸಿದ್ಧತೆ ಪರಿಶೀಲಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದು ರಾಜ್ಯದಿಂದ ಮತಪೆಟ್ಟಿಗೆ ತೆರಳುವವರೆಗೂ ಅಗತ್ಯ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಯೋಗೇಶ್ ತಿಳಿಸಿದ್ದಾರೆ.

ಸೋಮವಾರವೇ ನವದೆಹಲಿಗೆ

ಸಂಜೆ 5ಗಂಟೆಗೆ ಚುನಾವಣೆ ಪ್ರಕ್ರಿಯೆ ಮುಗಿದ ತಕ್ಷಣವೇ ಮತಪೆಟ್ಟಿಗೆಯನ್ನು ನವದೆಹಲಿಗೆ ಕೊಂಡೊಯ್ಯಬೇಕು. ಅಂದೇ ಲೋಕಸಭಾ ಕಾರ್ಯದರ್ಶಿಯವರಿಗೆ ಒಪ್ಪಿಸಬೇಕು. ವಿಮಾನದ ಡಿಕ್ಕಿಯಲ್ಲಾಗಲಿ, ಲಗೇಜ್ ಜತೆಯಾಗಲಿ ಇಡುವಂತಿಲ್ಲ. ಇದೇ ಕಾರಣಕ್ಕೆ ‘ಚುನಾವಣಾ ವೀಕ್ಷಕ, ನಾನು ಹಾಗೂ ಮತಪೆಟ್ಟಿಗೆ ಸೇರಿ ಮೂರು ಸೀಟ್ ಕಾಯ್ದಿರಿಸಲಾಗಿದೆ’ ಎಂದು ಎಸ್. ಮೂರ್ತಿ ತಿಳಿಸಿದ್ದಾರೆ.

ಪ್ರಾಶಸ್ತ ್ಯ ಮತದಾನ

ರಾಷ್ಟ್ರಪತಿ ಸ್ಥಾನದ ಇಬ್ಬರು ಅಭ್ಯರ್ಥಿಗಳಿಗೂ ಪ್ರಾಶಸ್ತ ್ಯಲ್ಲಿ ಮತದಾನ ಮಾಡಲು ಅವಕಾಶವಿರುತ್ತದೆ. ಚುನಾವಣಾ ಆಯೋಗವೇ ನೀಡಿರುವ ಪೆನ್​ನಲ್ಲಿ ಮತಪತ್ರದಲ್ಲಿ ಬರೆಯಬೇಕು. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ದೇಶದಲ್ಲಿ ಸೂಚಿತ ಯಾವುದೇ ಭಾಷೆಯ ಅಂಕಿಯಲ್ಲೂ ಮೊದಲ ಪ್ರಾಶಸ್ತ ್ಯ ಅಭ್ಯರ್ಥಿಗೆ 1, ಮತ್ತೊಬ್ಬರಿಗೆ 2 ಎಂದು ಬರೆಯಬಹುದು. 2ನೇ ಪ್ರಾಶಸ್ತ ್ಯ ಮತ ಕಡ್ಡಾಯವಲ್ಲ. ಆದರೆ ಮೊದಲ ಪ್ರಾಶಸ್ತ ್ಯ ನಮೂದಿಸದೇ ಕೇವಲ 2ನೇ ಪ್ರಾಶಸ್ತ ್ಯ ತಿಳಿಸಿದರೆ ಆ ಮತ ಮೌಲ್ಯ ಕಳೆದುಕೊಳ್ಳುತ್ತದೆ. ಎಲ್ಲ ಶಾಸಕರು ಹಾಗೂ ಸಂಸದರ ಮುಖ ಪರಿಚಯವಿರುವ ಕಾರಣ ಗುರುತಿನ ಚೀಟಿ ಕಡ್ಡಾಯ ಮಾಡಿಲ್ಲ. ಆದರೂ ಯಾವುದೇ ಗುರುತಿನ ಚೀಟಿ ತರುವುದು ಉತ್ತಮ ಎಂದು ವೈಯಕ್ತಿಕವಾಗಿ ಎಲ್ಲರಿಗೂ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶವನ್ನು ಸಂಕಷ್ಟದಿಂದ ಪಾರು ಮಾಡಲು ಮೀರಾ ಕುಮಾರ್, ಗೋಪಾಲಕೃಷ್ಣ ಗಾಂಧಿಯವರನ್ನು ಗೆಲ್ಲಿಸಲೇಬೇಕಿದೆ. ಸಂಖ್ಯಾಬಲ ನಮ್ಮ ವಿರುದ್ಧವಾಗಿದ್ದರೂ ಹೋರಾಟದ ಬಲ ಕಳೆದುಕೊಳ್ಳಬಾರದು. ವಿಶ್ವಾಸದಿಂದ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ಎದುರಿಸಬೇಕಿದೆ.

| ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ

Leave a Reply

Your email address will not be published. Required fields are marked *