ರಾಜಕೀಯ, ಸಾಮಾಜಿಕ ಸ್ಥಿತ್ಯಂತರದಲ್ಲಿ ಸೌದಿ

ಸೌದಿ ದೊರೆ ಹಲವು ಸುಧಾರಣೆಗಳನ್ನು ತರುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅವರದ್ದು ಅಧಿಕಾರಯುತ ರಾಜನೀತಿಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಸರ್ಕಾರದ ವಿರುದ್ಧ ಮಾತೆತ್ತುವವರನ್ನೆಲ್ಲ ಜೈಲಿನಲ್ಲಿ ಬಂಧಿಯಾಗಿರಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಏಷ್ಯಾದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಶ್ರೀಮಂತರು ಎಂದು ಖ್ಯಾತಿ ಪಡೆದವರು ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್. ಆದರೆ ಇಂದು ಆತನ ಸಿಂಹಾಸನ ಅಲುಗಾಡುತ್ತಿದೆ. ಕಚ್ಚಾತೈಲದ ಭಂಡಾರದ ಕಾರಣದಿಂದ ಏಷ್ಯಾದಲ್ಲಿ ಅವರು ಶಕ್ತಿಶಾಲಿಯಾಗಿಯೇ ಉಳಿದುಕೊಂಡಿದ್ದಾರೆ. ಆದರೆ ಅವರದ್ದೇ ನಾಡಿನಲ್ಲಿ ಅವರೇ ಕಟ್ಟಿರುವ ಸಾಮ್ರಾಜ್ಯ ಕುಸಿದು ಹೋಗುವ ಸ್ಥಿತಿ ಎದುರಾಗಿದೆ. ಈ ಕಾರಣದಿಂದ ಮುಂದಿನ ದಿನಗಳಲ್ಲಿ ವಿಶ್ವದಲ್ಲಿ ತೈಲ ಸಂಕಟ ಎದುರಾದರೆ ಅಚ್ಚರಿ ಪಡಬೇಕಾಗಿಲ್ಲ.

ರಿಯಾದ್​ನಿಂದ ಬರುತ್ತಿರುವ ಸುದ್ದಿಗಳಿಂದ ಅಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಂತೂ ಸ್ಪಷ್ಟ. ವಂಶಪಾರಂಪರ್ಯವಾಗಿ ಬರುತ್ತಿರುವ ಅಧಿಕಾರಕ್ಕೆ ಪರಿವಾರದೊಳಗೇ ಸ್ಪರ್ಧೆಗಳೇರ್ಪಡುತ್ತಿವೆ. ಇಲ್ಲಿ ಓರ್ವ ದೊರೆ ಇನ್ನೋರ್ವ ದೊರೆಯ ವಿರುದ್ಧ ನಿಂತನೆಂದರೆ ಅಚ್ಚರಿ ಪಡಬೇಕಾದ್ದು ಏನೂ ಇಲ್ಲ. 20 ಮತ್ತು 21ನೇ ಶತಮಾನದಲ್ಲಿ ಎಲ್ಲೆಡೆಯೂ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ. ಹೀಗಿದ್ದರೂ ಏಷ್ಯಾದ ಅರಬ್ ರಾಷ್ಟ್ರಗಳಲ್ಲಿ ಶೇಖ್, ದೊರೆಗಳ ಮತ್ತು ಯುವರಾಜರ ಪ್ರಭುತ್ವ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಇರಾನ್​ನಲ್ಲಿಯೂ ದೀರ್ಘಾವಧಿಗೆ ರಾಜಾಡಳಿತ ಅಸ್ತಿತ್ವದಲ್ಲಿತ್ತು. ಪಶ್ಚಿಮ ಏಷ್ಯಾದಲ್ಲಿ ಅರಬ್ ದೊರೆಗಳು ಮತ್ತು ಶೇಖ್​ಗಳ ಪ್ರಭುತ್ವ ಮುಂದುವರಿಯುತ್ತ ಬಂದಿದೆ. ಸೌದಿ ಅರಬ್​ನ ದೊರೆಗಳು ಸಂಪತ್ತಿನ ಆಧಾರದಲ್ಲಿ ದರ್ಪ ಪ್ರದರ್ಶಿಸುತ್ತಿದ್ದಾರೆ. ಕುವೈತ್ ಮತ್ತು ಅಬುದಾಬಿಯ ಶೇಖ್​ಗಳು ಮತ್ತು ಇರಾನ್​ನ ಷಾಹ್​ಗಳು ರಾಜನ ಅಧಿಕಾರದ ಬಲದಿಂದ ವಿಲಾಸಿಜೀವನ ನಡೆಸುತ್ತ ಬಂದಿದ್ದಾರೆ. ಆದರೆ ಇಂದು ಸಮಯ ಬದಲಾಗಿದೆ. ಪ್ರಜಾಪ್ರಭುತ್ವದ ಬಿರುಗಾಳಿಯಲ್ಲಿ ಇವರ ಸಾಮ್ರಾಜ್ಯ ಅಲುಗಾಡುತ್ತಿದ್ದು, ಭಾರಿ ಸ್ಥಿತ್ಯಂತರದ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತಿವೆ.

