ರಾಜಧಾನಿ ಕಸಕ್ಕೆ ಹಳ್ಳಿ ಜನ ಹೈರಾಣ

ಶಿವರಾಜ ಎಂ./ಟಿ.ಎಸ್.ಲಕ್ಷ್ಮಿಕಾಂತ್ ಬೆಂಗಳೂರು

ರಾಜ್ಯ ರಾಜಧಾನಿಯ ಕಸದ ಸಮಸ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೂ ಬಾಧಿಸುತ್ತಿದೆ. ನಗರದ ಕಸ ವಿಲೇವಾರಿಗೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಪ್ರದೇಶ ಆಯ್ಕೆ ಮಾಡಿಕೊಂಡಿರುವ ಬಿಬಿಎಂಪಿ, ಕಸವನ್ನು ವೈಜ್ಞಾನಿಕವಾಗಿ ಸಾಗಿಸುವಲ್ಲಿ ವಿಫಲವಾಗಿರುವ ಪರಿಣಾಮ ತ್ಯಾಮಗೊಂಡ್ಲು ಹೋಬಳಿ ಮುದ್ದಲಿಂಗನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮದ ಜನರು ಕಸದ ಕಮಟಿಗೆ ಹೈರಾಣಾಗಿದ್ದಾರೆ.

ಹೌದು, ಪ್ರತಿನಿತ್ಯ ರಾಜಧಾನಿಯಿಂದ ಕಸದ ಲಾರಿಗಳು ತ್ಯಾಮಗೊಂಡ್ಲು ಹೋಬಳಿ ಮುದ್ದಲಿಂಗನಹಳ್ಳಿ ಮಾರ್ಗವಾಗಿ ದೊಡ್ಡಬೆಳವಂಗಲ ಹೋಬಳಿಯ ಮೂಗಿನಹಳ್ಳಿ ಕ್ರಾಸ್ ಭಾಗಕ್ಕೆ ಸಾಗುತ್ತವೆ. ಹೀಗೆ ಸಾಗುವ ವೇಳೆ ಲಾರಿಗಳಿಂದ ಕಸ ಹಾಗೂ ಕಸದ ಲಿಜೆಟ್ (ಕಸದಿಂದ ಹೊರಬರುವ ನೀರು) ಚೆಲ್ಲುತ್ತಿದ್ದು, ಗ್ರಾಮೀಣ ಪರಿಸರ ಗಬ್ಬೆದ್ದು ನಾರುತ್ತಿದೆ.

ರೈಲ್ವೇ ಗೇಟ್ ಸಂಕಟ: ದಾಬಸ್​ಪೇಟೆ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುದ್ದಲಿಂಗನಹಳ್ಳಿ ಗ್ರಾಮದಲ್ಲಿನ ರೈಲ್ವೆ ಕ್ರಾಸಿಂಗ್​ನಿಂದಾಗಿ ಈ ಭಾಗದಲ್ಲಿ ಸಂಚರಿಸುವ ಬಿಬಿಎಂಪಿ ಕಸ ಸಾಗಣೆ ವಾಹನಗಳು ನಿಲುಗಡೆಯಾಗುತ್ತವೆ. ಲಾರಿಗಳಿಂದ ಹೊರಹೊಮ್ಮುವ ಕಸದ ಗಬ್ಬುವಾಸನೆಗೆ ಸ್ಥಳೀಯರು ಕಂಗಾಲಾಗುವಂತಾಗಿದೆ. ಅಲ್ಲದೆ ಸಾಲುಗಟ್ಟಿ ನಿಲ್ಲುವ ಕಸ ಲಾರಿಗಳಿಂದ ಇತರ ವಾಹನಗಳ ಸಂಚಾರಕ್ಕೂ ತೊಡಕಾಗಿದೆ. ಲಾರಿಯಿಂದ ಕಸದ ಗಲೀಜು ನೀರು ಸೋರಿಕೆಯಾಗಿ ಗಬ್ಬು ವಾಸನೆ ತಡೆದುಕೊಳ್ಳಲಾಗದೆ ಇತರೆ ವಾಹನ ಸವಾರರು ಲಾರಿಯಿಂದ ಬಹುದೂರ ನಿಲ್ಲಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ದಟ್ಟಣೆ ನಿರ್ವಣವಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ. ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಮಾರ್ಗದ ರೈಲು ಸಂಚರಿಸುವುದರಿಂದ ಪ್ರತಿನಿತ್ಯ ಸುಮಾರು 20 ಬಾರಿಯಾದರೂ ರೈಲ್ವೇ ಗೇಟ್ ಹಾಕಲಾಗುತ್ತದೆ. ಈ ವೇಳೆ ಬಂದು ನಿಲ್ಲುವ ಲಾರಿಗಳಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ.

