ರಾಜ್ಯ ಮಟ್ಟದ ಶಿಕ್ಷಕರ ಉದ್ಯೋಗ ಮೇಳ

ಅಂಕೋಲಾ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೂ ಉದ್ಯೋಗಾವಕಾಶ ದೊರೆಯುತ್ತಿಲ್ಲ. ಕೆಲವರಿಗೆ ದೂರದ ಊರಿಗೆ ಹೋಗಿ ಉದ್ಯೋಗ ಕೇಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಶಿಕ್ಷಕರ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಪಟ್ಟಣದ ಕೆಎಲ್​ಇ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ರಾಜ್ಯ ಮಟ್ಟದ ಶಿಕ್ಷಕರ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕಾರವಾರದಲ್ಲಿಯೂ ಜ. 19, 20ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡಿ, ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಕೆಎಲ್​ಇ ಸಂಸ್ಥೆಯಲ್ಲಿ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರೇಮಾ ಪಿಕಳೆ ಮತ್ತು ಗಿರಿ ಪಿಕಳೆ ಅವರು ಸ್ಥಾಪಿಸಿದ ಈ ಶಾಲೆಗಳಿಂದಾಗಿ ಸ್ಥಳೀಯರು ಹೆಚ್ಚು ಶಿಕ್ಷಣ ಪಡೆಯಲು ಸಾಧ್ಯವಾಯಿತು ಎಂದರು.
ಉದ್ಯಮಿ ಮಂಗಲದಾಸ ಕಾಮತ, ಪ್ರಮುಖರಾದ ಬಿ.ಆರ್. ಪಾಟೀಲ, ಮಹಾದೇವ ಬಳಗಾರ, ಮಿಲನ್ ನಾರ್ವೆಕರ, ಡಾ. ಡಿ.ಎಲ್. ಭಟ್ಕಳ, ಆರ್. ನಟರಾಜ ಉಪಸ್ಥಿತರಿದ್ದರು. ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 43 ಶಿಕ್ಷಣ ಸಂಸ್ಥೆಗಳು ಆಗಮಿಸಿದ್ದು, 266 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ರೇಷ್ಮಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಸ್ವಾಗತಿಸಿದರು. ಉಪನ್ಯಾಸಕರಾದ ಮಂಜುನಾಥ ಇಟಗಿ ನಿರ್ವಹಿಸಿದರು. ಪುಷ್ಪಾ ಎ. ನಾಯ್ಕ ವಂದಿಸಿದರು.