ಸೌದಿ ಅರೇಬಿಯಾದ ದೊರೆ ಇವರೆಲ್ಲರಿಗಿಂತ ಶಕ್ತಿಶಾಲಿ ಮತ್ತು ಶ್ರೀಮಂತ. ಅಧಿಕಾರ ಚಲಾಯಿಸಲು ಅಡ್ಡಿ ಬಂದಿದ್ದಕ್ಕಾಗಿ ರಾಜಕುಟುಂಬದ 11 ಜನರನ್ನು ಜೈಲಿಗೆ ಅಟ್ಟಿದ್ದಾರೆ. ಇದರಲ್ಲಿ ಅರೇಬಿಯನ್ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿರುವ ಅಲ್​ವಾಲಿದ್ ಬಿನ್ ತಲಾಲಾ ಅವರೂ ಸೇರಿದ್ದಾರೆ. ಬಿಲ್ ಗೇಟ್ಸ್, ರುಪರ್ಟ್ ಮುರ್ಡೆಕ್ ಮತ್ತು ಮೈಕಲ್ ಬ್ಲೂಮ್​ಗ್ ಸೇರಿದಂತೆ ಕಾಪೋರೇಟ್ ಜಗತ್ತಿನ ದಿಗ್ಗಜರ ಜತೆಗೆ ನಿಕಟ ಸಂಬಂಧ ಹೊಂದಿದ್ದಾರೆ ತಲಾಲಾ. ಮೂಲಗಳ ಪ್ರಕಾರ ಅವರು 1.02 ಲಕ್ಷ ಕೋಟಿ ರೂಪಾಯಿ ಸಂಪತ್ತಿನ ಒಡೆಯರು. ಈ ಮೂಲಕ ತಲಾಲಾ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 50ನೇ ಸ್ಥಾನ ಪಡೆದುಕೊಂಡಿದ್ದಾರೆ. ರಿಯಾದ್​ನಲ್ಲಿರುವ ಷೇರು ಕಂಪನಿ ಕಿಂಗ್​ಡಮ್ ಹೋಲ್ಡಿಂಗ್​ನ ಸಂಸ್ಥಾಪಕರು.

ತಲಾಲಾನಂತಹ ದಿಗ್ಗಜರ ಬಂಧನ ಮತ್ತು ರಾಜಕೀಯ ಅಸ್ಥಿರತೆಯಿಂದ ಸೌದಿ ಅರೇಬಿಯಾದ ತೈಲ ಬೆಲೆಯಲ್ಲಿ ಆಗಿಂದಾಗ್ಗೆ ಏರಿಳಿತಗಳು ಕಂಡುಬರುತ್ತಿವೆ. ಸೌದಿ ಅರಬ್​ನಲ್ಲಿ ನಡೆಯುತ್ತಿರುವ ಈ ಬಂಧನಗಳಿಗೂ ಮೊದಲು ದೊರೆ ಸಲ್ಮಾನ್ ಭ್ರಷ್ಟಾಚಾರ ವಿರೋಧಿ ಸಮಿತಿ ರೂಪಿಸಿದ್ದರು. 32 ವರ್ಷದ ಸಲ್ಮಾನ್ ಬಿನ್ ಮಹಮ್ಮದ್ ಈ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಇವರನ್ನು ರಾಜಮನೆತನದಲ್ಲಿ ‘ಪ್ರಗತಿಶೀಲ ವಿಚಾರಧಾರೆಯ ಜನಕ’ ಎಂದು ಪರಿಗಣಿಸಲಾಗುತ್ತಿ್ತೆ. ಭ್ರಷ್ಟಾಚಾರ ವಿರೋಧಿ ಸಮಿತಿಯನ್ನು ಮುಂದಿಟ್ಟುಕೊಂಡು ಹಲವರನ್ನು ಬಂಧಿಸಲಾಗಿದೆ. ಇದು ಸಮಾಜ ಹಿತದ ಕಾರಣದಿಂದ ನಡೆದ ಬಂಧನ ಎಂದೇ ಪರಿಗಣಿಸಲಾಗುತ್ತಿದೆ. ಇದರಿಂದ ಮಂತ್ರಿಮಂಡಲದಲ್ಲೂ ಹಲವು ಬದಲಾವಣೆಗಳಾಗಿದ್ದು, ರಾಜಕೀಯ ವಾತಾವರಣದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುವ ಸಂಕೇತಗಳು ಸಿಗುತ್ತಿವೆ.

