ರಾಜ್-ಆರತಿ ಮಳೆ ಹಾಡಿಗೆ ಸೆನ್ಸಾರ್ ಕತ್ತರಿ ಪ್ರಯೋಗ!

| ಗಣೇಶ್ ಕಾಸರಗೋಡು

42 ವರ್ಷಗಳ ಹಿಂದೆ ತೆರೆಕಂಡ ಡಾ. ರಾಜ್​ಕುಮಾರ್ ಮತ್ತು ಆರತಿ ಅಭಿನಯದ ‘ರಾಜಾ ನನ್ನ ರಾಜಾ’ ಚಿತ್ರದ ಹಾಡೊಂದಕ್ಕೆ ಭರ್ಜರಿಯಾಗಿಯೇ ಕತ್ತರಿ ಪ್ರಯೋಗವಾದ ವಿವಾದಾತ್ಮಕ ವಿಷಯವೇನಾದರೂ ನಿಮಗೆ ಗೊತ್ತಾ? ಗೊತ್ತಿರಲು ಸಾಧ್ಯವಿಲ್ಲ. ಏಕೆಂದರೆ, ಈಗಿನ ಯುವ ಪೀಳಿಗೆಗೆ ಈ ಚಿತ್ರ ತೆರೆಕಂಡ ವರ್ಷದಷ್ಟೂ ವಯಸ್ಸಾಗಿರುವುದಿಲ್ಲ! ಈ ಕಾರಣಕ್ಕಾಗಿಯೇ ಆ ಕಾಲದಲ್ಲೇ ಸೆನ್ಸಾರ್ ಕತ್ತರಿಗೆ ಗುರಿಯಾದ ‘ರಾಜಾ ನನ್ನ ರಾಜಾ’ ಚಿತ್ರದ ಮಳೆ ಹಾಡಿನ ರೋಚಕ ಮಾಹಿತಿ ನಿಮಗೆ ಕೊಡುತ್ತಿದ್ದೇವೆ.

‘ರಾಜಾ ನನ್ನ ರಾಜಾ’ ಚಿತ್ರ ನಿರ್ವಣಕ್ಕೆ ಕೈ ಹಾಕಿದ ಆ ಸಾಹಸಿಯ ಹೆಸರು; ಅಬ್ಬಾಯಿ ನಾಯ್ಡು. ಅವರ ವೃತ್ತಿಬದುಕಿನ ನಿಯತ್ತಿಗೆ ಮೆಚ್ಚಿ ಕಾಲ್​ಶೀಟ್ ನೀಡಿದ್ದರು ಡಾ. ರಾಜ್​ಕುಮಾರ್. ಕಾಲ್​ಶೀಟ್ ಸಿಕ್ಕಿದ್ದೇ ತಡ ಅಬ್ಬಾಯಿ ನೀರಿನಂತೆ ಹಣ ಚೆಲ್ಲಲು ಹೊರಟೇ ಬಿಟ್ಟರು! ಮೊಟ್ಟ ಮೊದಲು ಒಳ್ಳೆಯ ಕಥೆ ತರಲೆಂದು ಮುಂಬೈಗೆ ಹಾರಿದರು! ಆ ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರಾಗಿದ್ದ ಸಲೀಮ್​ಜಾವೇದ್ ಅವರನ್ನು ಭೇಟಿಯಾಗಿ ಅತ್ಯುತ್ತಮ ಕಥೆಯೊಂದನ್ನು ಬರೆಸುವುದು ಅವರ ಉದ್ದೇಶವಾಗಿತ್ತು, ಅದು ಈಡೇರಿತು. ಅಬ್ಬಾಯಿ ಅವರಿಗೆ ಖುಷಿಕೊಡುವಂಥ ಕಥೆಯೊಂದನ್ನು ಸಲೀಮ್​ಜಾವೇದ್ ಬರೆದು ಕೊಟ್ಟರು. ವಿಶೇಷವೆಂದರೆ, ಅವರು ಕೇಳಿರುವುದಕ್ಕಿಂತಲೂ ಹೆಚ್ಚು ದುಡ್ಡು ಕೊಟ್ಟು ಕಥೆ ಖರೀದಿಸಿದರು ಅಬ್ಬಾಯಿ!

