ರಾಜ್ಯ ಸಮ್ಮಿಶ್ರ ಸರ್ಕಾರ ಸ್ಥಿರ

ಚಿಕ್ಕಮಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಸ್ಥಿರವಾಗಿದ್ದು, ಸರ್ಕಾರದಲ್ಲಿ ಯಾವುದೇ ಅಲ್ಲೋಲಕಲ್ಲೋಲವಾಗಿಲ್ಲ. ಎಲ್ಲವೂ ಸಮರ್ಪಕವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಕಾಂಗ್ರೆಸ್ ಶಾಸಕರು ಎಲ್ಲಿಯೂ ಹೋಗದೆ ನಮ್ಮೊಂದಿಗಿರುತ್ತಾರೆ. ಈ ವಿಚಾರದಲ್ಲಿ ಬಿಜೆಪಿಯವರಿಗೆ ಭಯವಿದೆ. ಹಾಗಾಗಿಯೇ ಅವರ ಶಾಸಕರನ್ನು ರೆಸಾರ್ಟ್​ನಲ್ಲಿಟ್ಟಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಕಾಂಗ್ರೆಸ್​ನ ಹತ್ತು ಶಾಸಕರು ನಾಪತ್ತೆಯಾಗಿದ್ದಾರೆನ್ನುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಅವರೆಲ್ಲ ಎಲ್ಲಿದ್ದಾರೆ ಎನ್ನುವುದು ನಮಗೆ ಮುಖ್ಯವಲ್ಲ. ಅವರು ನಮ್ಮ ಪಕ್ಷದಲ್ಲೇ ಇದ್ದಾರೆ. ಫ್ಯಾಸಿಸ್ಟ್ ವ್ಯವಸ್ಥೆಯಲ್ಲಿರುವವರು ಆ ರೀತಿ ಯೋಚನೆ ಮಾಡುತ್ತಾರೆ ಎಂದು ಚುಚ್ಚಿದರು.

ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ನ ಕೆಲವು ಸಚಿವರು ಅಧಿಕಾರ ತ್ಯಾಗಕ್ಕೆ ಸಿದ್ಧರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಕಾಂಗ್ರೆಸ್ ಕಾರ್ಯಕರ್ತರು. ಪಕ್ಷದಿಂದಾಗಿಯೇ ಸಚಿವರಾಗಿದ್ದೇವೆ. ಪಕ್ಷ ಏನೇ ಆದೇಶ ನೀಡಿದರೂ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ಹಿಂದೆಯೂ ಮಾಡಿದ್ದೇವೆ, ಈಗಲೂ ಮಾಡಲು ಸಿದ್ಧರಿದ್ದೇವೆ ಎಂದರು.

ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ನಾನು ಅಂದೂ ಪಕ್ಷದ ತೀರ್ವನಕ್ಕೆ ಒಪ್ಪಿ ರಾಜೀನಾಮೆ ನೀಡಿದ್ದೆ. ಡಿವೈಎಸ್ಪಿ ಗಣಪತಿ ವಿಚಾರಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನಾವೆಂದೂ ಅಧಿಕಾರಕ್ಕೆ ಅಂಟಿ ಕುಳಿತವರಲ್ಲ. ಅಧಿಕಾರ ಪಕ್ಷದಿಂದ ಬಂದಿದೆ ಎಂಬುದು ನಮಗೆ ಗೊತ್ತು ಎಂದರು.

ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರಾಜ್ಯ ಭೇಟಿಗೆ ಬೇರೆ ಯಾವುದೇ ಉದ್ದೇಶವಿಲ್ಲ. ಪಕ್ಷದ ರಾಜ್ಯ ಉಸ್ತುವಾರಿಯಾಗಿ ಮುಂಬರುವ ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಅವರು ಬಂದಿದ್ದಾರೆ ಎಂದು ಹೇಳಿದರು.