ಸಾಮಾಜಿಕ ಬದಲಾವಣೆ: ಸೌದಿ ಅರೇಬಿಯಾದ ಸಾಮಾಜಿಕ ಸ್ಥಿತಿಯೂ ಬದಲಾಗುತ್ತಿರುವುದು ಸ್ಪಷ್ಟಗೋಚರ. ಅಲ್ಲೀಗ ಮೂಲಭೂತವಾದಿ ಶಕ್ತಿಗಳು ನೆಲೆ ಕಳೆದುಕೊಳ್ಳುತ್ತಿದ್ದು, ಸುಧಾರಣೆಯೆಡೆಗೆ ಸಾಗಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿ ಇಂಥ ಬದಲಾವಣೆಗಳು ಸೌದಿಯಲ್ಲಿ ಕಂಡುಬಂದಿವೆ.

ಮಹಿಳೆಯರಿಗೆ ಕಾರು ಚಲಾಯಿಸಲು ಅನುಮತಿ ನೀಡಿರುವುದು ಇದಕ್ಕೆ ತಾಜಾ ಉದಾಹರಣೆ. ಮಹಿಳೆಯರು ಬುರ್ಖಾದೊಳಗೆ ಇರಬೇಕು ಎಂಬ ಸ್ಥಿತಿ ಇತ್ತೀಚಿನವರೆಗೂ ಸೌದಿಯಲ್ಲಿತ್ತು. ಆದರೆ, ಮಹಿಳೆಯರು ಉನ್ನತ ಶಿಕ್ಷಣ ಪಡೆದು ಜಾಗೃತವಾಗುತ್ತಿರುವುದರಿಂದ ಹಕ್ಕುಗಳಿಗಾಗಿ ದನಿ ಎತ್ತುತ್ತಿದ್ದಾರೆ, ಸಮಾನತೆಯ ಬಾಳ್ವೆಗಾಗಿ ಹಕ್ಕು ಮಂಡಿಸುತ್ತಿದ್ದಾರೆ. ಇದರ ಪರಿಣಾಮವಾಗಿಯೇ, ಕಳೆದ ವರ್ಷ ಸೌದಿಯ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಯಿತು. ಮೂಲಭೂತವಾದಿಗಳು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರಾದರೂ ಹಲವು ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಇನಿಂಗ್ಸ್ ಆರಂಭಿಸಿದರು ಎಂಬುದು ವಿಶೇಷ. ಭಾರತದಲ್ಲಿ ಮಹಿಳೆಯರು ಯುದ್ಧವಿಮಾನವನ್ನೂ ಚಲಾಯಿಸುತ್ತಿದ್ದಾರೆ ಎಂಬುದು ನಮ್ಮಲ್ಲಿನ ಸ್ತ್ರೀಶಕ್ತಿಯ ದ್ಯೋತಕ. ಆದರೆ, ತಡವಾಗಿಯಾದರೂ ಸೌದಿಯಲ್ಲಿ ಮಹಿಳೆಯರಿಗೆ ಕಾರು ಚಾಲನೆ ಮಾಡಲು ಪರವಾನಿಗೆ ಸಿಕ್ಕಿರುವುದು ಸಮಾಧಾನಕರ ಬೆಳವಣಿಗೆ ಎಂದೇ ಹೇಳಬೇಕು.

