Wednesday, 12th December 2018  

Vijayavani

Breaking News

ರಾಜ್ಯಾದ್ಯಂತ ಎರಡೂವರೆ ಲಕ್ಷ ಕಾರ್ಯಕರ್ತರಿಂದ 4,642 ಶ್ರದ್ಧಾಕೇಂದ್ರ ಸ್ವಚ್ಛ

Wednesday, 17.01.2018, 3:02 AM       No Comments

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸಂದೇಶಕ್ಕೆ ಸ್ಪಂದಿಸಿದ ಭಕ್ತರು ರಾಜ್ಯಾದ್ಯಂತ ಮಂದಿರ, ಬಸದಿ, ಚರ್ಚ್ ಹಾಗೂ ಮಸೀದಿ ಒಳಗೊಂಡಂತೆ 4,500ಕ್ಕೂ ಹೆಚ್ಚಿನ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಮಹಾ ಅಭಿಯಾನ ಕೈಗೊಂಡು ಯಶಸ್ವಿಗೊಳಿಸಿದ್ದಾರೆ.

ಹೆಗ್ಗಡೆಯವರು 2016ರಲ್ಲಿ ನಾಡಿನಾದ್ಯಂತ ಸ್ವಚ್ಛ ಶ್ರದ್ಧಾಕೇಂದ್ರ ಅಭಿಯಾನ ಆರಂಭಿಸಿದ್ದು, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯಾದ್ಯಂತ ಶ್ರದ್ಧಾಕೇಂದ್ರ ಸ್ವಚ್ಛತೆಗಾಗಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಎಸ್​ಕೆಡಿಆರ್​ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ.

ಅಭಿಯಾನದಲ್ಲಿ ದೇವಾಲಯಗಳ ಆಡಳಿತ ಮಂಡಳಿ, ಒಕ್ಕೂಟ, ಪದಾಧಿಕಾರಿಗಳು, ಸ್ಥಳೀಯ ಜನಜಾಗೃತಿ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ವರ್ಗ, ಊರ ಪ್ರಮುಖರು, ಗ್ರಾಪಂ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೈ ಜೋಡಿಸಿದ್ದಾರೆ.

ದೇವಳ ಸುತ್ತಮುತ್ತ, ಒಳಗಡೆ ಮತ್ತು ಹೊರಗಡೆ ಸ್ವಚ್ಛಗೊಳಿಸಲಾಗಿದೆ. ಮಂದಿರ, ಮಸೀದಿ, ಚರ್ಚ್, ಬಸದಿಗಳಲ್ಲಿ ಸಾಮೂಹಿಕವಾಗಿ ಭಕ್ತರು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಬೆಂಗಳೂರು, ದೊಡ್ಡಬಳ್ಳಾಪುರಗಳಲ್ಲಿನ ಆಶ್ರಮಗಳಲ್ಲಿಯೂ ಅಭಿಯಾನ ನಡೆಸಲಾಗಿತ್ತು. ದೇವಾಲಯದ ಸ್ವತ್ತು ಹಾಗೂ ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಲಾಗಿದೆ. ಬಂಗಾರ ಪೇಟೆಯಲ್ಲಿ ಪುಷ್ಕರಣಿಗಳನ್ನು ಸ್ವಚ್ಛಗೊಳಿಸಲಾಗಿದೆ. 242 ಶುದ್ಧಗಂಗಾ ಕುಡಿಯುವ ನೀರಿನ ಘಟಕ, 42 ರುದ್ರಭೂಮಿಗಳನ್ನೂ ಸ್ವಚ್ಛ ಮಾಡಲಾಗಿದೆ.

ಸಂಕ್ರಾಂತಿಯ ಸ್ವಚ್ಛತಾ ಅಭಿಯಾನದಲ್ಲಿ 4,642 ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರಲ್ಲಿ 2.5 ಲಕ್ಷ ಜನ ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಗೆ ಡಾ. ವೀರೇಂದ್ರ ಹೆಗ್ಗಡೆ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆಯೂ ಕಾರ್ಯಕ್ರಮ ನಿರಂತರವಾಗಿ ನಡೆದು ಶ್ರದ್ಧಾಕೇಂದ್ರಗಳು ಸ್ವಚ್ಛತೆ ಮತ್ತು ಪರಿಸರ ಶಾಂತತೆಯಿಂದ ಕೂಡಿರಲೆಂದು ಹಾರೈಸಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಲಕ್ಷಾಂತರ ಕಾರ್ಯಕರ್ತರಿಗೆ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಸ್ವಚ್ಛತಾ ಕಾರ್ಯಕ್ಕೆ 173 ಜಾಗೃತಿ ದಳ ರಚನೆ

