ಶಿವಮೊಗ್ಗ: ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ತರುವ ಮೂಲಕ ಕೃಷಿ ಭೂಮಿ ಉಳ್ಳವರ ಪಾಲಾಗಲು ಸರ್ಕಾರವೇ ಕಾರಣವಾಗಿದೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ‘ನರಗುಂದ ರೈತ ಬಂಡಾಯ-ಹುತಾತ್ಮರ ನೆನಪು ಮತ್ತು ರೈತ ಹೋರಾಟದ ಮುಂದಿನ ಹೆಜ್ಜೆಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆಯ ಕಪಿಮುಷ್ಟಿಗೆ ಸಿಲುಕಿರುವ ರೈತರು ಭೂಹೀನರಾಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕ. ರೈತರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಉಳ್ಳವರು ಭೂಮಿ ಕೊಂಡು ಮಾರುಕಟ್ಟೆ ಸರಕನ್ನಾಗಿ ಮಾಡುತ್ತಾರೆ. ಒಕ್ಕಲುತನವೇ ಮುಚ್ಚಿಹೋಗುವ ಸಾಧ್ಯತೆ ಇದ್ದು, ಭಾರತದ ಕೃಷಿ ಸಂಸ್ಕೃತಿ ಸಂಪೂರ್ಣ ನಾಶವಾಗಲಿದೆ ಎಂದರು.
ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮುಂತಾದವು ಖಾಸಗಿ ಮಾರುಕಟ್ಟೆ ತೆರೆಯಲು ಅನುಕೂಲ ಮಾಡಿಕೊಟ್ಟಿವೆ. ಬಹುರಾಷ್ಟ್ರೀಯ ಕಂಪನಿಗಳು ಸುಲಭವಾಗಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸುವುದರಿಂದ ರೈತರು ಶೋಷಣೆಗೆ ಒಳಗಾಗುತ್ತಾರೆ. ಇದರ ವಿರುದ್ಧ ರೈತ ಸಂಘಗಳು ಜಾಗೃತಿ ಮೂಡಿಸಿ ಹೋರಾಟಕ್ಕೆ ಸಜ್ಜಾಗಬೇಕೆಂದರು.
ಪ್ರಗತಿಪರ ಚಿಂತಕ ಪ್ರೊ. ರಾಜಪ್ಪ ಮಾಸ್ತರ್ ಕಾರ್ಯಕ್ರಮ ಉದ್ಘಾಟಿಸಿದರು. ರೈತ ಮುಖಂಡರಾದ ಜಿ.ಎಸ್.ರಾಜೇಂದ್ರ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಜಯಪ್ಪಗೌಡ್ರು ಇತರರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯ ನರಗುಂದ ರೈತ ಬಂಡಾಯದಲ್ಲಿ ಹುತಾತ್ಮರಾದ ರೈತರಿಗೆ ನಮನ ಸಲ್ಲಿಸಲಾಯಿತು. ಕೃಷಿ ಭೂಮಿ ಮಾರಾಟದ ಸರಕಲ್ಲ ಎಂಬ ಕರಪತ್ರ ಬಿಡುಗಡೆ ಮಾಡಲಾಯಿತು.