ರಾಮನಗರ ಶೈನಿಂಗ್ ಸ್ಟಾರ್ ತಂಡಕ್ಕೆ ಚಾಂಪಿಯನ್ ಪಟ್ಟ!

ಬೆಳಗಾವಿ: ಸಮರ್ಥನಂ ಅಂಗವಿಕಲರ ಸಂಸ್ಥೆಯು ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಮತ್ತು ಪವರ್ ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಕುಂದಾನಗರಿಯಲ್ಲಿ ಮೂರು ದಿಗಳ ಕಾಲ ಆಯೋಜಿಸಿದ್ದ 4ನೇ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ರಾಮನಗರದ ಶೈನಿಂಗ್ ಸ್ಟಾರ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯು ರನ್ನರ್‌ಅಪ್ ಪ್ರಶಸ್ತಿ ಪಡೆಯಿತು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯ ತಂಡವು 10 ಓವರ್‌ಗಳಲ್ಲಿ 93 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ರಾಮನಗರ ತಂಡವು ಕೊನೆಯ ಓವರ್‌ನಲ್ಲಿ ಒಂದು ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಿ ಗೆಲುವಿನ ಕೇಕೆ ಹಾಕಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯ ತಂಡವು ಬೆಂಗಳೂರಿನ ಕೆಡಬ್ಲುಎಬಿ ತಂಡವನ್ನು ಮಣಿಸಿದರೆ, ಬೆಂಗಳೂರು ಬಿಸಿಸಿ ತಂಡವನ್ನು ಮಣಿಸಿದ ರಾಮನಗರದ ಶೈನಿಂಗ್ ಸ್ಟಾರ್ ತಂಡ ಅಂತಿಮ ಘಟ್ಟ ತಲುಪುವಲ್ಲಿ ಯಶಸ್ವಿಯಾಗಿತ್ತು.
ಮೂರು ದಿನಗಳ ಕಾಲ ಜರುಗಿದ ಈ ಟೂರ್ನಿಯು ಬೆಳಗಾವಿಯ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿತು. ಹಲವು ಹೋಟೆಲ್‌ಗಳ ಮಾಲೀಕರು ಅಂಧ ಕ್ರಿಕೆಟ್ ಪಟುಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ನಗರ ಸೇವಕಿ ಅನುಶ್ರೀ ದೇಶಪಾಂಡೆ, ವೇಣುಗ್ರಾಮ ಆಸ್ಪತ್ರೆಯ ವೈದ್ಯ ಡಾ.ಶ್ರೀಪತಿ ಪಿಸೆ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಣೆ ಮಾಡಿದರು. ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯಸ್ಥ ಎಂ.ಅರುಣಕುಮಾರ್, ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಪ್ರಾಚಾರ್ಯೆ ಅನಿತಾ ಗಾವಡೆ, ಸಮರ್ಥನಂ ಸಂಸ್ಥೆಯ ಉತ್ತರ ಕರ್ನಾಟಕ ವಿಭಾಗದ ಟ್ರಸ್ಟಿ ಉದಯ ಭಾಗಣ್ಣವರ, ಕರ್ನಾಟಕ ಅಂಧರ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಸತೀಶ ಮತ್ತಿತರರು ಉಪಸ್ಥಿತರಿದ್ದರು.

| ಇಮಾಮಹುಸೇನ್ ಗೂಡುನವರ