ಗದಗ: ನಗರದ ನವೀಕೃತ ಹಳೇ ಬಸ್ ನಿಲ್ದಾಣಕ್ಕೆ ಸರ್ಕಾರ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡಿರುವುದು ಭಕ್ತರಿಗೆ ಖುಷಿ ತಂದಿದೆ. ಆದರೆ, ಈ ನಿಲ್ದಾಣದ ಕಾಮಗಾರಿ ಪೂರ್ಣಗೊಂಡು ಎಂಟು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕೂಡಿಬರದಿರುವುದು ಬೇಸರ ಮೂಡಿಸಿದೆ.
ಐದು ಕೋಟಿ ರೂ. ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣದ ನವೀಕರಣ ಕಾಮಗಾರಿ ಕಳೆದ ಮಾರ್ಚ್ ತಿಂಗಳಲ್ಲಿ ಪೂರ್ಣಗೊಂಡಿದೆ. ಶೌಚಗೃಹ, ನೀರು ಪೂರೈಕೆ ಸೇರಿ ಹಲವು ಸೌಲಭ್ಯಗಳೊಂದಿಗೆ ನಿಲ್ದಾಣ ಸಿದ್ಧಗೊಂಡಿದ್ದರೂ ಉದ್ಘಾಟನೆ ಮಾಡಲು ಮೀನಮೇಷ ಎಣಿಸಲಾಗುತ್ತಿದೆ. ನೂತನ ಹಳೇ ಬಸ್ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಒದಗಿಸಬೇಕು ಎಂದು ಜನರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಳೇ ಬಸ್ ನಿಲ್ದಾಣ ನವೀಕರಣ ಕಾಮಗಾರಿಗೆ 5 ಕೋಟಿ ರೂ. ಅನುದಾನ ನೀಡಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಬಸ್ ನಿಲ್ದಾಣ ನವೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರು. ಮಾರ್ಚ್ ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡಿದ್ದರಿಂದ ಹಳೇ ಬಸ್ ನಿಲ್ದಾಣವನ್ನು ವಾಯವ್ಯ ರಸ್ತೆ ಸಾರಿಗೆ ನಿಗಮದ ಸುಪರ್ದಿಗೆ ಹಸ್ತಾಂತರಿಸಲಾಗಿದೆ.
ಕಳೆದ ತಿಂಗಳು ಶಾಸಕ ಎಚ್.ಕೆ.ಪಾಟೀಲ ಅವರು ನವೀಕೃತ ಹಳೇ ಬಸ್ ನಿಲ್ದಾಣ ಉದ್ಘಾಟನೆಗೆ ಮುಂದಾಗಿದ್ದರು. ಎಚ್.ಕೆ.ಪಾಟೀಲ ಅವರು ಹಳೇ ಬಸ್ ನಿಲ್ದಾಣ ಉದ್ಘಾಟಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಧ್ಯಮಗಳಿಗೆ ಪ್ರಕಟಣೆಯನ್ನು ಕೂಡ ಬಿಡುಗಡೆ ಮಾಡಿದ್ದರು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ವಿರೋಧ ಪಕ್ಷದ ಶಾಸಕರೊಬ್ಬರು ಸರ್ಕಾರಿ ಕಟ್ಟಡವನ್ನು ಉದ್ಘಾಟಿಸಲು ಸಾಧ್ಯವೇ ಎಂಬ ಚರ್ಚೆ ಆರಂಭವಾಯಿತು. ಸ್ಥಳೀಯ ಕೆಲ ಬಿಜೆಪಿ ಮುಖಂಡರು ಈ ವಿಷಯವನ್ನು ಸರ್ಕಾರದ ಮಟ್ಟದವರೆಗೂ ತೆಗೆದುಕೊಂಡು ಹೋಗಿದ್ದರಿಂದ ವಿವಾದ ಶುರುವಾಗಿ ತಾರಕಕ್ಕೆ ಏರುವ ಲಕ್ಷಣಗಳು ಕಂಡುಬಂದಿತು. ಇದರಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ಮುಖಂಡರು ಉದ್ಘಾಟನೆ ಕಾರ್ಯಕ್ರಮವನ್ನು ರದ್ದುಗೊಳಿಸಿದರು. ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಮತ್ತೊಂದು ಪ್ರಕಟಣೆ ನೀಡಿ ಕೈತೊಳೆದುಕೊಂಡರು. ಈ ವಿಷಯ ಅವಳಿ ನಗರದಲ್ಲಿ ಸಾಕಷ್ಟು ರಾಜಕೀಯ ರಂಗು ಪಡೆದು ತೀವ್ರ ಚರ್ಚೆಗೂ ಕಾರಣವಾಯಿತು.
