ರಾಜಕೀಯ ಲಾಭಕ್ಕಾಗಿ ಲಿಂಗಾಯತ ಧರ್ಮ ಒಡೆಯಲು ಸೋನಿಯಾ ಗಾಂಧಿ-ಎಂ.ಬಿ. ಪಾಟೀಲ್​ ಹುನ್ನಾರ: ಶೆಟ್ಟರ್​ ಆರೋಪ

ಹುಬ್ಬಳ್ಳಿ: ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡಲು ಕಾಂಗ್ರೆಸ್​ ಮುಂದಾಗಿದೆ. ಧರ್ಮ ಒಡೆದರೆ, ಮತಗಳು ಬರುತ್ತವೆ ಎಂಬ ಕಾರಣಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಚಿವ ಎಂ.ಬಿ. ಪಾಟೀಲ್​ ಹುನ್ನಾರ ಮಾಡಿರುವುದಾಗಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆಗಳು ಬಂದಾಗಲೆಲ್ಲ ಕಾಂಗ್ರೆಸ್​ ನಾಯಕರು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಲಿಂಗಾಯತ ಮತ್ತು ವೀರಶೈವ ಧರ್ಮದವರನ್ನು ಒಡೆದರೆ, ಮತಗಳು ಬರುತ್ತವೆ ಎಂಬ ನಿರೀಕ್ಷೆಯಲ್ಲಿ ಅವರು ಹೀಗೆ ಮಾಡುತ್ತಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿರುವ ಪತ್ರದಲ್ಲಿ ಎಂ.ಬಿ. ಪಾಟೀಲ್​ ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿದರು.

ಸೋನಿಯಾಗೆ ಬರೆದಿರುವ ಪತ್ರದಲ್ಲಿ ಈ ಅಂಶ ಇರುವ ಬಗ್ಗೆ ಎಂ.ಬಿ. ಪಾಟೀಲ್​ ಸತ್ಯ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ ಅವರು, ರಾಜಕೀಯಕ್ಕಾಗಿ ಧರ್ಮ ಒಡೆಯಲು ಹುನ್ನಾರ ನಡೆಸಿರುವ ಕಾಂಗ್ರೆಸ್​ಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)