ರಾತ್ರಿ ಏನ್ ಕೆಲಸಕ್ಕೆ ಹೋಗಿದ್ದಿ?

ಹೊಳೆಆಲೂರ: ಕ್ಲಾಸ್​ನಲ್ಲಿ ತೂಕಡಿಸಿದ ವಿದ್ಯಾರ್ಥಿನಿಗೆ ರಾತ್ರಿ ಎಲ್ಲಿ ಹೋಗಿದ್ದಿ? ಏನ್ ಕೆಲಸಕ್ಕೆ ಹೋಗಿದ್ದಿ? ಎಂದು ಅನುಚಿತವಾಗಿ ಮಾತನಾಡಿ ಮೇಲಧಿಕಾರಿಗಳ ಬಲ ನನಗಿದೆ ಎಂದು ಸಹ ಶಿಕ್ಷಕರಿಗೆ ಹೆದರಿಸುತ್ತಿದ್ದ ಶಿಕ್ಷಕ ವಿ.ಎಂ. ಹೊನಕೇರಿ ಅವರನ್ನು ಅಮಾನತು ಮಾಡಬೇಕು ಎಂದು ಶುಕ್ರವಾರ ಭೋಪಳಾಪೂರ ಗ್ರಾಮಸ್ಥರು ಸರ್ಕಾರಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ನಾಲ್ಕು ತಿಂಗಳ ಹಿಂದೆ ಡೆಪ್ಯುಟೇಶನ್ ಮೇಲೆ ಗ್ರಾಮದ ಸರ್ಕಾರಿ ಶಾಲೆಗೆ ಶಿಕ್ಷಕ ಹೊನಕೇರಿ ಆಗಮಿಸಿದ ನಂತರ ಒಂದರ ಮೇಲೊಂದು ಸಮಸ್ಯೆಗಳು ಉದ್ಭವವಾಗುತ್ತಿವೆ. ಮನೆ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆ ತಂದು ಶಾಲಾ ಅವಧಿಯಲ್ಲಿ ಅಷ್ಟೇ ಅಲ್ಲದೆ, ಸಂಜೆಯೂ ಬೋಧನೆ ಮಾಡುವ ಹಾಗೂ ಶಾಲಾ ಬಿಟ್ಟ ಮಕ್ಕಳ ಪಾಲಕರ ಮನೆ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆ ತರುವ ಮುಖ್ಯ ಶಿಕ್ಷಕರನ್ನು ಹೊನಕೇರಿ ನಿಂದಿಸಿದ್ದಾರೆ. ಶಿಕ್ಷಕಿಯೊಬ್ಬರಿಗೆ ಕೀಟಲೆ ಮಾಡಿದ್ದರಿಂದ ಅವರು ರಜೆ ಮೇಲೆ ತೆರಳಿದ್ದಾರೆ. ಇದರಿಂದ ಏನು ತಪ್ಪು ಮಾಡದಿರುವ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ.

ಸ್ಥಳಕ್ಕೆ ಆಗಮಿಸಿದ ಬಿಇಒ ನಂಜುಂಡಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ‘ಈ ಕುರಿತು ನಿಮಗೆಷ್ಟು ಸಲ ಮನವಿ ಸಲ್ಲಿಸಿದ್ದೇವೆ. ಬೆಳಗ್ಗೆ 10 ಗಂಟೆಗೆ ದೂರವಾಣಿ ಮೂಲಕ ಸಮಸ್ಯೆ ಹೇಳಿಕೊಂಡರೂ ಸೌಜನ್ಯದಿಂದ ಮಾತನಾಡುತ್ತಿಲ್ಲ. ಕೇವಲ ನೋಡೋಣ, ಮಾಡೋಣ ಎಂಬ ಹಾರಿಕೆ ಉತ್ತರ ಕೊಡುತ್ತೀರಿ, ಮಧ್ಯಾಹ್ನ 12 ಗಂಟೆಗೆ ಡಿಡಿಪಿಐ ಅವರ ಗಮನಕ್ಕೆ ತಂದ ಮೇಲೆ ಓಡಿ ಬಂದ್ರಾ, ನಿಮ್ಮಂಥವರು ಇರುವುದರಿಂದಲೇ ಇಂಥವರಿಗೆ ಕಡಿವಾಣ ಇಲ್ಲದಂತಾಗಿದೆ’ ಎಂದು ದೂರಿದರು. ಅಲ್ಲದೆ, ‘ಹಲವೆಡೆ ಹಗರಣ ಮಾಡಿರುವ ಇಂಥ ಶಿಕ್ಷಕ ನಮ್ಮ ಗ್ರಾಮಕ್ಕೆ ಬೇಡ, ತಕ್ಷಣ ಶಿಕ್ಷಕ ವಿ.ಎಂ. ಹೊನಕೇರಿ ಹಾಗೂ ಅವನಿಗೆ ಬೆಂಗಾವಲಾಗಿರುವ ಸಿಆರ್​ಪಿ ಎಚ್.ಎಂ. ಕುರಿ ಅವರನ್ನು ಇಲ್ಲಿಗೆ ಕರೆಯಿಸಿ ಸಾರ್ವಜನಿಕವಾಗಿ ವಿಚಾರಣೆ ಮಾಡಬೇಕು’ ಎಂದು ಹಠ ಹಿಡಿದರು.

