ರಾಜೀವ್​ ಗಾಂಧೀ ವಿವಿ ಟಾಪರ್​ಗಳಿಗೆಲ್ಲ ಚಿನ್ನದ ಪದಕ!

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್​ಜಿಯುಎಚ್​ಎಸ್) ಇದೇ ಮೊದಲ ಬಾರಿಗೆ ಗರಿಷ್ಠ ಅಂಕ ಪಡೆದ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಿದೆ.

ಆರ್​ಜಿಯುಎಚ್​ಎಸ್ 21ನೇ ಘಟಿಕೋತ್ಸವ ಮಾ.26ರಂದು ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ವಿ.ಆರ್. ವಾಲಾ ವಹಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಕುಲಪತಿ ಡಾ.ಎಸ್. ಸಚ್ಚಿದಾನಂದ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

4.8 ಗ್ರಾಂ ಚಿನ್ನದ ಪದಕ: ಎಲ್ಲ ಹೆಚ್ಚು ಅಂಕ ಗಳಿಸಿದ ಎಲ್ಲ ವಿಭಾಗಗಳ 136 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತಿದೆ. ಇಷ್ಟು ವರ್ಷ ದಾನಿಗಳು ನೀಡಿದ ಚಿನ್ನದ ಪದಕ ಮಾತ್ರ ನೀಡಲಾಗುತ್ತಿತ್ತು. ಈ ವರ್ಷದಿಂದ ವಿವಿಯೇ ಹೆಚ್ಚುವರಿ ಹಣ ವ್ಯಯ ಮಾಡಿ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೂ 4.8 ಗ್ರಾಂ ಚಿನ್ನದ ಪದಕ ನೀಡಲಿದೆ.

ಡಾ. ಕೆ.ಎಸ್. ನಾಗೇಶ್​ಗೆ ಗೌಡಾ: ಮಂಗಳೂರಿನ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವಿ ವಿದ್ಯಾರ್ಥಿ ಡಾ.ವಲ್ಲೀಶ್ ಶೆಣೈ 7 ಸ್ವರ್ಣ ಪದಕ ಪಡೆದು ವಿವಿಗೇ ಟಾಪರ್ ಆಗಿದ್ದಾರೆ. ಬೆಂಗಳೂರಿನ ಡಿ.ಎ. ಪಾಂಡು ಸ್ಮಾರಕ ಆರ್.ವಿ. ಡೆಂಟಲ್

ಕಾಲೇಜಿನ ಸ್ನಾತಕ ವಿದ್ಯಾರ್ಥಿ ಡಾ. ಜಿ. ಅಪರ್ಣಾ ಹಾಗೂ ಮಂಡ್ಯದ ಭಾರತಿ ಕಾಲೇಜ್ ಆಫ್ ಫಾರ್ಮಸಿಯ ಡಿ-ಫಾರ್ಮ ವಿದ್ಯಾರ್ಥಿನಿ ಡಾ. ಭಾತ್ಸಾ ಲಿಜಾ ಜಾನ್ಸನ್ ತಲಾ ಆರು ಸ್ವರ್ಣ ಪದಕ ಪಡೆದಿದ್ದಾರೆ ಎಂದು ಸಚ್ಚಿದಾನಂದ ಮಾಹಿತಿ ನೀಡಿದರು. ರಾಜೀವ್ ಗಾಂಧಿ ಪಬ್ಲಿಕ್ ಹೆಲ್ತ್ ಸಂಸ್ಥಾಪಕ ಕೆ.ಎಸ್. ನಾಗೇಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದರು.

ಘಟಿಕೋತ್ಸವದಲ್ಲಿ 30,556 ಮಂದಿ ಪದವಿ ಪಡೆಯಲಿದ್ದಾರೆ. ಇವರಲ್ಲಿ 44 ಪಿಎಚ್.ಡಿ, 129 ಸೂಪರ್ ಸ್ಪೆಷಾಲಿಟಿ, 5,711 ಸ್ನಾತಕೋತ್ತರ, 175 ಫೆಲೋಶಿಪ್ ಕೋರ್ಸ್, 16 ಪ್ರಮಾಣಪತ್ರ ಕೋರ್ಸ್ ಹಾಗೂ 24,481 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ನೋವನ್ನು ಮೆಟ್ಟಿ ಚಿನ್ನ ಗೆದ್ದರು

ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಸುಪ್ರಿಯಾ 2 ಚಿನ್ನದ ಪದಕ ಪಡೆಯಲಿದ್ದಾರೆ. ಕಿಡ್ನಿ ಸಮಸ್ಯೆ ಅನುಭವಿಸುತ್ತಿದ್ದ ಇವರಿಗೆ, ‘ಪರೀಕ್ಷೆ ಬರೆಯಬೇಡ’ ಎಂದು ಹೆತ್ತವರು ಸಲಹೆ ನೀಡಿದ್ದರಂತೆ.

ಕಾಲೇಜಿನಲ್ಲಿ ಟಾಪರ್ ಆಗಿದ್ದೆ. ವಿಶ್ವವಿದ್ಯಾಲಯದಲ್ಲೂ ಮೊದಲ ರ್ಯಾಂಕ್ ನಿರೀಕ್ಷಿಸಿರಲಿಲ್ಲ. ನಿಮ್ಹಾನ್ಸ್​ನಲ್ಲಿ ನರ ವಿಜ್ಞಾನಶಾಸ್ತ್ರದ ಕೋರ್ಸ್​ಗೆ ಸೇರಬಯಸಿದ್ದೇನೆ. ನಮ್ಮದು ಮಂಗಳೂರಿನ ಕಾವೂರು. ತಂದೆ ಬ್ಯಾಂಕ್​ನ ನಿವೃತ್ತ ಅಧಿಕಾರಿ, ತಾಯಿ ಗೃಹಿಣಿ. ಕನ್ನಡ, ಸಂಸ್ಕೃತದಲ್ಲಿ ತಾಲೂಕಿಗೆ ಟಾಪಾರ್ ಆಗಿದ್ದೆ.

| ಡಾ. ವಲ್ಲೀಶ್ ಶೆಣೈ 6 ಚಿನ್ನದ ಪದಕ ವಿಜೇತ ವಿದ್ಯಾರ್ಥಿ

ನಾನು ಚೆನ್ನೈ ಮೂಲದವಳು. ಬಿಡಿಎಸ್ ಕೋರ್ಸ್ ಗಾಗಿ ಕರ್ನಾಟಕಕ್ಕೆ ಬಂದೆ. ಸ್ಥಳೀಯ ರೋಗಿಗಳೊಂದಿಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಸಹಕಾರಿಯಾಲಿದೆ ಎಂಬ ಉದ್ದೇಶದಿಂದ ಕನ್ನಡವನ್ನು ಕಲಿತಿದ್ದೇನೆ. ಮುಂದೆ ಎಂಡಿಎಸ್ ಮಾಡಬೇಕು ಎಂದುಕೊಂಡಿದ್ದೇನೆ. ಈ ಯಶಸ್ಸಿನ ಶ್ರೇಯಸ್ಸು ಕಾಲೇಜಿಗೆ, ಉಪನ್ಯಾಸಕರಿಗೆ ಹಾಗೂ ಪಾಲಕರಿಗೆ ಸಲ್ಲಬೇಕು.

| ಡಾ. ಜಿ. ಅಪರ್ಣಾ 6 ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