ರಾಜ್ಯ ಮಟ್ಟದ ಸಿಂಗಲ್ಸ್​ನಲ್ಲಿ ಯಶಸ್ವಿನಿಗೆ ಜಯ

ಧಾರವಾಡ: ನಗರದ ಕಾಸ್ಮಸ್ ಕ್ಲಬ್ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿಯ ಮೊದಲ ದಿನ ನಡೆದ ಮಹಿಳೆಯರ ಸಿಂಗಲ್ಸ್​ನಲ್ಲಿ ಸ್ಕೈಯ್್ಸ ಯಶಸ್ವಿನಿ ಘೊರ್ಪಡೆ ವಿಜೇತರಾದರು. ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್​ನ ಮಾರಿಯಾ ರೋನಿ ವಿರುದ್ಧ 4-3 ಅಂಕಗಳಿಂದ ಜಯಗಳಿಸಿದರು.

ಇದಕ್ಕೂ ಪೂರ್ವ ನಡೆದ ಮೊದಲ ಸೆಮಿಫೈನಲ್ಸ್​ನಲ್ಲಿ ಸ್ಕೈಯ್್ಸ ಸಂಯುಕ್ತಾ ಎ. ಅವರನ್ನು 4-1 ಅಂಕಗಳಿಂದ ಮಣಿಸಿ ರೋನಿ ಫೈನಲ್ ಪ್ರವೇಶಿಸಿದರೆ, 2ನೇ ಸೆಮಿಫೈನಲ್ಸ್ ನಲ್ಲಿ ಸುಷ್ಮಿತಾ ಬಿದರಿ ಅವರನ್ನು 4-0 ಅಂಕಗಳಿಂದ ಯಶಸ್ವಿನಿ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದ್ದರು.

ಕ್ವಾರ್ಟರ್ ಫೈನಲ್​ನಲ್ಲಿ ಕಲ್ಯಾಣಿ ಡಿ. ವಿರುದ್ಧ ಮಾರಿಯಾ ರೋನಿ 4-0 ಅಂಕಗಳಿಂದ ಜಯಗಳಿಸಿದರೆ, ಕೌಮುದಿ ಪಾಟಂಕರ ವಿರುದ್ಧ 4-0 ಅಂಕಗಳಿಂದ ಸುಷ್ಮಿತಾ ಬಿದರಿ ಜಯಗಳಿಸಿದರು. ಖುಷಿ ವಿ. ವಿರುದ್ಧ ಸಂಯುಕ್ತಾ ಎ. 4-3 ಅಂಕಗಳಿಂದ ಹಾಗೂ ಕೊನೆ ಪಂದ್ಯದಲ್ಲಿ ಅದಿತಿ ಪಿ. ಜೋಶಿ ವಿರುದ್ಧ ಯಶಸ್ವಿನಿ ಘೊರ್ಪಡೆ 4-2 ಅಂಕಗಳಿಂದ ಜಯಗಳಿಸಿದರು.

ಚಾಲನೆ: ಟೇಬಲ್ ಟೆನಿಸ್ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಅಮೃತ ದೇಸಾಯಿ ಮಾತನಾಡಿ, ಕಾಸ್ಮಸ್ ಕ್ಲಬ್ ಎಲ್ಲ ಬಗೆಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಉತ್ತರ ಕರ್ನಾಟಕದ ಮಕ್ಕಳಿಗೆ ಕ್ರೀಡೆಯಲ್ಲಿ ಸಾಕಷ್ಟು ಆಸಕ್ತಿ ಇದೆ. ಅವರಿಗೆ ಸೌಲಭ್ಯಗಳು ಬೇಕಿದ್ದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತೆ ಅವರನ್ನು ಸಿದ್ಧಗೊಳಿಸಬೇಕಿದೆ. ಖಾಸಗಿ ಸಂಸ್ಥೆಗಳೂ ಪ್ರೋತ್ಸಾಹ ನೀಡಬೇಕು ಎಂದರು.

ಪಂದ್ಯಾವಳಿಯ ಉಸ್ತುವಾರಿ ರವಿ ನಾಯಕ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಬಸವರಾಜ ತೇಗೂರ ಮಾತನಾಡಿ, ಕ್ಲಬ್​ನಲ್ಲಿ ತರಬೇತಿ ಹೊಂದಿದ ಸಾಕಷ್ಟು ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ಲಬ್​ನಲ್ಲಿ ಟೇಬಲ್ ಟೆನಿಸ್ ತರಬೇತಿ ದೊರೆಯುತ್ತಿದ್ದು, ಕ್ರೀಡೆಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸಲು ಸಿದ್ಧ ಎಂದರು. ಗೌರವ ಕಾರ್ಯದರ್ಶಿ ವಿ.ಜಿ.ತಲವಾಯಿ, ಬಿ.ಬಿ.ಮಾಶಾಳ, ಬಿ.ಎ. ಜಹಗೀರದಾರ, ಚನಬಸಪ್ಪ ಮರದ, ಆಡಳಿತ ಮಂಡಳಿ ಸದಸ್ಯರಾದ ನಿತಿನ ಟಗರಪುರ, ಅಜಯ ಗುಡ್ಡದಮಠ, ವಿಜಯ ಸುಣಗಾರ, ಸುರೇಶ ಪಾಟೀಲ, ಮುಖ್ಯ ರೆಫ್ರರಿ ಆರ್. ಫ್ರಾನ್ಸಿಸ್, ಇತರರು ಇದ್ದರು. ಮಹೇಶ ಹಾಲಬಾವಿ ಸ್ವಾಗತಿಸಿದರು. ಹನುಮಂತ ಕೊಟಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎ. ಅಳವಂಡಿ ನಿರೂಪಿಸಿದರು.</