ಬೆಂಗಳೂರಿಗೆ ಬಂದವರೇ ಚಿತ್ರಕಥೆ, ಸಂಭಾಷಣೆ, ಗೀತೆರಚನೆಯ ಕೆಲಸವನ್ನು ಚಿ. ಉದಯಶಂಕರ್​ಗೆ ಒಪ್ಪಿಸಿದರು. ಸಂಗೀತ ನಿರ್ದೇಶನದ ಕೆಲಸವನ್ನು ಜಿ.ಕೆ. ವೆಂಕಟೇಶ್​ಗೆ ಕೊಟ್ಟರು. ‘ಹೂವು ಮುಳ್ಳು’ ಖ್ಯಾತಿಯ ಎ.ವಿ. ಶೇಷಗಿರಿರಾಯರಿಗೆ ನಿರ್ದೇಶನದ ಹೊಣೆ ವಹಿಸಿದರು. ರಾಜಕುಮಾರ್ ಚಿತ್ರ ಎಂದ ಮೇಲೆ ತಾರಾಗಣ ಕೂಡ ಭರ್ಜರಿಯಾಗಿ ಇರಬೇಕೆಂದು ಆರತಿ, ಅಶ್ವತ್ಥ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಎಂ.ಪಿ. ಶಂಕರ್, ರಾಜಾನಂದ್, ಸಂಪತ್, ಚಂದ್ರಶೇಖರ್, ಜಯಾ, ಸುಮಾ ಮೊದಲಾದವರನ್ನೆಲ್ಲ ಆಯ್ಕೆ ಮಾಡಿಕೊಂಡು, ಅವರು ಕೇಳಿದಷ್ಟು ಸಂಭಾವನೆ ಫಿಕ್ಸ್ ಮಾಡಿದರು! ರಾಜ್​ಕುಮಾರ್ ಡೇಟ್ಸ್​ಗೆ ಎಲ್ಲರ ಡೇಟ್ಸ್ ಹೊಂದಿಕೆ ಆಗುವಂತೆ ನೋಡಿಕೊಂಡರು ಅಬ್ಬಾಯಿ!

ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಭರ್ಜರಿ ಸೆಟ್ ಹಾಕಿಸಿದರು. ಅದರಲ್ಲಿ ರಾಜ್ ಮತ್ತು ಆರತಿಯವರ ಯುಗಳ ಗೀತೆಯೊಂದನ್ನು ಚಿತ್ರಿಸುವುದು ಅಬ್ಬಾಯಿ ಉದ್ದೇಶವಾಗಿತ್ತು. ವಿಶೇಷವೆಂದರೆ, ಈ ಯುಗಳ ಗೀತೆಗೆ ರಾಜ್ ಮತ್ತು ಆರತಿ ಮಳೆಯಲ್ಲಿ ನೆನೆಯಬೇಕಿತ್ತು. ಪೈಪ್​ನಲ್ಲಿ ನೀರು ಹಾಯಿಸಿದ್ದಾಯಿತು, ಮಳೆಯಲ್ಲಿ ಹಾಡುವ ದೃಶ್ಯವನ್ನು ಚಿತ್ರೀಕರಿಸಿದ್ದೂ ಆಯಿತು. ಮಾರನೇ ದಿನದ ಚಿತ್ರೀಕರಣದ ಹೊತ್ತಿಗೆ ನಾಯಕ-ನಾಯಕಿಯರಿಬ್ಬರಿಗೂ ಜ್ವರವೋ ಜ್ವರ! ಎರಡು ದಿನ ಚಿತ್ರೀಕರಣವನ್ನು ನಿಲ್ಲಿಸಿದ್ದಾಯಿತು. ಮೂರನೇ ದಿನ ಚಿತ್ರೀಕರಣ ಶುರು. ರಾಜ್ ಮತ್ತು ಆರತಿ ಸೆಟ್​ಗೆ ಬಂದು ಕ್ಯಾಮರಾ ಮುಂದೆ ನಿಂತಿದ್ದಾರೆ. ಶೇಷಗಿರಿರಾಯರು ಸ್ಟಾರ್ಟ್ ಅಂದಿದ್ದಾರೆ, ಮಳೆ ಶುರು. ಅರೇ! ಬಿಸಿ ಬಿಸಿ ಮಳೆ! ಇಬ್ಬರೂ ಅಚ್ಚರಿಯಿಂದ ಅಬ್ಬಾಯಿಯವರನ್ನು ನೋಡಿದರೆ ಅಬ್ಬಾಯಿ ನಸು ನಗುತ್ತಿದ್ದರು! ರಾಜ್ ಮತ್ತು ಆರತಿ ಅವರಿಗೆ ನೆಗಡಿ-ಜ್ವರ ಬರಬಾರದೆಂದು ತಣ್ಣೀರಿನ ಬದಲು ಪೈಪ್​ನಲ್ಲಿ ಬಿಸಿನೀರು ಹಾಕಿಸುವ ವ್ಯವಸ್ಥೆ ಮಾಡಿದ್ದರು ಅಬ್ಬಾಯಿ!

