ರಾಜಕೀಯ ಲಾಭಕ್ಕಾಗಿ ಬಿಜೆಪಿ ಪ್ರತಿಭಟನೆ

ಚಾಮರಾಜನಗರ : ಬಿಜೆಪಿಯ ಮುಖಂಡರು ರಾಜಕೀಯ ಲಾಭಕ್ಕಾಗಿ ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ದ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದಾರೆಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಆರೋಪಿಸಿದರು.

ತ್ರಿವಿಧ ದಾಸೋಹಿ ಸಿದ್ದಗಂಗಾಶ್ರೀ ಅವರು ನಿಧನರಾದ್ದರಿಂದ ಜ.22 ರಂದು ಸರ್ಕಾರಿ ರಜೆ ಘೋಷಿಸಲಾಗಿತ್ತು. ಅಂದು ಪ್ರಿಯಾಂಕ್ ಖರ್ಗೆ ಅವರು ಸಂವಿಧಾನ ಕುರಿತು ಸಂವಾದ ಕಾರ್ಯಕ್ರಮ ಆಯೋಜಿಸಿ ಸಿದ್ದಗಂಗಾಶ್ರೀಗಳಿಗೆ ಅಗೌರವ ಸೂಚಿಸಿದ್ದಾರೆಂದು ಬಿಜೆಪಿಯವರು ಪ್ರತಿಭಟನೆ ನಡೆಸಿದ್ದು ಸರಿಯಲ್ಲ ಎಂದು ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಸಂವಿಧಾನ ಕುರಿತು ಸಂವಾದವು ಪೂರ್ವ ನಿಗದಿತ ಕಾರ್ಯಕ್ರಮವಾಗಿತ್ತು. ಅಂದು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಹೋರಾಟಗಾರ ಕನ್ನಯ್ಯಕುಮಾರ್, ಸಂವಿಧಾನ ತಜ್ಞರು ಪಾಲ್ಗೊಂಡಿದ್ದರು. ಅನ್ಸಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಿದ್ದಗಂಗಾಶ್ರೀ ಅವರಿಗೆ ಸಂತಾಪ ಸೂಚಿಸಿದ ಬಳಿಕ ಸಂವಾದವನು ಮುಂದೂಡಲಾಯಿತು. ಆದರೂ ಬಿಜೆಪಿಯವರು ಜ.25 ರಂದು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದು ಸೂಕ್ತವಲ್ಲ ಎಂದರು.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸಿದ್ದಗಂಗಾಶ್ರೀ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಶಿಫಾರಸ್ಸು ಮಾಡಿದ್ದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ರಾಜ್ಯದ ಬಿಜೆಪಿ ನಾಯಕರು ಒತ್ತಡ ಹೇರಿ ಭಾರತರತ್ನ ಪ್ರಶಸ್ತಿ ನೀಡುವಂತೆ ಹೋರಾಟ ಮಾಡಬೇಕಿತ್ತು ಎಂದರು.

ಕ್ರಿಕೆಟ್ ಆಡುವವರಿಗೆ, ಸಿನಿಮಾದವರಿಗೆ ಭಾರತರತ್ನ ನೀಡಿರುವ ಬಿಜೆಪಿ ಸರ್ಕಾರ ಎಲ್ಲ ವರ್ಗಗಳ ಮಕ್ಕಳ ಶಿಕ್ಷಣಕ್ಕಾಗಿ ಬದುಕಿನುದ್ದಕ್ಕೂ ಶ್ರಮಿಸಿದ ಸಿದ್ದಗಂಗಾಶ್ರೀ ಅವರಿಗೆ ನೀಡದಿರುವುದು ಅನ್ಯಾಯವಲ್ಲೇ? ಈ ಬಗ್ಗೆ ಮಾತನಾಡದ ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ವಿರುದ್ದ ಪ್ರತಿಭಟನೆ ಮಾಡುವ ನೈತಿಕತೆಯಿಲ್ಲ ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ಅವರು ದಲಿತರು ಮತ್ತು ಒಬಿಸಿಗಳ ಪರ ದನಿ ಎತ್ತಿದ್ದಾರೆ. ಬಡ್ತಿ ಮೀಸಲಾತಿ, ಕೆಪಿಎಸ್‌ಸಿಯಿಂದ ನೇಮಕಾತಿ ಮಾಡುವಾಗ ಮೀಸಲಾತಿ, ಹಾಸ್ಟೆಲ್‌ಗಳ ನವೀಕರಣ, ನಾಗಪುರದಲ್ಲಿ ದೀಕ್ಷಾ ಭೂಮಿಗೆ ರಾಜ್ಯದಿಂದ ಬಸ್ ಸಂಚಾರ ಮಾಡಿಸಿದ್ದಾರೆ. ಇದೆಲ್ಲವನು ಸಹಿಸದ ಬಿಜೆಪಿಯವರು ಪ್ರತಿಭಟನೆ ನಡೆಸಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

ಜ.22 ರಂದು ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಜಾತ್ರೆ ನಡೆದಿದೆ. ಸಿದ್ದಗಂಗಾಶ್ರೀಗಳ ಅಂತ್ಯಸಂಸ್ಕಾರದಲ್ಲಿ ಒಬ್ಬರಾದರೂ ಬ್ರಾಹ್ಮಣ ಮಠಾಧಿಪತಿಗಳು ಆಗಮಿಸಲಿಲ್ಲ. ಈ ಕುರಿತು ಬಿಜೆಪಿ ನಾಯಕರು ಮಾತನಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ದಸಂಸ ಮುಖಂಡರಾದ ದೊಡ್ಡಿಂದುವಾಡಿ ಸಿದ್ದರಾಜು, ಸಿ.ಎಂ.ಶಿವಣ್ಣ, ಬಂಗಾರುಸ್ವಾಮಿ ಹಾಜರಿದ್ದರು.