ರೂಟ್​ವ್ಯಾಪ್ ಬದಲಿಸಬೇಕು: ಈ ಹಿಂದೆ ಬೆಂಗಳೂರಿನ ಕಸ ಗ್ರಾಮೀಣ ಪ್ರದೇಶಕ್ಕೆ ಸಾಗಿಸಬಾರದು ಎಂದು ದೊಡ್ಡ ಕೂಗೆದ್ದಿತ್ತು. ಬಿಬಿಎಂಪಿ ಲಾರಿಗಳ ಉಪಟಳಕ್ಕೆ ಬೇಸತ್ತ ಜನತೆ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ನಡೆಸಿದ್ದರು. ಕಸ ಹೊತ್ತ ಲಾರಿಗಳು ದಿಕ್ಕುದೆಸೆಯಿಲ್ಲದಂತೆ ಗ್ರಾಮಗಳನ್ನು ಹಾದುಹೋಗುತ್ತಿದ್ದದ್ದು, ಜನರನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದ ಎಚ್ಚೆತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೂಟ್​ವ್ಯಾಪ್ ಸಿದ್ಧಪಡಿಸಿ ನಿಗದಿಪಡಿಸಿದ ಮಾರ್ಗದಲ್ಲೇ ಕಸದ ಲಾರಿಗಳು ಸಂಚರಿಸಬೇಕು ಎಂಬ ನಿಯಮ ರೂಪಿಸಿತ್ತು.

ಈ ನಿಯಮದಲ್ಲಿ ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ಗ್ರಾಮದ ಮಾರ್ಗವೂ ಒಂದಾಗಿದೆ. ಇದೇ ರೂಟ್​ವ್ಯಾಪ್ ಈಗ ಈ ಭಾಗದ ಜನರ ನೆಮ್ಮದಿ ಹಾಳು ಮಾಡಿದೆ ಎಂಬ ಆರೋಪ ಕೇಳಿಬರುತ್ತಿದ್ದು, ರೂಟ್​ವ್ಯಾಪ್ ಬದಲಿಸುವಂತೆ ಸ್ಥಳೀಯರಿಂದ ಒತ್ತಾಯ ಕೇಳಿಬರುತ್ತಿದೆ. ಬೆಂಗಳೂರಿನಿಂದ ಹೊರಡುವ ಕಸ ಹೊತ್ತ ಲಾರಿ ನೆಲಮಂಗಲ ಟೋಲ್ ಮೂಲಕ ದಾಬಸ್​ಪೇಟೆಗೆ ಬಂದು ಎಡೆಹಳ್ಳಿ ಬಳಿ ಬಲಕ್ಕೆ ತಿರುಗುತ್ತವೆ. ಇಂಡಸ್ಟ್ರೀಯಲ್ ಏರಿಯಾ ಪ್ರವೇಶಿಸಿ ಬಳಿಕ ಎಲ್​ಎಂ ಪ್ಯಾಕ್ಟರಿ ಸಮೀಪದಲ್ಲಿ ಸಾಗಿ ಮುದ್ದಲಿಂಗನಹಳ್ಳಿ ಮಾರ್ಗವಾಗಿ ದೊಡ್ಡಬೆಳವಂಗಲ ಪ್ರವೇಶಿಸುತ್ತವೆ. ಈ ಮಾರ್ಗದುದ್ದಕ್ಕೂ ಕಸ ಸಾಗಣೆ ಸಮಸ್ಯೆಯಾಗಿ ಕಾಡುತ್ತಿದೆ.