ಈ ಮಳೆ ಹಾಡಿನ ದೃಶ್ಯವನ್ನು ಛಾಯಾಗ್ರಾಹಕ ಚಿಟ್ಟಿಬಾಬು ವಿಶೇಷ ಚಮತ್ಕಾರದಿಂದ ಸೆರೆ ಹಿಡಿದರು. ಅವರ ಕೆಲಸವನ್ನು ರಶಸ್ ಹಂತದಲ್ಲಿ ನೋಡಿದ ಮದರಾಸಿನ ತಂತ್ರಜ್ಞರು ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ವ್ಯಕ್ತಪಡಿಸಿದರು! ಆದರೆ, ದುರಂತವೆಂದರೆ ಈ ಮಳೆಯ ಹಾಡಿನ ದೃಶ್ಯವನ್ನು ಸೆನ್ಸಾರ್ ಮಂದಿ ಸುತರಾಂ ಒಪ್ಪಲಿಲ್ಲ! ಪ್ರಮುಖ ದೃಶ್ಯಗಳಿಗೆಲ್ಲ ಕತ್ತರಿ ಪ್ರಯೋಗವಾಯಿತು. ಅಷ್ಟೊಂದು ಕಷ್ಟ ಬಿದ್ದು ಆಸೆಯಿಂದ ಚಿತ್ರೀಕರಿಸಿದ ಭಾಗಗಳನ್ನು ಸೆನ್ಸಾರ್ ಮಂದಿ ಯಾವ ಮುಲಾಜೂ ಇಲ್ಲದೆ ನಿರ್ದಯವಾಗಿ ಕತ್ತರಿಸಿದ್ದನ್ನು ಕಂಡು ಅಬ್ಬಾಯಿಯವರ ಪಿತ್ತ ನೆತ್ತಿಗೇರಿತ್ತು! ಚಿತ್ರದ ಬಿಡುಗಡೆಯ ದಿನಾಂಕವನ್ನು ಘೊಷಿಸಿದ್ದರೂ ಹಠ ಬಿಡದ ಅಬ್ಬಾಯಿ ಮತ್ತೆ ಅದೇ ಹಾಡಿನ ದೃಶ್ಯವನ್ನು ಗಗನಚುಕ್ಕಿ-ಭರಚುಕ್ಕಿ ಪ್ರದೇಶದಲ್ಲಿ ರೀಶೂಟ್ ಮಾಡಿಸಿದರು. ಕೊನೆಗೂ 1976ರ ಜೂನ್ 4ರಂದು ‘ರಾಜಾ ನನ್ನ ರಾಜಾ’ ಚಿತ್ರ ತೆರೆಕಂಡಿತು. ಈ ಚಿತ್ರ ಮೈಸೂರಿನ ಲಕ್ಷ್ಮೀ’ ಟಾಕೀಸ್​ನಲ್ಲಿ ಶತದಿನ ಭಾಗ್ಯ ಕಂಡರೆ, ದಾವಣಗೆರೆಯ ಮೋತಿ ಟಾಕೀಸ್​ನಲ್ಲಿ ಸಿಲ್ವರ್ ಜುಬಿಲಿ ಆಚರಿಸಿಕೊಂಡಿತು.