ಅರ್ಥವ್ಯವಸ್ಥೆಯತ್ತ ಚಿತ್ತ: ಬರೀ ತೈಲ ಮಾರುಕಟ್ಟೆ ಅವಲಂಬಿಸಿದರೆ ಆರ್ಥಿಕತೆಗೆ ಪೆಟ್ಟು ಬೀಳಲಿದೆ ಎಂಬ ಅರಿವೂ ಸೌದಿಗಾಗಿದೆ. ಹಾಗಾಗಿಯೇ, 2030ರೊಳಗೆ ದೇಶದ ಅರ್ಥವ್ಯವಸ್ಥೆಯಲ್ಲಿ ಷೇರು ಮಾರುಕಟ್ಟೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಈ ಕ್ರಮ ಸೌದಿ ಅರೇಬಿಯಾವನ್ನು ತೈಲ ಆಧಾರಿತ ಅರ್ಥವ್ಯವಸ್ಥೆಯಿಂದ ಮುಕ್ತಗೊಳಿಸಲು ಪೂರಕವಾಗಲಿದೆ. ಆದರೆ, ಈ ಕೆಲಸ ಅಂದುಕೊಂಡಷ್ಟು ಸುಲಭವಲ್ಲ. ಇಷ್ಟು ವರ್ಷ ಆರ್ಥಿಕತೆಯ ಬೇರೆ ಆಯಾಮಗಳನ್ನೇ ಅವಲೋಕಿಸಿದ, ಅವುಗಳತ್ತ ಹೊರಳದ ಸೌದಿ ಈಗ ಏಕಾಏಕಿ ಬದಲಾವಣೆಗೆ ಹೊಂದಿಕೊಳ್ಳುವುದೇ ಎಂಬ ಅನುಮಾನವೂ ಇದೆ. ಅಲ್ಲದೆ, ತೈಲ ಆಧಾರಿತ ಅರ್ಥವ್ಯವಸ್ಥೆಯನ್ನು ಹೊರತು ಪಡಿಸಿ ಹೊಸ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಷ್ಟೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸವಾಲು ಕೂಡ ಇದೆ. ಈ ಕಾರಣದಿಂದಲೇ ಆರ್ಥಿಕ ಸುಧಾರಣೆಯ ಪ್ರಸ್ತಾವನೆಗೆ ವಿರೋಧದ ದನಿಗಳೂ ಕೇಳಿಬರುತ್ತಿವೆ.

ಹೆಚ್ಚಿದ ವರ್ಚಸ್ಸು: ಸಾಮಾಜಿಕ ಮತ್ತು ಆರ್ಥಿಕ ಸುಧಾರಣಾ ಕ್ರಮಗಳಿಂದ ದೊರೆ ಸಲ್ಮಾನ್​ರ ವರ್ಚಸ್ಸು ಇನ್ನಷ್ಟು ಬಲಗೊಳ್ಳುತ್ತಿದೆ. ನಿರಂತರವಾಗಿ ಸುಧಾರಣೆಗಳು ನಡೆಯುತ್ತಿರುವುದರಿಂದ ಜನರಿಂದಲೂ ಅವರಿಗೆ ಬೆಂಬಲ ವ್ಯಕ್ತವಾಗಿದೆ. ಈ ಬೆಳವಣಿಗೆಯಲ್ಲಿ ಯಾರಿಂದ ಅಡ್ಡಿಯುಂಟಾಗುತ್ತಿದೆಯೋ ಅವರನ್ನು ಬಾಲಮುದುರಿಕೊಳ್ಳುವಂತೆ ಮಾಡಲಾಗುತ್ತಿದೆ. ದೊರೆ ಸಲ್ಮಾನ್​ರ

ಸಹೋದರ ಮಹಮ್ಮದ್ ಬಿನ್ ನಯೀಫ್​ನನ್ನು ಕೆಲ ಸಮಯದ ಹಿಂದಷ್ಟೇ ಗೃಹಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಹಿಂದೊಮ್ಮೆ ರಾಜನ ಪದವಿಯ ಆಕಾಂಕ್ಷಿಯಾಗಿದ್ದ ರಾಜಕುಮಾರ್ ಮಿತೇಬ್ ಬಿನ್ ಅಬ್ದುಲ್ಲಾನನ್ನು ಬಂಧಿಸಲಾಗಿದೆ. ಅಬ್ದುಲ್ಲಾ ರಕ್ಷಣಾ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಬ್ದುಲ್ಲಾರ ಪುತ್ರ ದೊರೆ ಸಲ್ಮಾನ್​ಗಿಂತ ಮೊದಲು ರಾಜನಾಗಿದ್ದ. ವಿತ್ತ ಸಚಿವ ಅಬ್ದುಲ್ ಫಕೀಹ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಜೈಲಿಗಟ್ಟಲಾಗಿರುವ ಅನ್ಯರಲ್ಲಿ ರಿಯಾದ್​ನ ಮಾಜಿ ಗವರ್ನರ್ ಖಾಲಿದ್ ಅಲ್ ತುವಾಯಿಜಿಲೋ ಒಬ್ಬರಾಗಿದ್ದಾರೆ. ಎಂಬಿಸಿ ಟಿವಿ ನೆಟ್​ವರ್ಕ್​ನ ಮಾಲೀಕ ಅಲ್ ವಲೀದ್ ಅಲ್ ಅಬ್ರಾಹಿಂರನ್ನೂ ಸೆರೆಯಲ್ಲಿಡಲಾಗಿದೆ.

