ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವಕ್ಕೆ ತೆರೆ

ಹೊಸನಗರ: ಬೆಳೆಗೆ ಒಳ್ಳೆಯ ಮೌಲ್ಯ ಬರುವುದು ಮಾತ್ರವಲ್ಲ. ಜೀವನದಲ್ಲಿ ಪ್ರತಿಯೊಬ್ಬರ ಜೀವನ ಮೌಲ್ಯವೂ ಹೆಚ್ಚಿಸಿ ನೆಮ್ಮದಿ ಜೀವನ ಕಾಣುವಂತಾಗಬೇಕು ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಕಳೆದ ಐದು ದಿನಗಳಿಂದ ನಡೆದ ವಿಕಾರಿ ನಾಮ ಸಂವತ್ಸರದ ಶ್ರೀರಾಮೋತ್ಸವದ ಸಮಾರೋಪದಲ್ಲಿ ವಿಶೇಷ ಪೂಜೆ ನೆರೆವೇರಿಸಿ ಅವರು ಆಶೀರ್ವಚನ ನೀಡಿ, ಕೇವಲ ಬೆಳೆಗೆ ಹೆಚ್ಚು ದರ ಬಂದರೆ ಸಾಲದು. ಅದು ಜೀವನದ ಬೆಲೆಯನ್ನು ಹೆಚ್ಚಿಸಬೇಕು. ಉತ್ತಮ ಜೀವನಕ್ಕೆ ಬೆಳೆ ಪೂರಕವಾಗಲಿ ಎಂದರು.

ಇದಕ್ಕೂ ಮುನ್ನ ಬೆಳಗ್ಗೆ ಸಮಸ್ತ ಶಿಷ್ಯರು ತಾವು ಬೆಳೆದ ಬೆಳೆಗಳನ್ನು ಸುವಸ್ತು ರೂಪದಲ್ಲಿ ತಂದು ಸಮರ್ಪಿಸಿದ್ದರು. ಅದರ ವಿಶೇಷ ಬೆಳೆ ರಾಶಿಯನ್ನು ಶ್ರೀ ರಾಘವೇಶ್ವರಭಾರತೀ ಶ್ರೀಗಳು ಪೂಜಿಸಿದರು. ಇದೇ ವೇಳೆ ಸಂಧ್ಯಾ ಕಾಲದಲ್ಲಿರುವ ಹಿರಿಯರಿಗಾಗಿ ಸಹಸ್ರ ಚಂದ್ರದರ್ಶನ, ಭೀಮರಥ ಹಾಗೂ ಉಗ್ರ ರಥ ಶಾಂತಿ ಕಾರ್ಯಕ್ರಮ ಹಾಗೂ ಭಜನ ಮಂಗಲ ಕಾರ್ಯಕ್ರಮ ನೆರವೇರಿತು.

ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ ರಂಜನಾ ಹೆಗಡೆ ಗುಂಡೂಮನೆ ಸೇರಿ ವಿವಿಧ ತರಗತಿಯಲ್ಲಿ ಉತ್ತಮ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಪತ್ರಿಭಾ ಪುರಸ್ಕಾರ ನೀಡಲಾಯಿತು. ಹೊರನಾಡು ಧರ್ಮಕರ್ತೃ ಭೀಮೇಶ್ವರ ಜೋಶಿ, ಮತ್ತಿಕೊಪ್ಪ ಹರನಾಥ್ ರಾವ್, ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಪ್ಪು, ಭಾಗಿ ಸತ್ಯನಾರಾಯಣ, ಜಟ್ಟಿಮನೆ ಗಣಪತಿ ಭಟ್, ಕಾನುಗೋಡು ಸುಬ್ರಹ್ಮಣ್ಯ, ಮಂಡಲಾಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ, ರಾಘವೇಂದ್ರ ಮಧ್ಯಸ್ಥ ಮತ್ತಿತರರು ಇದ್ದರು.