ಚಿಕ್ಕಮಗಳೂರು: ದಿಡೀರ್ ವಿದ್ಯಮಾನದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ತಮ್ಮ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಮಂಗಳವಾರ ಸಂಜೆಯೇ ವಾಪಸ್ ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ಆಂತರಿಕ ಒಪ್ಪಂದದಂತೆ ನಗರಸಭೆ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬುಧವಾರ ಸಂಜೆ ರಾಜೀನಾಮೆ ಅಂಗೀಕಾರವಾಗಬೇಕಿತ್ತು. ಇದ್ದಕ್ಕಿದ್ದಂತೆ ಪಕ್ಷದೊಳಗೆ ನಡೆದ ವಿದ್ಯಮಾನದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯೇ ಅಧ್ಯಕ್ಷರು ತಮ್ಮ ರಾಜೀನಾಮೆ ಹಿಂಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ನಗರಸಭೆ ಅಧ್ಯಕ್ಷೆ ರಾಜೀನಾಮೆ ಹಿಂಪಡೆದಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಪಕ್ಷದ ಮುಖಂಡರು ಚುರುಕಾಗಿದ್ದು, ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ ಅವರ ಹೆಗಲಿಗೆ ಅಧ್ಯಕ್ಷರಿಂದ ಮರಳಿ ರಾಜೀನಾಮೆ ಕೊಡಿಸುವ ಜವಾಬ್ದಾರಿ ನೀಡಿದ್ದಾರೆ. ಕಡೂರಿನಲ್ಲಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮುತ್ತಯ್ಯ ಅವರ ಮನವೊಲಿಸಿ ಚಿಕ್ಕಮಗಳೂರಿಗೆ ಕರೆ ತಂದಿದ್ದಾರೆ ಎನ್ನಲಾಗುತ್ತಿದೆ.
ನಗರಸಭೆ ಅಧ್ಯಕ್ಷರ ಹಾವು – ಏಣಿ ಆಟ ಪಕ್ಷದ ನಿಷ್ಠಾವಂತರಲ್ಲಿ ಅಸಹ್ಯ ಮೂಡಿಸಿದ್ದು, ಅಧಿಕಾರ ಪಡೆಯುವ ಸಂದರ್ಭದಲ್ಲಿ ಒಂದು ರೀತಿ ನಂತರದಲ್ಲಿ ಒಂದು ರೀತಿ ನಡೆದುಕೊಳ್ಳುತ್ತಿರುವ ಸದಸ್ಯರ ವರ್ತನೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.