ಅಂದಹಾಗೆ, ಪ್ರೀಮಿಯರ್ ಸ್ಟುಡಿಯೋದ ಈ ಕಡೆ ‘ರಾಜಾ ನನ್ನ ರಾಜಾ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದರೆ, ಆ ಕಡೆ ತಮಿಳು ಚಿತ್ರರಂಗದ ಆ ಕಾಲದ ‘ಸೂಪರ್ ಸ್ಟಾರ್’ ಎಂ.ಜಿ. ರಾಮಚಂದ್ರನ್ ಅವರ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಪಕ್ಕದ ಫ್ಲೋರ್​ನಲ್ಲಿ ರಾಜ್​ಕುಮಾರ್ ಇರುವುದನ್ನು ಗಮನಿಸಿದ ಎಂಜಿಆರ್, ಒಂದು ಸೌಜನ್ಯದ ಭೇಟಿಗಾಗಿ ಆ ಕಡೆ ಹೋಗುತ್ತಾರೆ. ಇದನ್ನು ಗಮನಿಸಿದ ರಾಜಣ್ಣ ಕೂತಲ್ಲಿಂದ ಎದ್ದು ಬಂದು ಎಂಜಿಆರ್ ಅವರನ್ನು ಸ್ವಾಗತಿಸುತ್ತಾರೆ. ಕುಶಲೋಪರಿಯ ನಂತರ ಮಳೆ ಹಾಡಿನ ವಿವರ ಮತ್ತು ಬಿಸಿ ನೀರಿನ ಬಳಕೆಯ ವಿಚಾರ ತಿಳಿದು ಖುಷಿ ಪಟ್ಟ ಎಂಜಿಆರ್, ಅಬ್ಬಾಯಿಯವರ ಕಾಳಜಿಯನ್ನು ಬಹುವಾಗಿ ಮೆಚ್ಚಿಕೊಂಡರಂತೆ. ಇಷ್ಟೇ ಅಲ್ಲದೆ, ‘ನೀವೊಬ್ಬ ಅದ್ಭುತ ನಿರ್ವಪಕರು’- ಎಂದು ಹೇಳಿ ಅಬ್ಬಾಯಿಯವರ ಬೆನ್ನು ತಟ್ಟಿದರಂತೆ ಎಂಜಿಆರ್! ರಾಜ್​ಕುಮಾರ್ ಅವರಂತೂ ಅಬ್ಬಾಯಿ ಅವರನ್ನು ಎಂಜಿಆರ್ ಅವರಿಗೆ ಪರಿಚಯಿಸಿದ ರೀತಿ ಹೇಗಿತ್ತೆಂದರೆ; ‘ನಿಮ್ಮ ತಮಿಳು ಚಿತ್ರರಂಗದ ಚಿನ್ನಪ್ಪ ದೇವರ್ ಇದ್ದಹಾಗೆ ಇವರು, ಕನ್ನಡದ ಚಿನ್ನಪ್ಪ ದೇವರ್ ಅಲ್ಲ, ದೊಡ್ಡಪ್ಪ ದೇವರ್…’- ಎಂದು ಹೇಳಿ ಪರಿಚಯಿಸಿದಾಗ ಗೊಳ್ಳೆಂದು ನಕ್ಕರಂತೆ ಎಂಜಿಆರ್! ಈ ಘಟನೆಯನ್ನು ಅಬ್ಬಾಯಿಯವರು ಕೊನೆಗಾಲದ ತನಕ ತಮ್ಮ ಆಪ್ತ ಪತ್ರಕರ್ತರಲ್ಲಿ ಹೇಳಿಕೊಂಡು ಖುಷಿಪಟ್ಟುಕೊಳ್ಳುತ್ತಿದ್ದರಂತೆ!

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *