Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ರಾಷ್ಟ್ರಗೀತೆಗೆ ಅಡ್ಡಿಮಾಡುವುದು ಅಪರಾಧ

Wednesday, 15.11.2017, 3:00 AM       No Comments

ನಾವು ನಮ್ಮ ರಾಷ್ಟ್ರಗೀತೆಗೆ ಗೌರವ ಕೊಡಬೇಕು ಎಂಬುದೇನೋ ಸರಿ. ಆದರೆ, ನಿರ್ದಿಷ್ಟ ವಿಧಾನದಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವಂತೆ ಅಥವಾ ಅದನ್ನು ಹಾಡುವಂತೆ ಜನರನ್ನು ನಿರ್ಬಂಧಿಸುವಂಥ ಯಾವುದೇ ವಿಧಿನಿರ್ದಿಷ್ಟ ಆದೇಶವು, ಮಾನವ ಜೀವನ ಮತ್ತು ಕ್ರಿಯಾಸ್ವಾತಂತ್ರ್ಯದ ನೆಲೆಗಟ್ಟಿಗೇ ಪ್ರತಿಕೂಲವಾಗಿರುವಂಥದ್ದು. ಜೀವನದ ಗತಿ ಮತ್ತು ವೈಯಕ್ತಿಕ ಆಯ್ಕೆಗಳನ್ನು ಸರ್ಕಾರಗಳು ಶಾಸನದ ಮೂಲಕ ನಿರ್ದೇಶಿಸಲಾಗದು.

ನಾಗರಿಕರು, ಸಾಂವಿಧಾನಿಕ ಸಂಸ್ಥೆಗಳು, ಸರ್ಕಾರಿ ಪ್ರಾಧಿಕಾರಗಳು, ಅಷ್ಟೇಕೆ ಖಾಸಗಿ ಸಂಘ-ಸಂಸ್ಥೆಗಳು ಕೂಡ ಮಹತ್ತರ ಆಯ್ಕೆಗಳನ್ನು ಅಭಿವ್ಯಕ್ತಿಸುವುದರ ನೆಲೆಗಟ್ಟಾಗಿ ಬಹುಸಾಂಸ್ಕೃತಿಕ ಸಿದ್ಧಾಂತದ ಉದಾರವಾದಿ ಪ್ರಜಾಸತ್ತಾತ್ಮಕ ಸಂವಿಧಾನವೊಂದರ ರೂಢಮಾದರಿಗಳು ಹಾಗೂ ಮೌಲ್ಯಗಳೊಂದಿಗೆ ರಾಜಕೀಯ ನಂಟನ್ನು ರೂಪಿಸುವುದಕ್ಕೆ ಆದ್ಯತೆ ನೀಡಬೇಕಾಗುತ್ತದೆ. ನಮ್ಮ ಸಂವಿಧಾನವು ಒಂದೆಡೆ ನಮ್ಮ ಹಕ್ಕುಗಳನ್ನು ಸಾಧಿಸುವುದಕ್ಕೆ ಅನುವುಮಾಡಿಕೊಡುವ ಸಾಧನವಾಗಿದ್ದರೆ, ಮತ್ತೊಂದೆಡೆ ಸರ್ಕಾರದ ಸ್ವೇಚ್ಛಾನುಸಾರಿ ಅಧಿಕಾರ ಚಲಾವಣೆಗೆ ಲಗಾಮುಹಾಕುವ ನಿಯಂತ್ರಕನೂ ಆಗಿದೆ. ಆದ್ದರಿಂದ, ಅಧಿಕಾರ ಹಾಗೂ ಹೊಣೆಗಾರಿಕೆಗಳು ಜತೆಜತೆಗೇ ಸಾಗುವಂಥವು ಎಂಬುದನ್ನು ಖಾತ್ರಿಪಡಿಸಲು ನಮ್ಮ ಸಂವಿಧಾನ ಸಾಕಷ್ಟು ಶ್ರಮಿಸುತ್ತದೆ ಎನ್ನಲಡ್ಡಿಯಿಲ್ಲ.

