ರಾಜ್ಯ, ಕೇಂದ್ರ ಸರ್ಕಾರ ಹಿಂದುಳಿದವರ ಅಭಿವೃದ್ಧಿಗೆ ಬದ್ಧ

1 Min Read
ರಾಜ್ಯ, ಕೇಂದ್ರ ಸರ್ಕಾರ ಹಿಂದುಳಿದವರ ಅಭಿವೃದ್ಧಿಗೆ ಬದ್ಧ
ಅಥಣಿ ಕೃಷ್ಣಾ ರೈತ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಳವಾರ ಸಮುದಾಯದ ವಿದ್ಯಾರ್ಥಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಟಿ ಪ್ರಮಾಣ ಪತ್ರ ವಿತರಿಸಿದರು. ವಿಪ ಸದಸ್ಯ ಲಕ್ಷ್ಮಣ ಸವದಿ, ವೀರೇಶ್ವರ ದೇವರು, ಹನುಮಂತ ಕಾಲುವೆ ಇತರರಿದ್ದರು.

ಅಥಣಿ ಗ್ರಾಮೀಣ, ಬೆಳಗಾವಿ: ಮೀಸಲಾತಿ ಹೆಚ್ಚಳಕ್ಕೆ ತಳವಾರ ಸಮುದಾಯದವರ ದಶಕಗಳ ಹೋರಾಟಕ್ಕೆ ಸರ್ಕಾರ ನ್ಯಾಯ ಒದಗಿಸಿದ್ದು ಸಂತಸ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ತಾಲೂಕಿನ ಹಲ್ಯಾಳ ಕೃಷ್ಣಾ ರೈತ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಥಣಿ-ರಾಯಬಾಗ ತಳವಾರ ಸಮುದಾಯದ ಬೃಹತ್ ಸಮಾವೇಶ ಹಾಗೂ ಅಭಿನಂದನಾ ಸಮಾರಂಭದಲ್ಲಿ ತಳವಾರ ಸಮುದಾಯದ ವಿದ್ಯಾರ್ಥಿಗಳಿಗೆ ಎಸ್ಟಿ ಮೀಸಲಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಹಿಂದುಳಿದವರ ಅಭಿವೃದ್ಧಿಗೆ ಬದ್ಧವಾಗಿವೆ. ಸರ್ಕಾರ ತಳವಾರ ಸಮುದಾಯಕ್ಕಿದ್ದ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಏರಿಸಲಾಗಿದ್ದು, ಸಮುದಾಯದವರು ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಎಸ್ಸಿ ಹಾಗೂ ಎಸ್ಟಿ ಸಮುದಾಯದವರು ಸಮಾಜದ ಮುಖ್ಯ ವಾಹಿನಿಗೆ ಬರಲು ಹಲವಾರು ಸವಲತ್ತುಗಳನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಅದರಲ್ಲಿ ಗೃಹ ಬಳಕೆಯ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗಿದೆ. ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗುವಂತಾದರೆ, ಅವರು ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಬಲಿಷ್ಠ, ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ಸಿಂದಗಿ ಉಪಚುನಾವಣೆ ಸಂದರ್ಭದಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ದೊರಕಿಸಿಕೊಟ್ಟು ನಿಮ್ಮ ಸನ್ಮಾನ ಸ್ವೀಕರಿಸುತ್ತೇನೆ ಎಂದು ಹೇಳಿದ್ದೆ. ಇಂದು ಆ ದಿನ ಬಂದಿದೆ. ಶೇ.3 ಇದ್ದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಲಾಗಿರುವುದು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದರು. ಸಾನಿಧ್ಯ ವಹಿಸಿದ್ದ ತೆಲಸಂಗದ ವೀರೇಶ್ವರ ದೇವರು ಮಾತನಾಡಿ, ಮೀಸಲಾತಿ ಸದುಪಯೋಗ ಪಡೆದುಕೊಂಡು ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಿ ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂದರು.

See also  ಕುಸ್ತಿ ಪಟುಗಳಿಗೆ ಲೈಂಗಿಲ ದೌರ್ಜನ್ಯ ನೀಡಿದ ಆರೋಪಿತ ಸಂಸದನ ಬಂಧನಕ್ಕೆ ಆಗ್ರಹ

11ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಸ್ಟಿ ಪ್ರಮಾಣಪತ್ರ ವಿತರಿಸಲಾಯಿತು. ಹನುಮಂತ ಕಾಲುವೆ, ಸಿದ್ದರಾಮ ಗಸ್ತಿ, ಬಸಪ್ಪ ಸನದಿ, ಲಕ್ಷ್ಮಣ ಕೋಳಿ, ಬಾಪು ಗಸ್ತಿ, ಪ್ರಕಾಶ ಕೋಳಿ, ಧನಪಾಲ ಸನದಿ, ಅಪ್ಪಾಸಾಬ ಸನದಿ, ಮಲ್ಲಿಕಾರ್ಜುನ ದಳವಾಯಿ, ಮಹಾದೇವ ಚಿವಾಡೆ, ಸತೀಶ ಕೋಳಿ, ದಶರಥ ಅಂಬಿ, ಕುಮಾರ ಗಸ್ತಿ ಇತರರಿದ್ದರು.

Share This Article