ಆರೋಪಿ ಶಿಕ್ಷಕನನ್ನು ದೂರವಾಣಿ ಮೂಲಕ ಸಂರ್ಪಸಿದ ಬಿಇಒ ಅವರನ್ನು ಸ್ಥಳಕ್ಕೆ ಕರೆಯಿಸಿ ಮಕ್ಕಳ ಸಾಕ್ಷಿ ಪಡೆದುಕೊಂಡರು. ಗ್ರಾಮದ ಹಿರಿಯರು, ಶಾಲಾ ಸಮಿತಿಯವರು, ಅಕ್ಷರ ದಾಸೋಹ ನಿರ್ದೇಶಕ ಬಸವರಾಜ ಅಂಗಡಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ವೈ.ಡಿ. ಗಾಣಿಗೇರ ಅವರೊಂದಿಗೆ ರ್ಚಚಿಸಿದರು. ಘಟನೆ ಸಂಬಂಧ ಮೇಲಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕವೇ ಗ್ರಾಮಸ್ಥರು ಶಾಲೆಯ ಬೀಗ ತೆಗೆದರು.  ಮಹಾಂತೇಶ ಸಾಲಿಮಠ, ಸಂಗಪ್ಪ ಕುರಿ, ನಿಜಲಿಂಗಪ್ಪ ಸಣ್ಣಕ್ಕಿ, ಎಸ್.ಎನ್. ಪಾಟೀಲ, ಎಸ್.ವೈ. ತುರನೂರ, ಜಿ.ಐ. ಸಣ್ಣಕ್ಕಿ, ನಿಂಗಬಸಪ್ಪ ಮರಚನ್ನವರ, ಎಸ್.ವಿ. ಸಾಲಿಮಠ, ಸಿ.ವಿ. ಪಾಟೀಲ, ಪಿ.ಎನ್. ಸಣ್ಣಕ್ಕಿ ಶಿವರಡ್ಡಿ ಮಾಸರಡ್ಡಿ, ಲಿಂಗಯ್ಯ ಸಾಲಿಮಠ, ಹನಮಂತ ಜೋರಲ್ಲ, ಎಸ್.ಬಿ. ಮರಚನ್ನವರ, ಬಸವರಾಜ ಮಾದರ, ಇತರರು ಪ್ರತಿಭಟನೆಯಲ್ಲಿದ್ದರು.

ಶಿಕ್ಷಕರಿಗೂ ಬೆದರಿಕೆ!

ಈ ಭಾಗದ ಶಾಲೆಗಳನ್ನು ನೋಡಿಕೊಳ್ಳುವ ಸಿಆರ್​ಪಿ (ಸಂಪನ್ಮೂಲ ವ್ಯಕ್ತಿ) ಎಚ್.ಎಂ. ಕುರಿ ಅವರು ಶಿಕ್ಷಕ ಹೊನಕೇರಿಯ ಸಂಬಂಧಿಯಾಗಿದ್ದು ಅವರ ಮೂಲಕ ಸಹ ಶಿಕ್ಷಕರು ಮತ್ತು ಮಕ್ಕಳನ್ನು ಹೆದರಿಸುತ್ತಿದ್ದಾನೆ. ಇವರಿಬ್ಬರನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ವಾರದ ಹಿಂದಷ್ಟೇ ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡಯ್ಯ ಅವರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಎಲ್ಲರೂ ಗ್ರಾಮಕ್ಕೆ ಬಂದು ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.