ನಮ್ಮ ಸಂವಿಧಾನದಲ್ಲಿ ಅಂತರ್ಗತವಾಗಿರುವ ಅನೇಕ ವೈಶಿಷ್ಟ್ಯಗಳಲ್ಲಿ ಅದರ ‘ಭಾಗ ಐಅ’ಕೂಡ ಒಂದು; ಇದು ಮೂಲಭೂತ ಕರ್ತವ್ಯಗಳಿಗೆ ಸಂಬಂಧಪಟ್ಟಿರುವಂಥದ್ದು. ಸಂವಿಧಾನವನ್ನು ಮೊದಲಿಗೆ ರೂಪಿಸಿದಾಗ, ನಾಗರಿಕರ ಮೂಲಭೂತ ಕರ್ತವ್ಯಗಳು ನಮೂದಿತವಾಗಿರಲಿಲ್ಲ; 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯಾದಾಗಷ್ಟೇ ಅವು ಸೇರ್ಪಡೆಗೊಂಡವು. ‘ಭಾಗ ಐಅ’ ಅಡಿಯಲ್ಲಿನ ಏಕಮೇವ ವಿಧಿಯಾಗಿರುವ 51-ಎ, ಪ್ರತಿಯೊಬ್ಬ ನಾಗರಿಕನ ಈ ‘ಮೂಲಭೂತ ಕರ್ತವ್ಯಗಳನ್ನು’ ಸಾರಸಂಗ್ರಹವಾಗಿ ತಿಳಿಸುತ್ತದೆ. ಇದರಡಿಯಲ್ಲಿ ಪಟ್ಟಿಮಾಡಲಾಗಿರುವ ವಿವಿಧ ಕರ್ತವ್ಯಗಳ ಪೈಕಿ ಮೊದಲನೆಯದೇ ಭಾರತದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನಕ್ಕೆ ದೃಢನಿಷ್ಠೆಯಿಂದಿದ್ದು ಅದರನುಸಾರ ನಡೆದುಕೊಳ್ಳುವ ಮತ್ತು ಅದರ ಆದರ್ಶಗಳು ಹಾಗೂ ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದರ ಕುರಿತದ್ದಾಗಿದೆ. ಮೂಲತಃ 10 ಸಂಖ್ಯೆಯಲ್ಲಿದ್ದ ಈ ಮೂಲಭೂತ ಕರ್ತವ್ಯಗಳನ್ನು, 2002ರಲ್ಲಿ ಕೈಗೊಳ್ಳಲಾದ 86ನೇ ತಿದ್ದುಪಡಿಯಲ್ಲಿ 11ಕ್ಕೆ ಏರಿಸಲಾಯಿತು; ಪ್ರತಿಯೊಬ್ಬ ಪಾಲಕರು ಅಥವಾ ಪೋಷಕರು ಆರರಿಂದ ಹದಿನಾಲ್ಕು ವರ್ಷಗಳ ನಡುವಿನ ತಮ್ಮ ಮಗು ಅಥವಾ ಪೋಷಿತನಿಗೆ ಶಿಕ್ಷಣದ ಅವಕಾಶಗಳನ್ನು ಒದಗಿಸುವುದನ್ನು ಖಾತ್ರಿಪಡಿಸಬೇಕೆಂಬುದು ಹೀಗೆ ಸೇರ್ಪಡೆಗೊಂಡ ಕರ್ತವ್ಯವಾಗಿತ್ತು.

ರಾಷ್ಟ್ರಗೀತೆಯನ್ನು ಗೌರವಿಸುವ ಕರ್ತವ್ಯದ ಶಾಸನಾತ್ಮಕ ಕಟ್ಟುಪಾಡು, ‘ರಾಷ್ಟ್ರೀಯ ಗೌರವ ಅಪಮಾನ ತಡೆ ಕಾಯ್ದೆ, 1971’ರ ವಿಧಿ 3ರ ಅಡಿಯಲ್ಲಿ ಕಾಣಬರುವಂಥದು. ಅದರಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿವರಣೆ ಹೀಗಿದೆ- ‘ಯಾರೇ ಆಗಲಿ, ಭಾರತದ ರಾಷ್ಟ್ರಗೀತೆಯ ಗಾಯನಕ್ಕೆ ಉದ್ದೇಶಪೂರ್ವಕವಾಗಿ ತಡೆದಲ್ಲಿ ಅಥವಾ ಇಂಥ ಗಾಯನದಲ್ಲಿ ತೊಡಗಿಸಿಕೊಂಡ ಯಾವುದೇ ಸಭೆಗೆ ಅಡಚಣೆ ಉಂಟುಮಾಡಿದಲ್ಲಿ, ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಗೆ ಸೆರೆವಾಸದ ಶಿಕ್ಷೆಯನ್ನು ಅಥವಾ ದಂಡವನ್ನು ಅಥವಾ ಎರಡನ್ನೂ ಅಂಥವರಿಗೆ ವಿಧಿಸಬಹುದಾಗಿರುತ್ತದೆ’. ಇದು, ಅಡ್ಡಿಪಡಿಸುವ ಅಥವಾ ನಕಾರಾತ್ಮಕ ಕರ್ತವ್ಯವೊಂದಕ್ಕೆ ಸಂಬಂಧಿಸಿದ ಸ್ಪಷ್ಟ ಸಂಹಿತೆಯಾಗಿದೆ- ಅಂದರೆ ರಾಷ್ಟ್ರಗೀತೆ ಗಾಯನಕ್ಕೆ ಅಡಚಣೆ, ತಡೆ ಮತ್ತು ಕೆಲವೊಂದು ಅಗೌರವದ ಸ್ವರೂಪಗಳಿಗೆ ಸಂಬಂಧಿಸಿರುವ ಕರ್ತವ್ಯವಾಗಿದೆ. ಆದಾಗ್ಯೂ, ಗೌರವಿಸುವುದಕ್ಕೆ ಸಂಬಂಧಿಸಿದ ಯಾವುದೇ ವಿಧಿನಿರ್ದಿಷ್ಟ ಕರ್ತವ್ಯಗಳನ್ನು ಶಾಸನಸಭೆಯು ಸಂಹಿತೆಯಾಗಿಸಿಲ್ಲ/ಕ್ರೋಡೀಕರಿಸಿಲ್ಲ ಮತ್ತು ಸಂವಿಧಾನದ ವಿಧಿ 51ಎ ಅಡಿಯಲ್ಲಿ ರಾಷ್ಟ್ರಗೀತೆಯನ್ನು ಗೌರವಿಸುವಂಥ ಸಾರ್ವತ್ರಿಕ/ಸರ್ವಾನ್ವಯಿಕ ಕರ್ತವ್ಯವನ್ನು ಹೊರತುಪಡಿಸಿದರೆ, ಸಾಂವಿಧಾನಿಕ ರೂಪುರೇಷೆಯಲ್ಲೆಲ್ಲೂ ಈ ವಿಧಿನಿರ್ದಿಷ್ಟ ಕರ್ತವ್ಯಗಳ ಕುರಿತಾದ ಉಲ್ಲೇಖವಿಲ್ಲ.