ನವೀಕರಣಗೊಂಡಿರುವ ಬಸ್ ನಿಲ್ದಾಣದ ಕಚೇರಿ, ಬೆಂಚ್ಗಳ ಮೇಲೆ ಧೂಳು ತುಂಬಿ ಹಾರಾತೊಡಗಿದರೂ ಇತ್ತ ಕಡೆಗೆ ಯಾರೂ ಗಮನಹರಿಸುತ್ತಿಲ್ಲ. ಐದು ಕೋಟಿ ರೂ. ವೆಚ್ಚದಲ್ಲಿ ನವೀಕರಿಸಿರುವ ಬಸ್ ನಿಲ್ದಾಣವನ್ನು ಸಾರ್ವಜನಿಕರ ಸೇವೆ ನೀಡಬೇಕೆಂದು ಅಟೋ ಚಾಲಕರ ಸಂಘ ಸೇರಿ ಹಲವಾರು ಸಂಘಟನೆಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಜನರಲ್ಲಿ ಹರ್ಷ
ನವೀಕೃತ ಹಳೆಯ ಬಸ್ ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ರಾಜ್ಯ ಸರ್ಕಾರವು ಅನುಮೋದನೆ ನೀಡಿರುವುದು ಜಿಲ್ಲೆಯ ಜನರಲ್ಲಿ ಹರ್ಷ ತಂದಿದೆ. ಕಳೆದ ಒಂದು ವರ್ಷದಿಂದ ಹಲವಾರು ಸಂಘಟನೆಗಳು ಹಳೇ ಬಸ್ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಕೂಡ ಸೆಳೆಯಲಾಗಿತ್ತು. ಜಿಲ್ಲೆಯ ಭಕ್ತರ ಒತ್ತಡಕ್ಕೆ ಮಣಿದು ಬಸ್ ನಿಲ್ದಾಣಕ್ಕೆ ಗವಾಯಿಗಳ ಹೆಸರು ಇಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಸಂತಸವನ್ನುಂಟು ಮಾಡಿದೆ.
ಕಳದ ಮಾರ್ಚ್ ತಿಂಗಳಲ್ಲಿಯೇ ಹಳೇ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ಕರೊನಾ ವ್ಯಾಪಿಸಿದ್ದರಿಂದ ಉದ್ಘಾಟನೆ ಮಾಡುವುದು ತಡವಾಗಿದೆ. ಈ ಕುರಿತು ಸರ್ಕಾರ ಆದೇಶ ನೀಡಿದ ಕೂಡಲೇ ಉದ್ಘಾಟನೆಗೊಳಿಸಿ ಸಾರ್ವಜನಿಕರ ಸೇವೆಗೆ ನೀಡಲಾಗುವುದು.
ಎಫ್.ಸಿ.ಹಿರೇಮಠ, ವಿಭಾಗೀಯ ನಿಯಂತ್ರಣಾಧಿಕಾರಿಗದಗ ಹಳೇ ಬಸ್ ನಿಲ್ದಾಣಕ್ಕೆ ಅಂಧ ಅನಾಥರ ಕಣ್ಮಣಿ ಡಾ. ಪುಟ್ಟರಾಜ ಗವಾಯಿಗಳ ಹೆಸರು ಇಟ್ಟಿರುವುದು ಅತ್ಯಂತ ಯೋಗ್ಯ ನಿರ್ಣಯ. ಈ ಭಾಗದ ಭಕ್ತರ ಆಶಯವನ್ನು ಪರಿಗಣಿಸಿ ಸರ್ಕಾರ ನಾಮಕರಣ ಮಾಡಿದ್ದು ಸ್ವಾಗತಾರ್ಹ. ಕಾಂತಿಲಾಲ ಬನ್ಸಾಲಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ
ಪೋಲಾಗುವುದೇ ಸಾರ್ವಜನಿಕ ಹಣ?
ಶಿಥಿಲಗೊಂಡಿದ್ದ ಹಳೇ ಬಸ್ ನಿಲ್ದಾಣವನ್ನು ಮರು ನಿರ್ವಿುಸಲು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ ನಿರ್ಧರಿಸಿತು.ಹೀಗಾಗಿ, ನಗರದ ಮುಂಡರಗಿ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಎಲ್ಲ ಮಾರ್ಗಗಳ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಯಿತು. ಇದೀಗ ನವೀಕೃತ ಹಳೇ ಬಸ್ ನಿಲ್ದಾಣ ಉದ್ಘಾಟಿಸಿದ ನಂತರ ಯಾವ ನಿಲ್ದಾಣದಿಂದ ಬಸ್ಗಳನ್ನು ಓಡಿಸಬೇಕು ಎಂಬ ಜಿಜ್ಞಾಸೆ ಶುರುವಾಗಿದೆ. ನವೀಕೃತ ಬಸ್ ನಿಲ್ದಾಣವನ್ನು ಸಿಟಿ ಬಸ್ ನಿಲ್ದಾಣವನ್ನಾಗಿ ಮಾಡಿ ಅವಳಿ ನಗರದ ಒಳಗೆ ಬಸ್ ಓಡಿಸುವ ಚಿಂತನೆಯೂ ಇದೆ. ವಾಯವ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಈ ಕುರಿತು ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಉದ್ಘಾಟನೆಯಾದರೂ ಇದರ ಬಳಕೆ ತಕ್ಷಣವೇ ಆಗುವುದೋ ಇಲ್ಲವೊ? ನವೀಕರಣಕ್ಕಾಗಿ ವ್ಯಯಿಸಿದ 5 ಕೋಟಿ ರೂಪಾಯಿ ಸಾರ್ವಜನಿಕ ಹಣ ಪೋಲಾಗುವುದೋ? ಯಾವ ರೀತಿ ಬಳಕೆ ಮಾಡಿಕೊಳ್ಳಬೇಕೆಂಬ ಯೋಜನೆ ರೂಪಿಸದೆ ಇಷ್ಟೊಂದು ಹಣವನ್ನು ವ್ಯಯಿಸಿದ್ದ ಯಾಕೆ? ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.