ರಾಜೂರಲ್ಲಿ ಮೇವು ಬ್ಯಾಂಕ್ ಆರಂಭ

ಗಜೇಂದ್ರಗಡ: ಬರಗಾಲದಿಂದ ತತ್ತರಿಸಿರುವ ರೈತರಿಗೆ ಹಾಗೂ ಗೋವುಗಳಿಗೆ ಅನುಕೂಲವಾಗಲು ಸಮೀಪದ ರಾಜೂರು ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಆರಂಭಿಸಿದ ಮೇವು ಬ್ಯಾಂಕ್​ಗೆ ತಹಸೀಲ್ದಾರ್ ಗುರುಸಿದ್ಧಯ್ಯ ಹಿರೇಮಠ, ಪಶು ವೈದ್ಯಾಧಿಕಾರಿ ಡಾ. ಜಯಶ್ರೀ ಪಾಟೀಲ ಅವರು ರೈತರಿಗೆ ಮೇವು ವಿತರಿಸುವ ಮೂಲಕ ಚಾಲನೆ ನೀಡಿದರು.

ಗಜೇಂದ್ರಗಡ ತಹಸೀಲ್ದಾರ್ ಗುರುಸಿದ್ಧಯ್ಯ ಹಿರೇಮಠ ಮಾತನಾಡಿ, ರಾಜೂರು ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಸೇರಿ ಸುತ್ತಲಿನ ಗ್ರಾಮಗಳ ರೈತರಿಗೆ ರಿಯಾಯಿತಿ ದರದಲ್ಲಿ ವಾರಕ್ಕಾಗುವಷ್ಟು ಮೇವನ್ನು ಬಳ್ಳಾರಿಯಿಂದ ಅಂದಾಜು 136 ಪಾಕ್ಯೆಟ್ (50 ಕೆಜಿ) ಸಂಗ್ರಹಿಸಲಾಗಿದೆ. ಆಸಕ್ತ ರೈತರು ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು 1 ಕೆಜಿಗೆ 2 ರೂ. ದಂತೆ ಮೇವು ಪಡೆಯಬಹುದು. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಹೊಸ ಮೇವು ಬ್ಯಾಂಕ್ ಆರಂಭ, ಮೇವು ಆಮದು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಪಶು ವೈದ್ಯಾಧಿಕಾರಿ ಡಾ. ಜಯಶ್ರೀ ಪಾಟೀಲ, ರಾಜೂರು ಗ್ರಾಪಂ ಕಾರ್ಯದರ್ಶಿ ರಾಜು ಗಾರಗಿ, ಗ್ರಾಮಲೆಕ್ಕಾಧಿಕಾರಿ ಶಬ್ಬೀರ ನಿಶಾನದಾರ, ಡಿ.ಎಸ್. ಘೊರ್ಪಡೆ, ಕೆ.ಡಿ. ಕಂಬಳಿ, ಎಸ್.ಎ. ಮಾಳಗಿ, ಎ.ಬಿ. ವಾರಿಕಲ್, ಎಸ್.ಬಿ. ವನಳ್ಳಿ, ಇತರರಿದ್ದರು.