ಯಾವುದೋ ಒಂದು ರೀತಿಯಲ್ಲಿ ಅಥವಾ ನಿರ್ದಿಷ್ಟ ವಿಧಾನದಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವಂತೆ ಅಥವಾ ರಾಷ್ಟ್ರಗೀತೆ ಹಾಡುವಂತೆ ಜನರನ್ನು ನಿರ್ಬಂಧಿಸುವಂಥ ಯಾವುದೇ ವಿಧಿನಿರ್ದಿಷ್ಟ ಆದೇಶವು, ಮಾನವ ಜೀವನ ಮತ್ತು ಕ್ರಿಯಾಸ್ವಾತಂತ್ರ್ಯದ ನೆಲೆಗಟ್ಟಿಗೇ ಪ್ರತಿಕೂಲವಾಗಿರುವಂಥದ್ದು. ನಮಗೆಲ್ಲರಿಗೂ ತಿಳಿದಿರುವಂತೆ, ಜೀವನವೆಂಬುದು ಮನೋಭಾವನೆ, ಆಲೋಚನಾ ವಿಧಾನಗಳ, ಪರಿಕಲ್ಪನೆಗಳ ಒಂದು ಮಾರುಕಟ್ಟೆಯಿದ್ದಂತೆ; ಜೀವನದ ಗತಿ ಮತ್ತು ವೈಯಕ್ತಿಕ ಆಯ್ಕೆಗಳನ್ನು ವರ್ತಮಾನದ ಸರ್ಕಾರಗಳು ಶಾಸನದ ಮೂಲಕ ನಿರ್ದೇಶಿಸಲಾಗದು. ಒಂದೊಮ್ಮೆ ಹಾಗಿಲ್ಲದೆ ಹೋದರೂ, ರಾಷ್ಟ್ರಗೀತೆಯನ್ನು ನುಡಿಸುವಾಗ/ಹಾಡುವಾಗ ನನ್ನ ಪಕ್ಕದಲ್ಲಿರುವ ವ್ಯಕ್ತಿಯು ಅದನ್ನು ಹಾಡದಿರುವ ಮೂಲಕ ಅಡಚಣೆಯನ್ನು ಉಂಟುಮಾಡುತ್ತಿದ್ದಾನೆ ಎಂಬುದಾಗಿ ಪ್ರಮಾಣೀಕರಿಸುವುದು/ರುಜುವಾತುಪಡಿಸುವುದು ತೀರಾ ಕಷ್ಟದಾಯಕವೇ ಸರಿ.

ಅದೇನೇ ಇರಲಿ, ರಾಷ್ಟ್ರಗೀತೆಗೆ ಸಂಬಂಧಿಸಿದಂತಿರುವ ಒಂದಷ್ಟು ಆದೇಶಗಳನ್ನು ಕೇಂದ್ರ ಗೃಹಖಾತೆಯು ‘ಸಾರ್ವಜನಿಕರ ಅವಗಾಹನೆ ಮತ್ತು ಮಾರ್ಗದರ್ಶನ’ಕ್ಕಾಗಿ ಜಾರಿಮಾಡಿದೆ. ಅದರಡಿಯಲ್ಲಿ ವಿಧಿಸಲಾಗಿರುವ ನಿಯಮ ಹೀಗಿದೆ- ‘ರಾಷ್ಟ್ರಗೀತೆಯನ್ನು ನುಡಿಸುತ್ತಿರುವಾಗ ಇಲ್ಲವೇ ಹಾಡುತ್ತಿರುವಾಗ, ಪ್ರೇಕ್ಷಕರು ನೆಟ್ಟನೆಯ ನಿಲುವಿನಲ್ಲಿ ನಿಂತುಕೊಳ್ಳಬೇಕು. ಆದಾಗ್ಯೂ, ವಾರ್ತಾಚಿತ್ರ ಅಥವಾ ಸಾಕ್ಷ್ಯಚಿತ್ರದ ಒಂದು ಭಾಗವಾಗಿ ರಾಷ್ಟ್ರಗೀತೆಯು ನುಡಿಸಲ್ಪಟ್ಟರೆ, ಪ್ರೇಕ್ಷಕರು ಎದ್ದುನಿಲ್ಲಬೇಕು ಎಂದೇನೂ ನಿರೀಕ್ಷಿಸಲಾಗುವುದಿಲ್ಲ; ಕಾರಣ, ಹೀಗೆ ಎದ್ದು ನಿಲ್ಲುವುದರಿಂದ ಚಿತ್ರದ ಪ್ರದರ್ಶನಕ್ಕೆ ಅಡಚಣೆ ಒದಗಿದಂತಾಗುತ್ತದೆ ಮತ್ತು ರಾಷ್ಟ್ರಗೀತೆಯ ಘನತೆ ಹೆಚ್ಚುವ ಬದಲಿಗೆ ಅವ್ಯವಸ್ಥೆ ಹಾಗೂ ಗೊಂದಲವನ್ನು ಅದು ಹುಟ್ಟುಹಾಕುತ್ತದೆ’.