ಕಸ ಸುರಿದು ಪರಾರಿ: ಬಿಬಿಎಂಪಿ ಕಸದ ಲಾರಿಗಳು ಹಲವು ಬಾರಿ ಕಸವನ್ನು ರಸ್ತೆ ಬದಿ ಸುರಿದು ಪರಾರಿಯಾಗಿರುವ ನಿದರ್ಶನ ಇವೆ. ಕೆಲ ತಿಂಗಳ ಹಿಂದೆ ರಸ್ತೆ ಬದಿ ಕಸ ಸುರಿದ ಪರಿಣಾಮ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಬಿಬಿಎಂಪಿ ಲಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಲಾರಿ ಚಾಲಕರು ರಸ್ತೆ ಇಕ್ಕೆಲಗಳಲ್ಲಿ ಕಸ ಸುರಿದು ಪರಾರಿಯಾಗುವುದನ್ನು ರೂಢಿಸಿಕೊಂಡಿರುವುದರಿಂದ ಈಗಲೂ ಈ ಮಾರ್ಗದಲ್ಲಿ ಸಾಗುವ ಲಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅತೀ ವೇಗ ತರುತ್ತಿದೆ ಆಪತ್ತು: ಕಸದ ವಾಸನೆ ಒಂದೆಡೆಯಾದರೆ, ಬಿಬಿಎಂಪಿ ಲಾರಿಗಳು ವೇಗಮಿತಿ ಮೀರಿ ಸಂಚರಿಸುತ್ತವೆ. ಈ ಭಾಗದಲ್ಲಿ ಶಾಲಾ ವಾಹನಗಳು, ಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಬಿಬಿಎಂಪಿ ಲಾರಿಗಳು ಕಾಣಿಸಿದರೆ ಪ್ರಾಣ ಮುಷ್ಟಿಯಲ್ಲಿ ಹಿಡಿದು ಸಾಗುವ ಸ್ಥಿತಿ ಇದೆ. ಅಂಕೆ ಇಲ್ಲದೆ ಚಲಿಸುವ ವಾಹನಗಳ ವೇಗಕ್ಕೆ ಬ್ರೇಕ್ ಹಾಕಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಲಾರಿ ಸಾಗುವಾಗ ಕಸದ ಲಿಜೆಟ್ ಹರಿದು ಗಬ್ಬುವಾಸನೆ ಬರುತ್ತಿದೆ. ಅಲ್ಲದೆ ಕಸದ ಲಾರಿಗಳು ವೇಗಮಿತಿ ಮೀರಿ ಚಲಿಸುತ್ತವೆ. ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಗೊತ್ತುವಳಿ ಮಂಡಿಸಿ ಬಿಬಿಎಂಪಿ ಗಮನಕ್ಕೆ ತರಲಾಗುವುದು.

| ಎಂ.ಗಂಗಣ್ಣ ಮಣ್ಣೆ ಗ್ರಾಪಂ ಅಧ್ಯಕ್ಷ

ರೈಲ್ವೆ ಗೇಟ್ ಹಾಕಿದ ವೇಳೆ ಲಾರಿಗಳಿಂದ ಹೊರಹೊಮ್ಮುವ ಕಸದ ದುರ್ವಾಸನೆಗೆ ಈ ಭಾಗದಲ್ಲಿ ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾಗುತ್ತಿದೆ. ಕಸದ ಲಾರಿಗಳು ಬಂದರೆ ನಾವೇ ದೂರ ಹೋಗಿ ನಿಲ್ಲುವ ಸ್ಥಿತಿ ಇದೆ.

| ಮಂಜುನಾಥ್ ಉಪಾಧ್ಯಕ್ಷ ಚಿರಜ್ಯೋತಿ ಆಟೋ ಮಾಲೀಕರ ಸಂಘ

ಈ ಭಾಗದಲ್ಲಿ ಕಸದ ಲಾರಿಗಳು ಸಾಗುವಾಗ ಸಹಿಸಲು ಅಸಾಧ್ಯವಾದ ವಾಸನೆ ಬರುತ್ತದೆ. ಗೇಟ್ ಹಾಕಿದಾಗ ಇತರ ವಾಹನ ಸವಾರರು ಲಾರಿ ಅಕ್ಕಪಕ್ಕ ನಿಲ್ಲಲು ಸಾಧ್ಯವಾಗುತ್ತಿಲ್ಲ. ಕಸದ ಲಾರಿಗಳ ಸಂಚಾರಕ್ಕೆ ಮಾರ್ಗ ಬದಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು.

| ಮುನಿರಾಜು, ಉಪಾಧ್ಯಕ್ಷ ಜಯಕರ್ನಾಟಕ ಸಂಘಟನೆ, ತ್ಯಾಮಗೊಂಡ್ಲು

Leave a Reply

Your email address will not be published. Required fields are marked *