ರಾಜ್ಯದಲ್ಲಿದ್ದಾರೆ 4 ಲಕ್ಷ ಅಂಗವಿಕಲ ಮತದಾರರು

ಬೆಂಗಳೂರು: ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 4,03,907 ಅಂಗವಿಕಲ ಮತದಾರರು ಹೆಸರು ನೋಂದಾಯಿಸಿದ್ದಾರೆ. ಇಂತಹ ಮತದಾರರಿಗೆ ಅನುಕೂಲವಾಗಲು ಆಯ್ದ ಮತಗಟ್ಟೆಗಳನ್ನು ನೆಲಮಹಡಿಯಲ್ಲೇ ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯ ರಾಜ್ಯದ ರಾಯಭಾರಿಯಾಗಿ ಆಯ್ಕೆಯಾಗಿರುವ ಪ್ಯಾರಾಲಂಪಿಕ್ ಕ್ರೀಡಾಪಟು ಗಿರೀಶ್ ಗೌಡ ಅವರನ್ನು ಸನ್ಮಾನಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಅಂಗವಿಕಲ ಮತದಾರರಿಗೆ ಈ ಬಾರಿ ಆಯೋಗ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ರಾಜ್ಯದ 33 ಚುನಾವಣಾ ಜಿಲ್ಲೆಗಳು ಹಾಗೂ 28 ಲೋಕಸಭಾ ಕ್ಷೇತ್ರಗಳ 35,739 ಮತಗಟ್ಟೆಗಳಲ್ಲಿ ಇಲ್ಲಿಯವರೆಗೆ 4.04 ಲಕ್ಷ ಅಂಗವಿಕಲ ಮತದಾರರನ್ನು ಗುರುತಿಸಿದೆ.ಅವರ ನೆರವಿಗೆ 35,739 ಗಾಲಿ ಕುರ್ಚಿಗಳು, 41,669 ಭೂತಗನ್ನಡಿಗಳು, 2,213 ಸಂಜ್ಞಾ ಭಾಷೆ ವಿವರಣೆಗಾರರು ಮತ್ತು 31,515 ಸಹಾಯಕರನ್ನು ಒದಗಿಸಲಾಗುತ್ತಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಂಗವಿಕಲ ಮತದಾರರಿಗೆ ಕೈಗೊಳ್ಳಲಾದ ಕ್ರಮಗಳ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಈ ವಿಚಾರದಲ್ಲಿ ಕರ್ನಾಟಕ ಮಾದರಿಯಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲು ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲ ಮತದಾರರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.

ಮತದಾನ ಕೇಂದ್ರಗಳಲ್ಲಿ ಗಾಲಿ ಕುರ್ಚಿಗಳು, ಅಂಗವಿಕಲರ ಸೌಲಭ್ಯಗಳ ಕುರಿತ ಸಂಜ್ಞಾ ಭಾಷೆ, ಚಿತ್ರ ಮತ್ತು ದೃಶ್ಯಗಳನ್ನು ಹೆಚ್ಚಾಗಿ ಬಳಸಲಾಗಿರುವ ಬ್ರೖೆಲ್ ಲಿಪಿಯ ಪೋಸ್ಟರ್​ಗಳು, ಎಲ್ಲ ಮತದಾನ ಕೇಂದ್ರಗಳಲ್ಲಿ ಬ್ರೖೆಲ್​ನಲ್ಲಿ ಮುದ್ರಿಸಲಾದ ಮಾದರಿ ಮತಪತ್ರಗಳು, ಬ್ರೖೆಲ್ ಮನವಿ ಪತ, ಬ್ರೖೆಲ್ ಫೋಟೋ ಎಪಿಕ್ ಕಾರ್ಡ್, ಬ್ರೖೆಲ್​ನಲ್ಲಿ ಅಭ್ಯರ್ಥಿಗಳ ಹೆಸರು ಮುದ್ರಿಸಿದ ಪೋಸ್ಟರ್, ಸಾರಿಗೆ ವ್ಯವಸ್ಥೆ ಸೇರಿ ರ್ಯಾಂಪ್, ಚಿಕಿತ್ಸಾ ಕಿಟ್, ಕುಡಿಯುವ ನೀರು, ನೆರಳು ಮತ್ತು ಬೆಳಕಿನ ವ್ಯವಸ್ಥೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಜೀವ್​ಕುಮಾರ್ ತಿಳಿಸಿದರು.