ಕೆಲವರು ಮೂಲಭೂತ ಕರ್ತವ್ಯಗಳನ್ನು, ಸರ್ಕಾರದ ಕಾರ್ಯನೀತಿಯ ಮಾರ್ಗದರ್ಶಿ ಸೂತ್ರಗಳ ಒಂದು ವಿಸ್ತರಣೆಯಾಗಿ ಪರಿಗಣಿಸುತ್ತಾರೆ. ಭಾಗ 4ರಲ್ಲಿ ಅಂತರ್ಗತವಾಗಿರುವ ಈ ಮಾರ್ಗದರ್ಶಿ ಸೂತ್ರಗಳು, ದೇಶದ ಆಡಳಿತ ಕಾರ್ಯದಲ್ಲಿ ಮೂಲಭೂತವಾಗಿರುವ ತತ್ತ್ವ-ಸೂತ್ರಗಳಾಗಿವೆ. ಆದಾಯದಲ್ಲಿನ ಅಸಮಾನತೆಯನ್ನು ತೊಡೆಯುವಿಕೆ, ಏಕರೂಪದ ನಾಗರಿಕ ಸಂಹಿತೆ ರಚನೆ, ದೇಶದಲ್ಲಿನ ಸರಾಸರಿ ಪೌಷ್ಟಿಕ ಮಟ್ಟವನ್ನು ಹೆಚ್ಚಿಸುವ ಕರ್ತವ್ಯ ಮತ್ತು ಇಂಥ ಇನ್ನೂ ಅನೇಕ ಆಶಯಗಳನ್ನು ಈ ಸೂತ್ರಗಳು ಒಳಗೊಂಡಿವೆ. ಈ ಸೂತ್ರಗಳ ಮೂಲಸ್ವರೂಪವನ್ನು ನೋಡಿದರೆ, ಅವು ಕಾರ್ಯಾಂಗ ಮತ್ತು ಶಾಸಕಾಂಗದ ಅಧಿಕಾರ ವ್ಯಾಪ್ತಿಯಲ್ಲೇ ಪ್ರಧಾನವಾಗಿ ಬರುತ್ತವೆ ಎಂಬುದು ಅರಿವಾಗುತ್ತದೆ.

ಶಾಸನೋಕ್ತವಾಗಿ ನಿರ್ಬಂಧಪಡಿಸುವಂಥವಲ್ಲವಾದರೂ, ನಾಗರಿಕರ ಮೂಲಭೂತ ಹಕ್ಕುಗಳಿಗೆ ಹೊಸತೊಂದು ಆಯಾಮ ನೀಡುವ ದೃಷ್ಟಿಯಿಂದ ಸವೋಚ್ಚ ನ್ಯಾಯಾಲಯದ ನಿರ್ಣಾಯಕ ತೀರ್ಪಗಳು ಸರ್ಕಾರಿ ಕಾರ್ಯನೀತಿಯ ಮಾರ್ಗದರ್ಶಿ ಸೂತ್ರಗಳನ್ನು ಹಾಗೂ ಮೂಲಭೂತ ಕರ್ತವ್ಯಗಳನ್ನು ನೆಚ್ಚಿಕೊಂಡಿವೆ ಎನ್ನಬೇಕು. ಆದ್ದರಿಂದ, ಮಾರ್ಗದರ್ಶಿ ಸೂತ್ರಗಳು (ಜತೆಗೆ ಮೂಲಭೂತ ಕರ್ತವ್ಯಗಳು) ಮತ್ತು ಮೂಲಭೂತ ಹಕ್ಕುಗಳನ್ನು ರಥವೊಂದರ ಎರಡು ಚಕ್ರಗಳಾಗಿ ಪರಿಗಣಿಸಲಾಗಿದೆ; ಇಲ್ಲಿ ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ಪ್ರಾಮುಖ್ಯದ ವಿಷಯದಲ್ಲಿ ಎರಡೂ ಪರಸ್ಪರ ಸಮನಾಗಿರುವಂಥವು. ಒಂದು ಚಕ್ರವನ್ನು ಕಳಚಿದಲ್ಲಿ, ಮತ್ತೊಂದು ತನ್ನ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತದೆ. ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, 3 ಮತ್ತು 4 ಹಾಗೂ 4-ಎ ಎಂಬ ಭಾಗಗಳ ನಡುವಿನ ಸಮತೋಲನವನ್ನು ಆಧಾರವಾಗಿ ಹೊಂದಿರುವ ಮೂಲಭೂತ ತತ್ತ್ವಗಳ ಮೇಲೆ ಭಾರತದ ಸಂವಿಧಾನವು ಪ್ರತಿಷ್ಠಾಪಿಸಲ್ಪಟ್ಟಿದೆ ಮತ್ತು ಇದು ಯುಕ್ತವಾಗಿಯೂ ಇದೆ. ಮೂಲಭೂತ ಹಕ್ಕುಗಳಿಗೆ ಮಾರ್ಗದರ್ಶಿ ಸೂತ್ರಗಳು ನಿಜಕ್ಕೂ ಒಂದು ವಿಸõತ ಅರ್ಥವನ್ನು ನೀಡುತ್ತವೆ.