ಸ್ವಚ್ಛತಾ ಕಾರ್ಯ ಮುಂದುವರಿಸುವ ಸಲುವಾಗಿ ಈಗಾಗಲೇ 173 ಜಾಗೃತಿ ದಳ ರಚನೆಗೊಂಡಿದೆ. ಪುರಸಭೆ, ನಗರಸಭೆ, ಹಾಗೂ ಗ್ರಾಪಂಗಳಿಂದ ಕಸ ವಿಲೇವಾರಿ ವಾಹನಗಳನ್ನು ಒದಗಿಸಲಾಗಿತ್ತು. ತುಮಕೂರು ಜಿಲ್ಲೆಯಲ್ಲಿ 20,000ಕ್ಕೂ ಅಧಿಕ ಕಾರ್ಯಕರ್ತರು 4,500 ಶ್ರದ್ಧಾಕೇಂದ್ರಗಳಲ್ಲಿ ಒಂದೇ ದಿನದಲ್ಲಿ ಸ್ವಚ್ಛಗೊಳಿಸಿದರು. ನಗರಸಭೆ ಅಧ್ಯಕ್ಷರು, ಸದಸ್ಯರು, ಪೊಲೀಸ್ ಅಧಿಕಾರಿಗಳು, ಸ್ಥಳೀಯ ಶಾಸಕರು, ಮೇಯರ್, ಉಪಮೇಯರ್, ದೇವಳ ಅರ್ಚಕರು ಭಾಗವಹಿಸಿದ್ದು ವಿಶೇಷ.

ಸ್ವಚ್ಛತಾ ಅಭಿಯಾನ ವಿವರ

ದ.ಕ. ಜಿಲ್ಲೆ 218 ಶ್ರದ್ಧಾಕೇಂದ್ರಗಳಲ್ಲಿ 10,820 ಕಾರ್ಯಕರ್ತರು, ಉಡುಪಿಯ 119 ಕೇಂದ್ರಗಳಲ್ಲಿ 7,208, ಕೊಡಗು 94 ಕಡೆ 4,067, ಶಿವಮೊಗ್ಗದ 86ರಲ್ಲಿ 3,830 ಕಾರ್ಯಕರ್ತರು, ಬಾಗಲಕೋಟೆಯ 122 ಕಡೆ 5,015, ವಿಜಯಪುರ ಜಿಲ್ಲೆಯ 81ರಲ್ಲಿ 3,790 ಹಾಗೂ ಬೆಳಗಾವಿಯ 2,153ರಲ್ಲಿ 7,265 ಕಾರ್ಯಕರ್ತರು, ಮಂಡ್ಯ 249 ಶ್ರದ್ಧಾಕೇಂದ್ರಗಳಲ್ಲಿ 11,627 ಮಂದಿ, ಬೀದರ್​ನ 34ರಲ್ಲಿ 2,166, ಗದಗದ 52 ರಲ್ಲಿ 2,483, ಮೈಸೂರಿನ 265 ರಲ್ಲಿ 11,769, ಚಿತ್ರದುರ್ಗದ 151 ಕಡೆ 10,060, ಹಾಸನ ಜಿಲ್ಲೆಯ 59 ಶ್ರದ್ಧಾಕೇಂದ್ರಗಳಲ್ಲಿ 3,141, ಬಳ್ಳಾರಿಯ 282ರಲ್ಲಿ 18,983 ಮಂದಿ, ಕಾಸರಗೋಡು 65ರಲ್ಲಿ 3,210 ಕಾರ್ಯಕರ್ತರು, ಯಾದಗಿರಿಯ 69 ಕಡೆ 3,971, ಹಾವೇರಿಯ 175 ಶ್ರದ್ಧಾಕೇಂದ್ರಗಳಲ್ಲಿ 11,033, ಕಲಬುರಗಿಯ 32 ಕಡೆ 1,760, ಧಾರವಾಡ 244ರಲ್ಲಿ 11,300 ಮಂದಿ, ತುಮಕೂರಿನಲ್ಲಿ 1,451 ಶ್ರದ್ಧಾಕೇಂದ್ರಗಳಲ್ಲಿ 20,295, ಚಿಕ್ಕಮಗಳೂರು ಜಿಲ್ಲೆಯ 76ರಲ್ಲಿ 3,600 ಕಾರ್ಯಕರ್ತರು, ಚಿಕ್ಕಬಳ್ಳಾಪುರದ 188 ಕಡೆ 6,297 ಮಂದಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 177 ಕಡೆ 6,408, ರಾಯಚೂರಿನ 137 ಕೇಂದ್ರಗಳಲ್ಲಿ 4,954, ಉತ್ತರಕನ್ನಡದ 191ರಲ್ಲಿ 8,721, ಕೊಪ್ಪಳದ 168ರಲ್ಲಿ 6,235 ಕಾರ್ಯಕರ್ತರು, ದಾವಣಗೆರೆ ಜಿಲ್ಲೆಯ 156 ಕಡೆ 6,821, ರಾಮನಗರದ 142ರಲ್ಲಿ 5,942 ಮಂದಿ, ಬೆಳಗಾವಿ ಜಿಲ್ಲೆಯ 1,133 ಶ್ರದ್ಧಾಕೇಂದ್ರಗಳಲ್ಲಿ 6,526 ಕಾರ್ಯಕರ್ತರು, ಕೋಲಾರದ 106ರಲ್ಲಿ 5,307, ಚಾಮರಾಜನಗರದ 48 ಕಡೆ 3,332 ಕಾರ್ಯಕರ್ತರು ಹೀಗೆ ಒಟ್ಟು 4,642 ಶ್ರದ್ಧಾಕೇಂದ್ರಗಳಲ್ಲಿ 2,22,443 ಕಾರ್ಯಕರ್ತರು ಭಾಗವಹಿಸಿದ್ದಾರೆ ಎಂದು ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top