ರಾಮನಗರದ ಸಮುದಾಯ ಭವನದಲ್ಲಿ ಸ್ವಚ್ಛತೆ ಮರೀಚಿಕೆ

ಜೊಯಿಡಾ: ತಾಲೂಕಿನ ರಾಮನಗರದ ಸಮುದಾಯ ಭವನವು ಸರಿಯಾದ ನಿರ್ವಹಣೆ ಮತ್ತು ಸ್ವಚ್ಛತೆ ಇಲ್ಲದೆ ಗಬ್ಬು ನಾರುವಂತಾಗಿದೆ. ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಮನಗರ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯೇ ಈ ಸಮುದಾಯ ಭವನದ ದುರವಸ್ಥೆಗೆ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.

ರಾಮನಗರದ ಪುನರ್ವಸತಿ ಕೇಂದ್ರದಲ್ಲಿ 2005ರಲ್ಲಿ ಸಮುದಾಯ ಭವನ ನಿರ್ವಿುಸಲಾಗಿದೆ. ಇಲ್ಲಿ ಮದುವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿ ಕಾರ್ಯಕ್ರಮ ನಡೆಸುವವರು ನಿರ್ವಹಣೆ ವೆಚ್ಚವಾಗಿ ಪ್ರತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿಗೆ 3,500 ರೂ. ಪಾವತಿಸಬೇಕು. ಪ್ರತಿ ತಿಂಗಳು ಇಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ಯಕ್ರಮದ ನಂತರ ಇಲ್ಲಿ ಪ್ಲಾಸ್ಟಿಕ್ ಲೋಟ, ತಟ್ಟೆ, ಬಾಟಲ್​ಗಳ ರಾಶಿ ಬಿದ್ದುದನ್ನು ಸ್ವಚ್ಛ ಮಾಡದೆ ಹಾಗೆಯೇ ಬಿಡಲಾಗಿದೆ. ಈ ಭವನದ ಪಕ್ಕದಲ್ಲಿರುವ ಅಡುಗೆ ಕೋಣೆಯ ಹಿಂದುಗಡೆಯೂ ಕೊಳೆತ ಕಸದಿಂದ ಗೊಬ್ಬರ ಗುಂಡಿಯಾಗಿದೆ. ಇಲ್ಲಿ ಮೂಗು ಮುಚ್ಚಿಯೇ ಸಾಗಬೇಕು. ಸ್ವಚ್ಛತೆ ಎಂದರೆ ಏನು ಎಂದು ಹುಡುಕಬೇಕಾದ ಸ್ಥಿತಿ ಇಲ್ಲಿದೆ. ಮದುವೆ, ಮುಂಜಿ ಮುಂತಾದ ಸಮಾರಂಭಗಳ ಸಾರ್ವಜನಿಕ ಊಟದ ತಯಾರಿಯನ್ನು ಇಲ್ಲಿಯೇ ಮಾಡುವುದರಿಂದ ಸಾಂಕ್ರಾಮಿಕ ರೋಗ ರುಜಿನಗಳು ಹರಡುವ ಅಪಾಯವಿದ್ದು, ಏನಾದರೂ ಅವಘಡ ಆಗುವ ಮುಂಚೆ ಇಲ್ಲಿ ಸ್ವಚ್ಚತಾ ಕಾರ್ಯ ಗ್ರಾಪಂ ಕೈಗೊಳ್ಳಬೇಕಾಗಿದೆ.

ಈ ಭವನದ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಮಾಡಬೇಕಾಗಿದ್ದರೂ ಸರಿಯಾಗಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ಮಾಡಿರುವ ಕಾರಣ ಸುಣ್ಣ ಬಣ್ಣವಿಲ್ಲದೇ ಕಳೆಗುಂದಿದೆ. ಕಿಟಕಿ- ಗಾಜುಗಳು ಒಡೆದಿವೆ. ಕಿಟಕಿಯ ಬಾಗಿಲುಗಳು ಸರಿಯಾಗಿಲ್ಲ. ವಿದ್ಯುತ್ ಜೋಡಣೆಗಳು ಕಿತ್ತು ಜೋತು ಬಿದ್ದಿವೆ. ಶೌಚಗೃಹದ ಪೈಪ್​ಗಳು ಒಡೆದು ಕೊಳಕು ನೀರು ಸೋರುತ್ತ ಗಬ್ಬು ನಾರುವಂತಾಗಿದೆ. ಸ್ವಚ್ಛ ಭಾರತದ ಕಲ್ಪನೆ ಇಲ್ಲಿ ಮರೀಚಿಕೆಯಂತಾಗಿದೆ. ಗ್ರಾಮ ಪಂಚಾಯಿತಿಯು ನಿರ್ವಹಣೆಯ ಅನುದಾನ ಬಳಸಿ ಇದನ್ನು ಸ್ವಚ್ಛಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಸ್ವಚ್ಛತೆ ಇಲ್ಲ ಎಂದು ಜನರಿಂದ ದೂರು ಬಂದಿದ್ದು, ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೇನೆ. ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ. ಸಮುದಾಯ ಭವನದ ನಿರ್ವಹಣೆಗೆ ಅನುದಾನ ಸಾಲುತ್ತಿಲ್ಲ. ಈ ಬಗ್ಗೆ 14ನೇ ಹಣಕಾಸು ಯೋಜನೆಯ ಅನುದಾನ ಬಳಸಿ ಸರಿ ಪಡಿಸುವ ಕೆಲಸ ಪ್ರಾರಂಬಿಸುತ್ತೇವೆ.

| ವೆಂಕಟೇಶ ಕಾಂಬಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮನಗರ

ಸಮುದಾಯ ಭವನದ ರಿಪೇರಿ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ತಿಳಿಸಲಾಗಿದೆ. ಆದರೂ ಅಧಿಕಾರಿಗಳು ಇದುವರೆಗೆ ಸರಿಪಡಿಸಿಲ್ಲ. ನಾವು ದೂರಿದಾಗ, ಸಭೆಯಲ್ಲಿ ಠರಾವು ಮಾಡಿ, ನಾವು ರಿಪೇರಿ ಮಾಡುತ್ತೆವೆ ಎಂದು ಹೇಳುತ್ತಾರೆ. ಆದರೆ, ಕೆಲಸ ಮಾಡುತ್ತಿಲ್ಲ. ಗಬ್ಬು ನಾರುವ ಸುತ್ತಲಿನ ಸ್ಥಳದ ಸ್ವಚ್ಛತೆ ಮಾಡಿ ಜನರಿಗೆ ಆಗುವ ತೊಂದರೆ ತಪ್ಪಿಸಬೇಕು.

| ಮಹೇಶ ಮಿರಾಶಿ ಗ್ರಾಪಂ ಸದಸ್ಯ ರಾಮನಗರ

Leave a Reply

Your email address will not be published. Required fields are marked *