ಈ ‘ಪರಸ್ಪರ ಸಂಬಂಧ’ ಯಥೋಚಿತವಾಗಿಯೇ ಪ್ರಮಾಣೀಕರಿಸಲ್ಪಟ್ಟಿದೆ. ಉದಾಹರಣೆಗೆ, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕೆಂಬುದು, ಒಂದು ಮೂಲಭೂತ ಹಕ್ಕಾಗಿ ಅದನ್ನು ಸೇರ್ಪಡೆ ಮಾಡುವುದಕ್ಕೂ ಮುಂಚೆ, ಸರ್ಕಾರದ ಕಾರ್ಯನೀತಿಯ ಒಂದು ಮಾರ್ಗದರ್ಶಿ ಸೂತ್ರವಾಗಿತ್ತು. ಹೀಗಾಗಿ, ಸಂವಿಧಾನದ ಜಾರಿಯಾದಾಗಿನಿಂದ ಹತ್ತು ವರ್ಷಗಳ ಅವಧಿಯೊಳಗಾಗಿ, ಎಲ್ಲ ಮಕ್ಕಳಿಗೆ ಅವರು 14 ವರ್ಷಗಳ ವಯೋಮಾನವನ್ನು ಸಂಪೂರ್ಣಗೊಳಿಸುವವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ಕಸರತ್ತು ನಡೆಸಬೇಕಾಗಿ ಬಂತು. 40 ವರ್ಷಗಳಷ್ಟು ತಡವಾಗಿಯಾದರೂ 21-ಎ ವಿಧಿಯನ್ನು ಒಂದು ಮೂಲಭೂತ ಹಕ್ಕಾಗಿ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು ಮತ್ತು ಇದರ ಪರಿಣಾಮವಾಗಿ 6ರಿಂದ 14 ವರ್ಷಗಳವರೆಗಿನ ವಯೋಮಾನದ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವುದಕ್ಕೆ ಕಾನೂನನ್ನು ರೂಪಿಸಬೇಕಾದ ಬಾಧ್ಯತೆಗೆ ಸರ್ಕಾರ ಒಳಗಾಗುವಂತಾಯಿತು. ಮೇಲೆ ಉಲ್ಲೇಖಿಸಲಾದ ಮಾಹಿತಿಯೊಂದಿಗೆ ಸಹಕಾಲಿಕವಾಗಿ ‘ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009’ ಜಾರಿಗೆ ಬಂತು.

ಈ ಕುರಿತಾದ ಇನ್ನಷ್ಟು ಹೊಳಹುಗಳನ್ನು ಮುಂದಿನ ಕಂತಿನಲ್ಲಿ ಅವಲೋಕಿಸೋಣ.

(ಲೇಖಕರು: ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top