ಮುಂದುವರಿಯಲಿವೆ ಬಂಧನ ಪ್ರಕರಣಗಳು: ಈ ಬಂಧನ ಪ್ರಕರಣಗಳು ಇಲ್ಲಿಗೆ ಅಂತ್ಯಗೊಂಡಿಲ್ಲ. 11 ಯುವ ದೊರೆಗಳು ಮತ್ತು ರಾಜಮನೆತನಕ್ಕೆ ಸೇರಿದ 38 ಜನರನ್ನು ಸದ್ಯ ರಿಯಾದ್ ಬಳಿಯ ರಿಟ್ಜ್ ಕಾರ್ಲ್​ಟನ್ ಪಂಚತಾರಾ ಹೋಟೆಲ್​ನಲ್ಲಿ ಇರಿಸಲಾಗಿದೆ. ಇವರಲ್ಲಿ ಹಲವು ಮಹಿಳೆಯರೂ ಸೇರಿದ್ದಾರೆ. ಇವರಿಂದ ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಯಾರು ಎಲ್ಲಿದ್ದಾರೆ ಎಂಬುದರ ಮಾಹಿತಿ ಅವರಿಗೆ ತಲುಪದಂತೆ ನೋಡಿಕೊಳ್ಳಲಾಗುತ್ತಿದೆ. ಇದರಿಂದ ರಿಯಾದ್​ನಲ್ಲಿ ಕೋಲಾಹಲ ಸೃಷ್ಟಿಯಾದಂತಾಗಿದೆ. ವಿದೇಶಿ ಪತ್ರಕರ್ತರನ್ನು ದೇಶ ತೊರೆಯುವಂತೆ ಸೂಚಿಸಲಾಗಿದೆ ಅಥವಾ ಅನುಮತಿಯ ಹೊರತಾಗಿ ಏನನ್ನೂ ಬರೆಯುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಆದರೂ ಸ್ಥಿತಿಯೇನು ಸ್ಪಷ್ಟವಾಗಿಲ್ಲ.

ಇದೀಗ ಹುಟ್ಟಿಕೊಂಡಿರುವ ಪ್ರಶ್ನೆಯೆಂದರೆ ಸೌದಿ ಅರೇಬಿಯಾದಲ್ಲಿ ವಾಸ್ತವದಲ್ಲಿ ಪರಿವರ್ತನೆಗಳು ನಡೆಯುತ್ತಿವೆಯೋ ಅಥವಾ ಅಧಿಕಾರದಲ್ಲಿರುವ ಜನರು ಎಲ್ಲರನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಪರಿವರ್ತನೆಯ ನಾಟಕವಾಡುತ್ತಿದ್ದಾರೆಯೇ ಎನುವುದು. ಸೌದಿ ಅರಬ್​ನಲ್ಲಿ ಪ್ರಸಾರ ಮಾಧ್ಯಮಗಳಿಗೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಹೀಗಾಗಿ ಹೊರಜಗತ್ತಿಗೆ ಅಲ್ಲಿನ ನಿಜವಾದ ಸ್ಥಿತಿಯೇನು ಎಂಬುದರ ಅರಿವಿಲ್ಲ. ಸೌದಿ ಅರಬ್ ಮಾರುಕಟ್ಟೆಯಿಂದ ಪತ್ರಿಕೆಗಳು ಮಾಯವಾಗುತ್ತಿವೆ.

