ರಾಜಕೀಯ ಲೆಕ್ಕಾಚಾರ ಬುಡಮೇಲು

ರೋಣ: ಪುರಸಭೆ ವಾರ್ಡ್​ಗಳ ಮೀಸಲಾತಿ ಬಹುತೇಕ ಹಾಲಿ ಸದಸ್ಯರ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.

ಪುರಸಭೆಗೆ ಪುನರಾಯ್ಕೆ ಬಯಸುತ್ತಿರುವ ಬಹುತೇಕ ಸದಸ್ಯರು ತಾವು ಪ್ರತಿನಿಧಿಸುತ್ತಿರುವ ವಾರ್ಡ್​ಗಳನ್ನು ಬೇರೆಯವರಿಗೆ ಬಿಟ್ಟು ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪುರಸಭೆಯ ಮಾಜಿ ಅಧ್ಯಕ್ಷ ಶಫೀಕ್ ಮೂಗನೂರ (ವಾರ್ಡ್ 22), ತೋಟಪ್ಪ ನವಲಗುಂದ (ವಾರ್ಡ್ 12), ಮುತ್ತಣ್ಣ ಸಂಗಳದ(ವಾರ್ಡ್ 15), ಹಿರಿಯ ಸದಸ್ಯರಾದ ಯಮನವ್ವ ಜುಮ್ಮನಕಟ್ಟಿ, ಗದಿಗೆಪ್ಪ ಕಿರೇಸೂರ, ಬಸನಗೌಡ ಪಾಟೀಲ, ಮಂಜುನಾಥ ಹಾಳಕೇರಿ, ಖಾದೀರಸಾಬ್ ಸಂಕನೂರ, ಶಿವಪ್ಪ ಕರಿಲಿಂಗಣ್ಣವರ ಮತ್ತಿತರರು ತಮ್ಮ ವಾರ್ಡ್​ಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೇರೆ ವಾರ್ಡ್​ಗಳತ್ತ ದೃಷ್ಟಿ ನೆಟ್ಟಿದ್ದಾರೆ. ಇದಕ್ಕಾಗಿ ತಮ್ಮ ಬೆಂಬಲಿಗರೊಂದಿಗೆ ಕಾರ್ಯತಂತ್ರ ಹೆಣೆಯಲಾರಂಭಿಸಿದ್ದಾರೆ.

ತಮ್ಮ ತಮ್ಮ ಸಮುದಾಯದ ಮತದಾರರು ಹೆಚ್ಚಾಗಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸಲು ಯೋಚಿಸುತ್ತಿದ್ದಾರೆ. ಆದರೆ, ಈಗಾಗಲೇ ಆ ವಾರ್ಡ್​ಗಳಿಂದ ಸ್ಪರ್ಧಿಸಲು ಬಯಸಿರುವ ಸ್ಥಳೀಯ ಮುಖಂಡರು, ಬೇರೆ ವಾರ್ಡ್​ಗಳಿಂದ ಬರುವವರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ತೀವ್ರ ವಿರೋಧ ವ್ಯಕ್ತವಾದರೆ ಇವರು ಸ್ಪರ್ಧಿಸುವ ಗೋಜಿಗೆ ಹೋಗದೆ, ತಾವು ಈ ಹಿಂದೆ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿ ಕಿಂಗ್ ಬದಲಿಗೆ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ.

ಮಾಜಿ ಅಧ್ಯಕ್ಷರು ಸ್ಪರ್ಧಿಸಲು ಬಯಸುತ್ತಿರುವ ವಾರ್ಡ್​ಗಳು

ಪುರಸಭೆಗೆ ( ವಾರ್ಡ್ ನಂ. 15) ಸತತ ಮೂರು ಬಾರಿ ಸ್ಪರ್ಧಿಸಿ ವಿಜಯಶಾಲಿಯಾಗಿ ಒಂದು ಬಾರಿ ಅಧ್ಯಕ್ಷರಾಗಿದ್ದ ಮುತ್ತಣ್ಣ ಸಂಗಳದ ಈ ಬಾರಿ 7ನೇ ವಾರ್ಡ್​ನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ, ತೋಟಪ್ಪ ನವಲಗುಂದ 13ನೇ ವಾರ್ಡ್, ಶಫೀಕ್ ಮೂಗನೂರ 21ನೇ ವಾರ್ಡ್​ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.

ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿ ಅಡಿ ಕಳೆದ ಎರಡು ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಯಮನವ್ವ ಜುಮ್ಮನಕಟ್ಟಿ ಅವರಿಗೆ ಈ ಬಾರಿ ಸ್ಪರ್ಧಿಸಲು ಅವಕಾಶವಿಲ್ಲ. ನೂತನ ಮೀಸಲಾತಿ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಅವಕಾಶ ಇಲ್ಲದಿರುವುದು ಅವರ ಸ್ಪರ್ಧೆಗೆ ತೊಡಕಾಗಿದೆ.

ಒತ್ತಡ ತಂತ್ರ: ಕೆಲ ಆಕಾಂಕ್ಷಿಗಳು ಮಠಾಧೀಶರು, ವಿವಿಧ ರಾಜ್ಯ ಮಟ್ಟದ ನಾಯಕರು ಹಾಲಿ ಹಾಗೂ ಮಾಜಿ ಸಚಿವರ ಮೂಲಕ ಸ್ಥಳೀಯ ನಾಯಕರ ಮೇಲೆ ಒತ್ತಡ ಹಾಕಿಸಿ ಟಿಕೆಟ್ ಪಡೆಯಲು ಹರಸಾಹಸಪಡುತ್ತಿದ್ದಾರೆ.

ಈ ಬಾರಿ ಜಾತಿಯ ಲಾಬಿ ಹಿಂದೆಂದಿಗಿಂತಲೂ ಜೋರಾಗಿದೆ. ಆಯಾ ವಾರ್ಡ್​ಗಳಲ್ಲಿ ಪ್ರಬಲವಾಗಿರುವ ಜಾತಿ ಸಂಘಟನೆಗಳು ತಮ್ಮ ಸಮುದಾಯದವರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.

 

Leave a Reply

Your email address will not be published. Required fields are marked *