ರಿಯಾದ್​ನ ‘ಯಮಾಮ ಮಹಲ್’ನಲ್ಲಿ ಇತ್ತೀಚೆಗೊಂದು ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಸೌದಿ ಅರೇಬಿಯಾದ ಅರ್ಥವ್ಯವಸ್ಥೆ ಮತ್ತು ಈಗಿರುವ ಸ್ಥಿತಿ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಗಿದೆ. ಇದರಲ್ಲಿ ದೊರೆಯ ಮನೆತನದವರ ಸಾವು ಮತ್ತು ನಗರ ಬಿಟ್ಟು ಓಡಿ ಹೋಗುತ್ತಿರುವುದನ್ನು ಖಂಡಿಸಲಾಗಿದೆ. ಹಿಂದಿನ ದೊರೆ ಫಹದ್​ನ ಕೊಲೆಯನ್ನೂ ಖಂಡಿಸಲಾಗಿದೆ.

ಸುದ್ದಿಯೊಂದರ ಪ್ರಕಾರ, ಅಲ್ ವಲೀದ್ ಬಿನ್ ತಲಾಲಾರ ಸ್ಥಿರ ಮತ್ತು ಚರಾಸ್ತಿಯಲ್ಲಿ 600 ಕೋಟಿ ರೂಪಾಯಿ ನಷ್ಟವಾಗಿದೆ. ತಲಾಲಾ ತಮ್ಮ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಿರುವ ಖ್ಯಾತಿ ಹೊಂದಿದ್ದಾರೆ. ಅವರ ಕಂಪನಿಯ ಒಟ್ಟು ಮೊತ್ತ 1.02 ಲಕ್ಷ ಕೋಟಿ ರೂಪಾಯಿಯಾಗಿದೆ.

ಸಲ್ಮಾನ್​ರ ಭ್ರಷ್ಟಾಚಾರ ವಿರೋಧಿ ಅಭಿಯಾನ ನಿಜವೋ ಸುಳ್ಳೋ. ಆದರೆ ಇದು ಅಧಿಕಾರಯುತ ರಾಜನೀತಿಯ ಪರಿಣಾಮದಿಂದಾಗುತ್ತಿರುವ ಬೆಳವಣಿಗೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸೌದಿ ಅರೇಬಿಯಾದಲ್ಲಿ ಶೇಕಡ 40ರಷ್ಟು ಯುವಜನತೆ ನಿರುದ್ಯೋಗಿಗಳಾಗಿದ್ದಾರೆ. ವಿದೇಶಗಳಲ್ಲಿ ಶಿಕ್ಷಣ ಪಡೆಯಲು ತೆರಳಿರುವ 15 ಸಾವಿರ ಜನರನ್ನು ದೇಶಕ್ಕೆ ಹಿಂತಿರುಗದಂತೆ ಆದೇಶಿಸಲಾಗಿದೆ. ವಿದೇಶಿ ಹೂಡಿಕೆ ಮತ್ತು ಮುಂದಿನ ದಿನಗಳಲ್ಲಾಗಲಿರುವ ಟೆಕ್ನಾಲಜಿ ಟ್ರಾನ್ಸ್​ಫರ್ ನೌಕರಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗಲಿದೆ.

ಜಪಾನ್​ನ ಸಾಫ್ಟ್​ಬ್ಯಾಂಕ್ 6.44 ಲಕ್ಷ ಕೋಟಿ ರೂಪಾಯಿಯ ಹೂಡಿಕೆ ಮಾಡುವ ಭರವಸೆ ನೀಡಿದೆ. ಆದರೆ ಅಮೆರಿಕದ ಬೆಂಬಲದಿಂದ ಉತ್ಸಾಹಿತವಾಗಿರುವ ಸಲ್ಮಾನ್ ಇರಾನ್​ನೊಂದಿಗಿನ ಘರ್ಷಣೆಯಿಂದ ಮಧ್ಯಪೂರ್ವದಲ್ಲಿ ವಾತಾವರಣ ಬಿಗಡಾಯಿಸಿದರೆ ಹೂಡಿಕೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹಾಗೇನಾದರೂ ಆದಲ್ಲಿ, ನಿರುದ್ಯೋಗಿಗಳ ಆಕ್ರೋಶ ರಾಜಪ್ರಭುತ್ವದೆಡೆಗೆ ತಿರುಗಿ ಪ್ರಜಾಪ್ರಭುತ್ವ ಸ್ಥಾಪನೆಯ ಆಗ್ರಹ ಜೋರು ಪಡೆದುಕೊಳ್ಳಲಿದೆ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು, ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *